Advertisement

ಇಫಿ ಚಿತ್ರೋತ್ಸವ: ದಿನೇಶ್ ಶೆಣೈಯವರ ‘ಮಧ್ಯಂತರ’ನ. 27 ರಂದು ಪ್ರದರ್ಶನ

02:38 PM Nov 20, 2022 | Team Udayavani |

ಪಣಜಿ: ಮಧ್ಯಂತರ! ಒಂದು ಸಿನಿಮಾದ ಪೂರ್ವಾರ್ಧ ಮುಗಿದು ಉತ್ತರಾರ್ಧ ಆರಂಭವಾಗುವ ಮಧ್ಯೆ ಸಿಗುವ ಅಥವಾ ಥಿಯೇಟರ್ ನವರು ಬಿಡುವ ವಿರಾಮದ ಸಮಯ.

Advertisement

ಮಂಗಳೂರಿನ ದಿನೇಶ್ ಶೆಣೈಯವರು ಇದೇ ಹೆಸರಿನ ಒಂದು ಕಥೇತರ ಸಿನಿಮಾ (ನಾನ್ ಫೀಚರ್) ವನ್ನು ರೂಪಿಸಿದ್ದಾರೆ.

ವಿಶೇಷವೆಂದರೆ ಈ ಬಾರಿಯ ಗೋವಾ ಇಫಿ ಚಿತ್ರೋತ್ಸವದ ಭಾರತೀಯ ಸಿನಿಮಾ (ಇಂಡಿಯನ್ ಪನೋರಮಾ ) ವಿಭಾಗದ ಕಥೇತರ ವಿಭಾಗದಲ್ಲಿ ಅಯ್ಕೆಯಾಗಿ ನವೆಂಬರ್ 27 ರಂದು ಪ್ರದರ್ಶನವಾಗುತ್ತಿದೆ.

ಸಿನಿಮಾ ಮಾಧ್ಯಮದ ಮೇಲಿನ ಮೋಹದ ಕುರಿತು ಸಾಕಷ್ಟು ಚಿತ್ರಗಳು ದೇಶ ವಿದೇಶಗಳಲ್ಲಿ ಬಂದಿವೆ. ಸಿನಿಮಾ ಪ್ಯಾರಡಿಸೋದಿಂದ ಹಿಡಿದು ಇತ್ತೀಚಿನ ಗುಜರಾತಿ ಭಾಷೆಯ ಚಲ್ಲೋ ಶೋ ದವರಗೂ ಹಲವು ಸಿನಿಮಾಗಳು ಬಿತ್ತರಿಸಿರುವುದು ಸಿನಿಮಾ ಮಾಧ್ಯಮದ ಪ್ರಭಾವ ಮತ್ತು ಮೇಲಿನ ಪ್ರೀತಿಯನ್ನೇ. ಈ ಅನನ್ಯತೆಯೂ ಸಹ ಚಲನಚಿತ್ರ ಮಾಧ್ಯಮದಲ್ಲಿನ ಚಲನಶೀಲತೆ (ಪ್ರಯೋಗಶೀಲತೆ) ಯನ್ನು ಉಳಿಸಿವೆ ಎನ್ನಬಹುದು.

ಇಂಥದ್ದೇ ಒಂದು ಸಣ್ಣ ಎಳೆಯನ್ನು ಆಧರಿಸಿ ಹೊಸ ಜಗತ್ತನ್ನು ಅದರಲ್ಲೂ ಐದು ದಶಕಗಳ ಹಿಂದಿನ ಜಗತ್ತು ಹಾಗೂ ಸಂವೇದನೆಯನ್ನು ಹಿಡಿದಿಡಲು ಪ್ರಯತ್ನಿಸಿರುವ ಸಿನಿಮಾ ಮಧ್ಯಂತರ. ಇಬ್ಬರು ಹುಡುಗರು ಸಿನಿಮಾ ಮಾಧ್ಯಮದ ಬಗೆಗಿನ ಮೋಹಕ್ಕೆ ಬಿದ್ದು ಒಬ್ಬ ಸಾಮಾನ್ಯ ಪ್ರೇಕ್ಷಕರ ಸ್ಥಾನದಿಂದ ಸಿನಿಮಾಕರ್ತರಾಗುವ ಮಟ್ಟಿಗೆ ಬೆಳೆಯಲು ಯತ್ನಿಸುವುದೇ ಬಹಳ ದೊಡ್ಡದು. ಈ ಮಹಾತ್ವಕಾಂಕ್ಷೆ ಹಾಗೂ ಸಕಾರಾತ್ಮಕವಾದ ಛಲವನ್ನು ಕಡೆದುಕೊಡಲು ಪ್ರಯತ್ನಿಸಿದ್ದಾರೆ ದಿನೇಶ್ ತಮ್ಮ ಕಲಾಕೃತಿಯಲ್ಲಿ.

