ಮಡಿಕೇರಿ: ಸಂಪಾಜೆ- ಕಾಟಕೇರಿ ನಡುವಣ 21.6 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಡಾಮರೀ ಕರಣ ಕಾಮಗಾರಿಗೆ ಸಂಸದ ಪ್ರತಾಪ್ ಸಿಂಹ ಸಂಪಾಜೆಯ ಗೇಟ್ ಬಳಿ ಚಾಲನೆ ನೀಡಿದರು.
ಈ ಸಂದರ್ಭ ಅವರು ಮಾತನಾಡಿ,ಸುಮಾರು 14.16 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗು ತ್ತಿದ್ದು, 6 ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಸಂಪಾಜೆಯಿಂದ ಸುಂಟಿಕೊಪ್ಪದ ವರೆಗೆ 21 ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಈಗಾಗಲೇ ಸರಕಾರಕ್ಕೆ ಅಂದಾಜುಪಟ್ಟಿ ಸಲ್ಲಿಸಲಾಗಿದ್ದು, ಅನುಮೋದನೆ ದೊರೆಯ ಬೇಕಿದೆ ಎಂದರು.
ಕುಶಾಲನಗರದಿಂದ ಸಂಪಾಜೆ ಯ ವರೆಗೆ ಅಪಘಾತ ವಲಯ ಗಳನ್ನು ಗುರುತಿಸಲಾಗಿದ್ದು, ಪ್ರಮುಖವಾಗಿ ಬೋಯಿಕೇರಿ ಮತ್ತು ಆನೆಕಾಡು ಬಳಿ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಕೊಡಗು ಜಿಲ್ಲೆಯ ಕುಶಾಲನಗರದಿಂದ ಸಂಪಾಜೆವರೆಗೆ ಹೆದ್ದಾರಿ ಭಾಗದಲ್ಲಿ ಸುಮಾರು 1.3 ಕಿ.ಮೀ. ಮಳೆ ನೀರು ನಿಲ್ಲುವ ಪ್ರದೇಶವನ್ನು ಗುರುತಿಸಲಾಗಿದ್ದು, ಈ ಪ್ರದೇಶವನ್ನು ವಿಸ್ತರಿಸಿ ರಸ್ತೆ ಎತ್ತರಿಸಲಾಗುವುದು. ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಅಂದಾಜು ಪಟ್ಟಿ ಸಲ್ಲಿಸ ಬೇಕಿದೆ ಎಂದು ಅವರು ಹೇಳಿದರು. ಹೆದ್ದಾರಿಯ 2 ಕಡೆ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಜೋಡುಪಾಲ ಬಳಿ ಹೊಸ ಸೇತುವೆ ನಿರ್ಮಿಸಲಾಗುವುದು ಎಂದರು.
2018ರಲ್ಲಿ ಸಂಭವಿಸಿದ ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ 19 ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿತ್ತು. 2019ರಲ್ಲಿಯೂ ಅತಿವೃಷ್ಟಿಯಾದ ಕಾರಣ 21 ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ ಎಂದರು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ, ಬಾಲಚಂದ್ರ ಕಳಗಿ, ಪ್ರಮುಖರಾದ ನಾಗೇಶ್ ಕುಂದಲ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.