ಮುಂಬೈ: ಚುನಾವಣಾ ಫಲಿತಾಂಶ ಘೋಷಣೆಯಾಗಿ ಒಂದು ತಿಂಗಳ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಗುರುವಾರ ತೆರೆ ಬಿದ್ದಿದ್ದು, ಶಿವಸೇನಾದ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಗಾದಿ ಏರುತ್ತಿರುವ 59ರ ಹರೆಯದ ಉದ್ಧವ್ ಠಾಕ್ರೆ ಶಿವಸೇನಾದ ಮೂರನೇ ಮುಖಂಡರಾಗಿದ್ದಾರೆ. ಇದಕ್ಕೂ ಮುನ್ನಾ ಶಿವಸೇನಾದ ಮನೋಹರ್ ಜೋಶಿ ಮತ್ತು ನಾರಾಯಣ ರಾಣೆ ಮುಖ್ಯಮಂತ್ರಿಯಾಗಿದ್ದರು. ಗುರುವಾರ ಸಂಜೆ 6.40ಕ್ಕೆ ಮುಂಬೈನ ಪ್ರತಿಷ್ಠಿತ ಶಿವಾಜಿ ಪಾರ್ಕ್ ನಲ್ಲಿ ಮುಖ್ಯಂತ್ರಿಯಾಗಿ ಉದ್ಧವ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಾರ್ಕ್ ಸುತ್ತಲೂ ಠಾಕ್ರೆ ಸರ್ಕಾರ್ ಎಂಬ ಪೋಸ್ಟರ್ ಗಳನ್ನು ಹಾಕಲಾಗಿದೆ.
ಕಾಂಗ್ರೆಸ್ ಪಕ್ಷದ ಬಾಳಾಸಾಹೇಬ್ ಥೋರಟ್, ನಿತಿನ್ ರಾವತ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉದ್ಧವ್ ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮುಂಬೈನ ಡಬ್ಬವಾಲಾಗಳು ಕೂಡಾ ಭಾಗವಹಿಸಲಿದ್ದಾರೆ. ಬಾಲಿವುಡ್ ಸ್ಟಾರ್ ಗಳಾದ ಅಮಿತಾಬ್ ಬಚ್ಚನ್, ಅಮೀರ್ ಖಾನ್, ಮಾಧುರಿ ದೀಕ್ಷಿತ್, ಆಶಾ ಬೋಂಸ್ಲೆ, ರಾಜ್ ಠಾಕ್ರೆ ಸೇರಿದಂತೆ ಘಟಾನುಘಟಿಗಳಿಗೆ ಆಹ್ವಾನ ನೀಡಲಾಗಿದೆ.
ಮೈತ್ರಿ ಪಕ್ಷದ ಸಾಮಾನ್ಯ ಕನಿಷ್ಠ ಯೋಜನೆ ಘೋಷಣೆ:*ಆಕಸ್ಮಿಕ ಮಳೆ ಹಾಗೂ ಪ್ರವಾಹದಿಂದ ನಷ್ಟ ಅನುಭವಿಸಿರುವ ರೈತರಿಗೆ ತಕ್ಷಣವೇ ನೆರವು ನೀಡಲಾಗುವುದು
*ಕೂಡಲೇ ರೈತರಲ ಮನ್ನಾ ಮಾಡಲಾಗುವುದು
*ಬೆಳೆ ವಿಮೆ ಯೋಜನೆಯನ್ನು ಪರಿಷ್ಕರಿಸಲಾಗುವುದು
*ರೈತರ ತೋಟದ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡಲು ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