ಹುಬ್ಬಳ್ಳಿ: ಕಳಸಾ-ಬಂಡೂರಿ ವಿಚಾರವಾಗಿ ಸದ್ಯ ಪ್ರಧಾನಮಂತ್ರಿ ಬಳಿ ನಿಯೋಗ ಕೊಂಡೊಯ್ಯುವ ವಿಚಾರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶನಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವಂತೆ ನ್ಯಾಯಾಧಿಕರಣ ತಿಳಿಸಿದೆ.
ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಕರೆದ ಸಭೆಗೆ ಗೋವಾ ಸಿಎಂ ಬರಲಿಲ್ಲ. ಆದ್ದರಿಂದ ಸಭೆ ನಡೆಯಲಿಲ್ಲ. ಮತ್ತೆ ಮಹಾರಾಷ್ಟ್ರ-ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ರಾಜ್ಯದಲ್ಲಿ ಸಭೆ ನಡೆಸುವುದಕ್ಕೂ ಸಿದ್ಧ ಎಂದು ತಿಳಿಸಿದ್ದೇನೆ. ಆದರೆ, ಅವರಿಂದ ಇನ್ನೂ ಉತ್ತರ ಬಂದಿಲ್ಲ. ಈ ಬಾರಿಯೂ ಗೋವಾ ಮುಖ್ಯಮಂತ್ರಿ ಸಭೆಗೆ ಬರುತ್ತಾರೋ ಇಲ್ಲವೋ ಖಾತ್ರಿಯಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಮನಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಕಳಸಾ-ಬಂಡೂರಿ ಸಮಸ್ಯೆ ಇತ್ಯರ್ಥಗೊಳ್ಳಲಿದೆ. 3 ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಮೋದಿ ಮಾತುಕತೆ ನಡೆಸದಿದ್ದರೆ ಸಮಸ್ಯೆ ಬಗೆಹರಿಯುವುದು ಕಷ್ಟ. ಹಿಂದೆ ಅಂತಾರಾಜ್ಯ ಜಲ ವಿವಾದಗಳು ತಲೆದೋರಿದಾಗ ಅಂದಿನ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವಗಾಂಧಿ, ವಾಜಪೇಯಿ ಹಾಗೂ ಎಚ್.ಡಿ.ದೇವೇಗೌಡರು ಮಧ್ಯಸ್ಥಿಕೆ ವಹಿಸಿ ಬಗೆಹರಿಸಿದ ಉದಾಹರಣೆಗಳಿವೆ. ಆದರೆ, ಮೋದಿ ಮಧ್ಯಸ್ಥಿಕೆ ವಹಿಸುತ್ತಿಲ್ಲ. ಮೋದಿ ಇದನ್ನು ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದರು.
ಮಹದಾಯಿ ಜಲ ವಿವಾದ ಬಗೆಹರಿಸಲು ಬಿಜೆಪಿಗೆ ಮನಸ್ಸಿಲ್ಲ
ಗದಗ: ಮಹದಾಯಿ ವಿಚಾರವಾಗಿ ಚೆಲ್ಲಾಟವಾಡುತ್ತಿರುವ ಬಿಜೆಪಿ ವಿರುದ್ಧ ಉತ್ತರ ಕರ್ನಾಟಕದ ಜನರು ಹೋರಾಟ ನಡೆಸುವ ದಿನಗಳು ದೂರವಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ ಎಚ್ಚರಿಸಿದರು.
ರೋಣ ತಾಲೂಕಿನ ಇಟಗಿ ಗ್ರಾಮದ ಭೀಮಾಂಬಿಕಾ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಮಹದಾಯಿ ವಿವಾದ ಬಗೆಹರಿಸುವುದು ದೊಡ್ಡ ಕೆಲಸವೇನಲ್ಲ. ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಬಿಜೆಪಿಯೇ ಆಡಳಿತದಲ್ಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡಿದರೆ ಒಂದೇ ನಿಮಿಷದಲ್ಲಿ ಬಗೆಹರಿಯುತ್ತದೆ. ಆದರೆ ವಿವಾದವನ್ನು ಬಗೆಹರಿಸಲು ಬಿಜೆಪಿಗೆ ಮನಸ್ಸಿಲ್ಲ ಎಂದು ದೂರಿದರು.
ದಿನದ 6-7 ಗಂಟೆಗಳ ಕಾಲ ರೈತರ ಪಂಪ್‌ಸೆಟ್‌ಗಳಿಗೆ 3 ಫೇಸ್ ವಿದ್ಯುತ್ ಒದಗಿಸುತ್ತಿದ್ದೇವೆ. ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಬೆಳಗ್ಗೆ ಮತ್ತು ಸಂಜೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.