ಮಡಿಕೇರಿ: ಕೊಡಗು ಜಿಲ್ಲಾ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಒಂಭತ್ತು ಕಳವು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಮಾಗೋಳ್ಳಿ ಗ್ರಾಮದ ನಿವಾಸಿ ವೀರೇಶ್ ಕುಮಾರ (32) ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ ಕಳವು ಮಾಡಿದ್ದ ಒಂದು ಮೊಬೈಲ್, ಬೆಳ್ಳಿ ಚೆಂಬು ಮತ್ತು ವಾಚ್‌ವೊಂದನ್ನು ವಶಪಡಿಸಿಕೊಳ್ಳಲಾಗಿದೆ.
ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಗರಹಳ್ಳಿ ನಿವಾಸಿ ತಿಮ್ಮಯ್ಯ ಬಿ.ಸಿ. ಅವರ ಕೂರ್ಗ್ ಹಳ್ಳಿ ಎಸ್ಟೇಟ್‌ನಲ್ಲಿನ ಮನೆಗೆ ಇದೇ ಜ. 7ರಂದು ಅಪರಿಚಿತ ವ್ಯಕ್ತಿಗಳು ಬೀಗ ಮುರಿದು ಒಳನುಗ್ಗಿ ಗಾದ್ರೇಜ್‌ನಲ್ಲಿದ್ದ ಬೆಳ್ಳಿ ಚೆಂಬು, ಮೊಬೈಲ್ ಮತ್ತು ವಾಚ್‌ವೊಂದನ್ನು ಕಳವು ಮಾಡಿದ್ದರು. ಈ ಬಗ್ಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕುಶಾಲನಗರ, ವಿರಾಜಪೇಟೆ, ಕುಟ್ಟ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿಯ ಕಳವು ಪ್ರಕರಣಗಳು ದಾಖಲಾಗಿತ್ತು.
ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕರ ರಾಜೇಶ್ ಕೆ. ಅವರ ಮುಂದಾಳತ್ವದಲ್ಲಿ, ಸುಂಟಿಕೊಪ್ಪ ಠಾಣಾ ಎಸ್‌ಐ ಶ್ರೀಧರ್ ಎಂ.ಸಿ., ಸಿಬಂದಿ ಹಾಗೂ ಅಪರಾಧ ಪತ್ತೆ ಸಿಬಂದಿ ತಂಡ ತನಿಖೆಯನ್ನು ತೀವ್ರಗೊಳಿಸಿತ್ತು. ಇದೀಗ ಆರೋಪಿ ವೀರೇಶ್ ಕುಮಾರನನ್ನು ಬಂಧಿಸಲಾಗಿದ್ದು, ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ. ಕಳವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಅಧಿಕಾರಿ ಹಾಗೂ ಸಿಬಂದಿ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾ ಸಿದ್ದಾರೆ.
ಮಾಹಿತಿ ನೀಡಿ
ಮನೆಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ-112 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ. ತಂತ್ರಾಂಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಎಸ್‌ಪಿ ರಾಮರಾಜನ್ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.