ಚಿತ್ರರಂಗದ ಮಾಯೆಯೇ ಹಾಗೆ ಎಲ್ಲಿದ್ದವನನ್ನು ಎಲ್ಲಿಗೋ ಕರೆತರುತ್ತೆ. ಇದಕ್ಕೆ ಉದಾಹರಣೆ ಮಲ್ಲೇಶ್. ಶಿವಮೊಗ್ಗದ ಅನಂತಪುರದಲ್ಲಿ ಹೋಟೆಲ್ ನಡೆಸುತ್ತಿರುವ ಮಲ್ಲೇಶ್ ಏಡೇಹಳ್ಳಿ ಬಣ್ಣದ ಲೋಕದ ಮೋಹದಿಂದ “ಮಹಾಬಲಿ’ ಎನ್ನುವ ಚಿತ್ರ ಮಾಡಿದ್ದಾರೆ.
ಚಿತ್ರಕ್ಕೆ ಕಥೆ, ಚಿತ್ರಕಥೆ,ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡುವ ಜೊತೆಗೆ “ಮಾಲಸಾಂಭ ಕಂಬೈನ್ಸ್’ ಅಡಿಯಲ್ಲಿ ನಿರ್ಮಾಣವೂ ಮಾಡಿದ್ದಾರೆ. ಚಿತ್ರ ಬಿಡುಗಡೆ ಹಂತ ತಲುಪಿದೆ. ಪ್ರಚಾರದ ಅಂಗವಾಗಿ ಚಿತ್ರತಂಡ ಆಡಿಯೋ ಅನಾವರಣ ಕಾರ್ಯಕ್ರಮ ನಡೆಸಿತು.
ಚಿತ್ರದ ಬಗ್ಗೆ ಮಾತನಾಡಿದ ಮಲ್ಲೇಶ್, “ವ್ಯಾಪಾರದೊಂದಿಗೆ ಏನಾದರೂ ಮಾಡಬೇಕೆಂಬ ತುಡಿತ ಹೆಚ್ಚಾಗಿತ್ತು. ಗೆಳಯ ಆರ್ಯ ಚಿತ್ರರಂಗಕ್ಕೆ ಬರುವಂತೆ ಆಸಕ್ತಿ ಮೂಡಿಸಿದರು. ಅದರ ಪರಿಣಾಮವೇ ಚಿತ್ರ ಬರಲು ಕಾರಣವಾಯಿತು. ಅಪ್ಪಟ್ಟ ಕುಟುಂಬ ಸಮೇತ ನೋಡಬಹುದಾದ ಕಥೆ ಇರಲಿದೆ. ಇಂದಿನ ಪ್ರಪಂಚದಲ್ಲಿ ಮಾನವ ನಿರ್ಮಿಸಿಕೊಂಡ ಜೀವನದ ಮೌಲ್ಯಗಳು ಅಧೋಗತಿಗೆ ಹೋಗುತ್ತಿದೆ. ಆತನಿಗೆ ಅವನದೇ ಆದ ಸೀಮಿತ ಕುಟುಂಬ ಇರುತ್ತದೆ. ಅಂಥ ಒಂದು ಕುಟುಂಬದ ಮೌಲ್ಯವು ಯಾವ ಮಟ್ಟಕ್ಕೆ ಹೋಗುತ್ತಿದೆ, ಅದರ ಅರ್ಥ, ನಿಬಂದನೆ ಬಗ್ಗೆ ಜಾಗೃತಿಯನ್ನು ಮೂಡಿಸುವುದೇ ಚಿತ್ರದ ಸಾರಾಂಶವಾಗಿದೆ’ ಎಂದರು.
ಕಲಾವಿದರುಗಳಾದ ವಾಸುದೇವ್ ಆಚಾಪುರ, ಕುಳ್ಳಯೋಗೀಶ್, ಪುಷ್ಪನಾಯಕ್, ಚೇತನ್ ಶೆಟ್ಟಿ, ಅಕ್ಷರ ಎಲ್ಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಿತ್ರದಲ್ಲಿ ಸೌಪರ್ಣಿಕ, ನೂತನ್, ಯುವರಾಜ್, ಪ್ರವೀಣ್ ರಾಜ್ ಪುತ್ತೂರು, ಪ್ರದೀಪ್ ಮೆಂಥೆಲ್, ಉಮೇಶ್.ಕೆ.ಎಲ್, ಆಚಾರ್ಯರಾಘು ಮುಂತಾದವರ ನಟನೆ ಇದೆ.