Advertisement

ಈ ಬಾರಿ ಭಾರತೀಯ ಪನೋರಮಾ ವಿಭಾಗದಡಿ ಮೂರು ಚಿತ್ರಗಳು ಅಯ್ಕೆಯಾಗಿವೆ. ಪೃಥ್ವಿ ಕೊಣನೂರು ಅವರ ಹದಿನೇಳೆಂಟು ಚಿತ್ರ ವಿಭಾಗದ ಉದ್ಘಾಟನಾ ಚಿತ್ರ. ಉಳಿದಂತೆ ನಾನು ಕುಸುಮ ಹಾಗೂ ಮಧ್ಯಂತರ ಪ್ರದರ್ಶನಗೊಳ್ಳುತ್ತಿರುವ ಇತರೆ ಕನ್ನಡ ಚಿತ್ರಗಳು.

ದಿನೇಶ್ ಶೆಣೈಯವರು ತಮ್ಮ ಸಿನಿಮಾದ ಬಗ್ಗೆ ಕರಪತ್ರದಲ್ಲಿ ವಿವರಿಸಿರುವಂತೆ, “ಇದು ಸಂಪೂರ್ಣ 16 ಎಂ.ಎಂ. ಕೆಮರಾದಲ್ಲಿ ರೂಪಿಸಿರುವ ಚಿತ್ರ. ಆದರ ಸಂಸ್ಕರಣೆಯಿಂದ ಹಿಡಿದು ಎಲ್ಲವನ್ನೂ ಹಳೆಯ ಮಾದರಿಯನ್ನೇ ಆನುಸರಿಸಬೇಕಾಯಿತು. ಇದೊಂದು ವಿಶಿಷ್ಟ ಹಂಬಲದ ಪಯಣ. ಒಟ್ಟು ಐದು ದಶಕಗಳ ಹಿಂದಿನ ಒಂದು ನಡಿಗೆ’.

ಬಹಳ ಮುಖ್ಯವಾಗಿ 70-80 ರ ದಶಕಗಳು ಹಲವು ಕಾರಣಗಳಿಗೆ ಪ್ರಮುಖವಾದವು. ಭಾರತೀಯ ಸಂದರ್ಭದಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಜನರ ಸಂವೇದನೆಯನ್ನು ರೂಪಿಸಿದ ದಶಕಗಳು. ಇಂದಿನ ಅಧುನಿಕ ಸಂದರ್ಭ ಆಥವಾ ತಾಂತ್ರಿಕ ಅವಿಷ್ಕಾರಗಳ ಜಗತ್ತಿನಲ್ಲಿ ಎಲ್ಲವೂ ಕ್ಷಣಾರ್ಧದಲ್ಲಿ ಸಾಧ್ಯವಾಗಿಸುವ ಹಾಗೂ ದಕ್ಕಿಸಿಕೊಳ್ಳುವ ಹೊತ್ತಿನಲ್ಲಿ ಹಳೆಯ ಕಾಲದ ಪಯಣದ ಆನುಭವ ಮತ್ತು ಸುಖ ವಿಭಿನ್ನವಾಗಿ ತೋರಬಹುದು. ಬಹುಶಃ ಅ ಜಾಡನ್ನು ಹಿಡಿಯುವ ಪ್ರಯತ್ನ ಈ ಮಧ್ಯಂತರದಲ್ಲಿದೆ ಎಂಬುದು ದಿನೇಶ್ ಶೆಣೈಯವರು ತಮ್ಮ ಸಿನಿಮಾದ ಬಗ್ಗೆ ನೀಡಲಾದ ಮಾಹಿತಿ ಪುಸ್ತಿಕೆ ವಿವರಿಸುತ್ತದೆ.

ದಿನೇಶ್ ಶೆಣೈಯವರಿಗೆ ಸಿನೆಛಾಯಾಗ್ರಹಣದಲ್ಲಿ ಸುನಿಲ್ ಬೋರ್ಕರ್ ಮತ್ತು ಸಂಕಲನದಲ್ಲಿ ಸುರೇಶ್ ಅರಸ್, ಕಲಾ ನಿರ್ದೇಶನದಲ್ಲಿ ವಿನೋದ್ ರಾಜ್ ಪುತ್ತೂರು ಸಹಕರಿಸಿದ್ದಾರೆ. ನಟ ವರ್ಗದಲ್ಲಿ ಅಜಯ್ ನೀನಾಸಂ, ರಮೇಶ್ ಪಂಡಿತ್, ಗಣೇಶ್ ಶೆಣೈ, ರಾಜಕುಮಾರ್ ಶ್ರೀನಿವಾಸನ್, ಶಿವು ನೀನಾಸಂ ಹಾಗೂ ಚಂದ್ರ ಮೋಹನ್ ಮತ್ತಿತರರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next