ನವದೆಹಲಿ : ‘ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು, 1947 ರಲ್ಲಿ ಸಿಕ್ಕಿದ್ದು ಭಿಕ್ಷೆ’ ಎಂದು ನಟಿ ಕಂಗನಾ ರಣಾವತ್ ಅವರು ನೀಡಿದ ಹೇಳಿಕೆಯ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿ ಕಾರಿದ್ದು, ಇಂತಹ ಆಲೋಚನೆ ಹುಚ್ಚುತನವೇ ಅಥವಾ ದೇಶದ್ರೋಹವೇ ಎಂದು ಗುರುವಾರ ಪ್ರಶ್ನಿಸಿದ್ದಾರೆ.
ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಕಂಗನಾ ಅವರು “ಅದು ಸ್ವಾತಂತ್ರ್ಯವಲ್ಲ, ಆದರೆ ‘ಭೀಖ್’ (ಭಿಕ್ಷೆ), ಮತ್ತು ಸ್ವಾತಂತ್ರ್ಯವು 2014 ರಲ್ಲಿ ಬಂದಿತು” ಎಂದಿದ್ದರು.
ಆ ವಿಡಿಯೋ ತುಣುಕನ್ನು ಸಾಮಾಜಕ ತಾಣದಲ್ಲಿ ಪೋಸ್ಟ್ ಮಾಡಿ ಕಂಗನಾರನ್ನು ಕಟುವಾಗಿ ಟೀಕಿಸಿದ ವರುಣ್ ಗಾಂಧಿ, “ಮಹಾತ್ಮಾ ಗಾಂಧಿಯವರ ತ್ಯಾಗವನ್ನು ಕೆಲವರು ಅವಮಾನಿಸುತ್ತಿದ್ದಾರೆ, ಕೆಲವೊಮ್ಮೆ ಅವರ ಹಂತಕರನ್ನು ಗೌರವಿಸುತ್ತಾರೆ, ಮತ್ತು ಈಗ ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ತಿರಸ್ಕಾರ. ನಾನು ಇದನ್ನು ಹುಚ್ಚುತನ ಅಥವಾ ದೇಶದ್ರೋಹ ಎಂದು ಕರೆಯಬೇಕೇ? ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿ ಪಡೆದ ಕಂಗನಾ ರಣಾವತ್ ಅವರು ಈ ಹಿಂದೆ ತಮ್ಮ ಬಲಪಂಥೀಯ ಕಾಮೆಂಟ್‌ಗಳು ಮತ್ತು ವಿರೋಧ ಪಕ್ಷದ ರಾಜಕಾರಣಿಗಳನ್ನು ಗೇಲಿ ಮಾಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು.