Advertisement

ಬದುಕುವ ಕಲೆ ಕರಗತ ಮಾಡಿಸುವುದೇ ಶಿಕ್ಷಣ

01:23 PM Mar 01, 2017 | Team Udayavani |

ದಾವಣಗೆರೆ: ಶಿಕ್ಷಣದಲ್ಲಿ ಅತಿ ಮುಖ್ಯವಾಗಿರುವ ನೈತಿಕ ನೆಲೆಗಟ್ಟು ಕುಸಿದು ಹೋದಲ್ಲಿ ಶಿಕ್ಷಣಕ್ಕೆ ಬೆಲೆಯೇ ಇರುವುದಿಲ್ಲ ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದ್ದಾರೆ. ಮಂಗಳವಾರ ಶಾಮನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸಲು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನ ಹಾಗೂ ಶೈಕ್ಷಣಿಕ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ಪ್ರಸ್ತುತ ಶಿಕ್ಷಣದಲ್ಲಿ ನೈತಿಕತೆಯೇ ಕಾಣೆಯಾಗುತ್ತಿದೆ. 10ನೇ ತರಗತಿ ವಿದ್ಯಾರ್ಥಿಗಳೇ ಸಹಪಾಠಿಯನ್ನು ಇರಿದು ಕೊಲ್ಲುವ ವಾತಾವರಣ ಕಂಡು ಬರುತ್ತಿದೆ. ಮಕ್ಕಳಲ್ಲಿ ಮನೋಸ್ಥೈರ್ಯ, ಮನೋಬಲ, ಆತ್ಮವಿಶ್ವಾಸ ಮೂಡಿಸುವ ನೈತಿಕ ಶಿಕ್ಷಣಕ್ಕೆ ಗಮನ ನೀಡಬೇಕಿದೆ ಎಂದರು. ಜಗತ್ತಿನಲ್ಲಿ ಜ್ಞಾನಕ್ಕಿಂತಲೂ ಅಮೂಲ್ಯ ಆಸ್ತಿ ಇನ್ನೊಂದಿಲ್ಲ. 

ಶಾಲಾ-ಕಾಲೇಜಿನಲ್ಲಿ ಕಲಿತು ಪಡೆಯುವ ಪ್ರಮಾಣಪತ್ರ, ಪದವಿ ನಿಜವಾದ ಜ್ಞಾನ ಅಲ್ಲ. ನಿಜವಾದ ಅರಿವು, ವಿವೇಕ ಸಂಪಾದನೆ, ಬದುಕುವ ಕಲೆಯನ್ನು ಕರಗತ ಮಾಡಿಸುವುದೇ ನಿಜವಾದ ಶಿಕ್ಷಣ. ಪ್ರತಿಯೊಬ್ಬರ ಅಂತರಂಗದಲ್ಲಿರುವ ಅದ್ಬುತ ಶಕ್ತಿ ಗುರುತಿಸಿಕೊಂಡು ನಮ್ಮಿಂದ ಸಾಧ್ಯವೇ ಎಂಬ ನಕರಾತ್ಮಕ ಚಿಂತನೆ ದೂರ ಮಾಡಿ. ನಮ್ಮಿಂದ ಸಾಧ್ಯ ಎಂಬ ಧನಾತ್ಮಕ ಚಿಂತನೆಯ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ತಿಳಿಸಿದರು. 

ಈಗಿನ ವಾತಾವರಣದಲ್ಲಿ ಅವಿದ್ಯಾವಂತರಗಿಂತಲೂ ಮಹಾನ್‌  ಮೇಧಾವಿಗಳೇ ಸಮಾಜಘಾತುಕ ಕೃತ್ಯದಲ್ಲಿ ತೊಡಗುತ್ತಿದ್ದಾರೆ. ಜೀವನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯೇ ಅಂತಿಮ ಅಲ್ಲ. ಅವೆಲ್ಲ ಜೀವನದ ಒಂದು ಭಾಗ. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆ ಎಂದಾಕ್ಷಣ ಭಯ ಬೀಳುವುದು, ಏನೋ ಆಗಿಯೇ ಹೋಯಿತು ಎಂಬ ಆತಂಕ ಪಡುವುದು ಸರಿಯಲ್ಲ. ಫೇಲಾದಾಗ ಆತ್ಮಹತ್ಯೆಯಂತಹ ಘೋರ ಕೃತ್ಯದ ಬಗ್ಗೆ ಆಲೋಚನೆ ಮಾಡುವುದು ಸಹ ಸರಿಯಲ್ಲ.

