ಲಂಡನ್: ಸ್ಪೇನ್‌ನ ಗಾರ್ಬಿನ್ ಮುಗುರುಜಾ ಚೊಚ್ಚಲ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಸೆಂಟರ್ ಕೋರ್ಟ್‌ನಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ ಮುಗುರುಜಾ ಕೇವಲ 77 ನಿಮಿಷಗಳ ಹೋರಾಟದಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿದರು.
ಕೂಟದುದ್ದಕ್ಕೂ ಆಕರ್ಷಕ ಆಟವಾಡಿದ ಮುಗುರುಜಾ 7-5, 6-0 ನೇರ ಸೆಟ್‌ಗಳಿಂದ ಜಯಭೇರಿ ಬಾರಿಸಿ ವಿಂಬಲ್ಡನ್ ಪ್ರಶಸ್ತಿ ತಮ್ಮದಾಗಿಸಿ ಕೊಂಡರು. 23ರ ಹರೆಯದ ಮುಗುರುಜಾ ಎರಡು ವರ್ಷಗಳ ಹಿಂದೆ ಚೊಚ್ಚಲ ಬಾರಿ ವಿಂಬಲ್ಡನ್ ಫೈನಲಿಗೇರಿದ ವೇಳೆ ಸೆರೆನಾಗೆ ಶರಣಾಗಿದ್ದರು.
ವಿಂಬಲ್ಡನ್ ಪ್ರಶಸ್ತಿ ಗೆದ್ದ ಸ್ಪೇನ್‌ನ ಎರಡನೇ ಆಟಗಾರ್ತಿ ಎಂಬ ಗೌರವಕ್ಕೆ ಮುಗುರುಜಾ ಪಾತ್ರರಾಗಿ ದ್ದಾರೆ. ಮುಗುರುಜಾ ಅವರ ಕೋಚ್ ಆಗಿರುವ ಕಾಂಚಿಟಾ ಮಾರ್ಟಿನೆಸ್ 1994ರಲ್ಲಿ ಮಾರ್ಟಿನಾ ನವ್ರಾಟಿಲೋವಾ ಅವರನ್ನು ಸೋಲಿಸಿ ವಿಂಬಲ್ಡನ್ ಪ್ರಶಸ್ತಿ ಜಯಿಸಿ ಸ್ಪೇನ್‌ನ ಬಾವುಟವನ್ನು ಮೊದಲ ಬಾರಿ ಹಾರಿಸಿದ್ದರು. ಮುಗುರುಜಾ-ವೀನಸ್ ಅವರ ಈ ಫೈನಲ್ ಹೋರಾಟವನ್ನು ಸ್ಪೇನ್‌ನ ರಾಜ ಜುವಾನ್ ಕಾರ್ಲೋಸ್ ರಾಯಲ್ ಬಾಕ್ಸ್‌ನಲ್ಲಿ ವೀಕ್ಷಿಸಿದ್ದರು.
ವೆನೆಜುವೆಲಾದಲ್ಲಿ ಹುಟ್ಟಿದ್ದ ಮುಗುರುಜಾ ಅವರಿಗಿದು ಎರಡನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. ಅವರು ಕಳೆದ ವರ್ಷ ಫ್ರೆಂಚ್ ಓಪನ್ ಜಯಿಸಿದ್ದರು. ಪ್ಯಾರಿಸ್ ಗೆಲುವಿನ ಬಳಿಕ ಫಾರ್ಮ್ ಕಳೆದುಕೊಂಡಿದ್ದ ಮುಗುರುಜಾ ಅಗ್ರ 10ರ ಒಳಗಿನ ಸ್ಥಾನವನ್ನು ಕೂಡ ಕಳೆದುಕೊಂಡಿದ್ದರು. ಆದರೆ ಈ ವರ್ಷ ಉತ್ತಮ ಆಟದ ಪ್ರದರ್ಶನ ನೀಡುತ್ತ ಬಂದ ಮುಗುರುಜಾ ನೂತನ ರ್‍ಯಾಂಕಿಂಗ್‌ನಲ್ಲಿ ಐದನೇ ರ್‍ಯಾಂಕಿಗೆ ಏರುವ ಸಾಧ್ಯತೆಯಿದೆ. ಅವರು ಒಟ್ಟಾರೆ ಎರಡು ಗ್ರ್ಯಾನ್ ಸ್ಲಾಮ್ ಸಹಿತ ನಾಲ್ಕು ಪ್ರಶಸ್ತಿ ಜಯಿಸಿದ್ದಾರೆ.
ಎಂಟು ವರ್ಷಗಳ ಬಳಿಕ ವಿಂಬಲ್ಡನ್ ಕೂಟದ ಫೈನಲಿಗೇರಿದ್ದ ಐದು ಬಾರಿಯ ಚಾಂಪಿಯನ್ ವೀನಸ್ ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಫೈನಲ್‌ನ ಮೊದಲ ಸೆಟ್‌ನಲ್ಲಿ ಉತ್ತಮ ಹೋರಾಟ ನೀಡಿದ್ದ ವೀನಸ್ ದ್ವಿತೀಯ ಸೆಟ್‌ನಲ್ಲಿ ನೀರಸವಾಗಿ ಆಡಿ ಶರಣಾದರು.
ನಿಜವಾದ ಸೆರೆನಾ ಮಾತು: 2 ವರ್ಷದ ಹಿಂದೆ ಸೆರೆನಾ ವಿರುದ್ಧ ವಿಂಬಲ್ಡನ್ ಫೈನಲ್‌ನಲ್ಲಿ ಮುಗುರುಜಾ ಸೆಣಸಿ ಸೋತಿದ್ದರು. ಆಗ ಅವರನ್ನು ಸಮಾಧಾನಪಡಿಸಿದ್ದ ಸೆರೆನಾ ಮುಂದೊಂದು ದಿನ ನೀನು ವಿಂಬಲ್ಡನ್ ಗೆಲ್ಲುತ್ತೀಯ, ಬೇಸರ ಪಡಬೇಡ ಎಂದಿದ್ದರು. ಇದೀಗ ಸ್ವತಃ ಸೆರೆನಾ ಅಕ್ಕ ವೀನಸ್‌ರನ್ನೇ ಸೋಲಿಸಿ ಮುಗುರುಜಾ ಪ್ರಶಸ್ತಿ ಗೆದ್ದು ಆ ಮಾತನ್ನು ಸತ್ಯ ಮಾಡಿದ್ದಾರೆ.