ಮುದ್ದೇಬಿಹಾಳ: ಮಡಿಕೇಶ್ವರ ಗ್ರಾಪಂ ಉಪಾಧ್ಯಕ್ಷ ಸಂಗನಗೌಡ ಮೇಟಿ ವಿರುದ್ಧ 14 ಸದಸ್ಯರು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ.
ಈ ಕುರಿತು ಶುಕ್ರವಾರ ಗ್ರಾಪಂ ಕಚೇರಿಯಲ್ಲಿ ಉಪ ವಿಭಾಗಾ ಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ ಉಪಸ್ಥಿತಿಯಲ್ಲಿ ವಿಶೇಷ ಸಭೆ ಕರೆಯಲಾಗಿತ್ತು. ಆದರೆ ಈ ಸಭೆಗೆ ಅವಿಶ್ವಾಸ ಮಂಡಿಸಿದ್ದವರು ಸೇರಿದಂತೆ ಯಾವುದೇ ಸದಸ್ಯರು ಹಾಜರಾಗದೇ ಗೈರು ಉಳಿದು ಅಚ್ಚರಿಗೆ ಕಾರಣರಾದರು.
ಬಹು ಹೊತ್ತಿನವರೆಗೆ ಕಾಯ್ದರೂ ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದ ಸದಸ್ಯರು, ಇತರೆ ಸದಸ್ಯರು ಸಭೆಗೆ ಬರದ ಕಾರಣ ಮಾಲಗತ್ತಿ ಅವರು ಕೊರಂ ಭರ್ತಿ ಆಗದ ಕಾರಣ ನೀಡಿ ಸಭೆ ರದ್ದುಪಡಿಸಿ, ಅವಿಶ್ವಾಸವು 2/3ರಷ್ಟು ಅಂದರೆ ಒಟ್ಟು 20 ಸದಸ್ಯರ ಪೈಕಿ 14 ಸದಸ್ಯರು ವಿಶ್ವಾಸ ಗಳಿಸುವಲ್ಲಿ ವಿಫಲವಾಯಿತು ಎಂದು ಘೋಷಿಸಿ ಸ್ಥಳದಿಂದ ನಿರ್ಗಮಿಸಿದರು.
ಇದಕ್ಕೂ ಮೊದಲು ಎಲ್ಲ ಸದಸ್ಯರಿಗೆ ನಿಯಮಾನುಸಾರ ನೋಟಿಸ್ ಕೊಡಲಾಗಿತ್ತು. ಬೆಳಗ್ಗೆ 11ಕ್ಕೆ ಸಭೆ ನಿಗದಿಪಡಿಸಲಾಗಿತ್ತಾದರೂ ಯಾವುದೇ ಸದಸ್ಯರು ಬರದ ಕಾರಣ ಒಂದು ಗಂಟೆ ಹೊತ್ತು ಕಾಯ್ದು ಮಧ್ಯಾಹ್ನ 12ಕ್ಕೆ ಮತ್ತೆ ಸಭೆ ಪ್ರಾರಂಭಿಸಲಾಯಿತು. ಆಗಲೂ ಯಾವೊಬ್ಬ ಸದಸ್ಯರು ಬರಲಿಲ್ಲ. ಕೊಟ್ಟ ಸಮಯ ಮೀರಿದ್ದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದನ್ವಯ ಕೋರಂ ಭರ್ತಿ ಆಗಲಾರದ ಕಾರಣ ಅವಿಶ್ವಾಸ ನಿರ್ಣಯ 2/3ರಷ್ಟು ಮತಗಳಿಂದ ಅಂಗೀಕಾರಗೊಳ್ಳಲಿಲ್ಲ ಎಂದು ಉಪ ವಿಭಾಗಾಧಿಕಾರಿ ಘೋಷಿಸಿದರು.
ಪಿಡಿಒ ಆನಂದ ಹಿರೇಮಠ, ಕಾರ್ಯದರ್ಶಿ ಯಮನೂರಿ ಲಮಾಣಿ, ಎಸಿ ಕಚೇರಿ ಸಿಬ್ಬಂದಿ ರಮೇಶ ಹೊನ್ನಾಳಿ ಪ್ರಕ್ರಿಯೆಗೆ ಸಹಕರಿಸಿದರು. ತಾಳಿಕೋಟೆ ಠಾಣೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
ಅಧ್ಯಕ್ಷೆ ರಾಜೀನಾಮೆ: ಅಧ್ಯಕ್ಷೆ ಪೂಜಾ ಬಿರಾದಾರ, ಉಪಾಧ್ಯಕ್ಷ ಸಂಗನಗೌಡ ಮೇಟಿ ವಿರುದ್ಧ 14 ಸದಸ್ಯರು ಆ.19ರಂದು ಅವಿಶ್ವಾಸ ನಿರ್ಣಯ ಕುರಿತ ಪತ್ರವನ್ನು ಉಪ ವಿಭಾಗಾಧಿಕಾರಿಗೆ ನೀಡಿದ್ದರು. ಅವಿಶ್ವಾಸ ಕುರಿತು ಸೆ.16ರಂದು ವಿಶೇಷ ಸಭೆ ಕರೆದಿರುವ ಕುರಿತು ಎಲ್ಲ 20 ಸದಸ್ಯರಿಗೂ ನೋಟಿಸ್ ಜಾರಿ ಮಾಡಲಾಗಿತ್ತು. ಏತನ್ಮಧ್ಯೆ ಆ.29ರಂದು ಅಧ್ಯಕ್ಷೆ ಪೂಜಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದು ಸೆ.9ರಂದು ಅಂಗೀಕಾರಗೊಂಡಿತ್ತು. ಹೀಗಾಗಿ ಉಪಾಧ್ಯಕ್ಷರ ವಿರುದ್ಧ ಮಾತ್ರ ಅವಿಶ್ವಾಸಕ್ಕೆ ಸಭೆ ನಡೆಸಲಾಗಿತ್ತು.