ಆತ್ಮಹತ್ಯೆ ಮಾಡಿಕೊಂಡಾಕ್ಷಣಕ್ಕೆ ಸಮಸ್ಯೆ ಬಗೆ ಹರಿಯದು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಬರೀ ಪುಸ್ತಕದ ಕೀಟಗಳಂತಾಗಬಾರದು. ಶಿಕ್ಷಣದ ಮೂಲಕ ಬದುಕುವ ಕಲೆ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸ್ಫೂರ್ತಿ, ಪ್ರೇರಣೆ ಪಡೆಯುವಂತಾಗಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು ಒಂದು ತಿಂಗಳ ಕಾಲಾವಕಾಶ ಇದೆ. ಈಗಿನಿಂದಲೇ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅದಕ್ಕೆ ತಕ್ಕಂತೆ ಸತತ ಅಧ್ಯಯನ ಮಾಡಬೇಕು.

Advertisement

ಯಾವುದೇ ಪ್ರಶ್ನೆ ಬಂದರೂ ಉತ್ತರಿಸುತ್ತೇನೆ ಎಂಬ  ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಬೇಕು. ಎಷ್ಟು ಬೇಕೋ ಅಷ್ಟು ಉತ್ತರವನ್ನು ಸುಂದರ, ಸ್ಪುಟವಾಗಿ ಬರೆಯುವ ಮೂಲಕ ಹೆಚ್ಚಿನ ಅಂಕ ಪಡೆಯಬೇಕು ಎಂದು ಶ್ರೀಗಳು ಸಲಹೆ ನೀಡಿದರು. ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮಾತನಾಡಿ, ಪರೀಕ್ಷೆ ಮುನ್ನ ವ್ಯಕ್ತಿತ್ವ ವಿಕಸನ ಆಗುವುದಕ್ಕಿಂತಲೂ ಪ್ರತಿನಿತ್ಯ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳ ಬೇಕು.

ಯಾವುದನ್ನೇ ಆಗಲಿ ಪ್ರಶ್ನಿಸುವ ಮನೋಭಾವ, ಆಲೋಚನೆ ಬೆಳೆಸಿಕೊಳ್ಳುವ ಮೂಲಕ ಪರಿಪೂರ್ಣ ವ್ಯಕ್ತಿಗಳಾಗುವ ನಿಟ್ಟಿನಲ್ಲಿ ಸಾಗಬೇಕು. ಜಾಗೃತಿ ಇರುವ ಕಡೆ ಭಯ ಇರುವುದಿಲ್ಲ ಎಂಬ ಮಾತಿನಂತೆ ಸದಾ ಜಾಗೃತಿಯಿಂದ ಅಧ್ಯಯನ ಮಾಡುವ ಮೂಲಕ ಉತ್ತಮ ಫಲಿತಾಂಶ ಗಳಿಸಬೇಕು ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್‌.ಎಂ. ಪ್ರೇಮಾ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ 25 ಸಾವಿರಕ್ಕೂ ಅಧಿಕ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಕಳೆದ ಸಾಲಿನಲ್ಲಿ ಶೇ. 80 ರಷ್ಟು ಫಲಿತಾಂಶದೊಂದಿಗೆ 17ನೇ ಸ್ಥಾನದಲ್ಲಿದ್ದೆವು.

ಈ ಬಾರಿ 10ನೇ ಸ್ಥಾನದೊಳಗೆ ಬರಬೇಕು ಎಂಬ ದೃಢ ನಿಶ್ಚಯ ಮಾಡಿದ್ದು ಶಿಕ್ಷಕರು, ವಿದ್ಯಾರ್ಥಿಗಳು ಸಹಕರಿಸಬೇಕು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಆರ್‌. ಮುದೇಗೌಡಪ್ಪ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎಚ್‌. ರಾಮಚಂದ್ರಪ್ಪ, ನಗರಪಾಲಿಕೆ ಮಾಜಿ ಸದಸ್ಯ ಸಂಕೋಳ್‌ ಚಂದ್ರಶೇಖರ್‌, ಶಾಮನೂರು ಎಚ್‌.ಆರ್‌. ಲಿಂಗರಾಜ್‌, ಪ್ರೊ. ವೈ. ವೃಷಭೇಂದ್ರಪ್ಪ ಇತರರು ಇದ್ದರು. ನಂದೀಶ್‌ ಬಿ.ಬಿ. ಶೆಟ್ಟರ್‌ ಉಪನ್ಯಾಸ ನೀಡಿದರು. ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next