Advertisement

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

11:50 AM Apr 18, 2024 | Team Udayavani |

ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರಧಾನವಾಗಿರುವ ರಾಜ್ಯವೇ ಮಧ್ಯಪ್ರದೇಶ. ಬರೋಬ್ಬರಿ 2003ರಿಂದ 2018ರವರೆಗೆ, 2020 ಮಾ.3ರಿಂದ ಮತ್ತೆ ಬಿಜೆಪಿ ಆಡಳಿತವೇ ಇದೆ. ಹೀಗಾಗಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಹೆಚ್ಚಿನ ಸ್ಥಾನ ಸಿಗಲಿದೆ ಎನ್ನುವುದು ಕುತೂಹಲ ಕಾರಿಯಾಗಿರುವ ಅಂಶವೇ ಆಗಿದೆ. 2023ರ ಡಿಸೆಂಬರ್‌ನಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯನ್ನೂ ಮೀರಿಸಿ ಬಿಜೆಪಿಯೇ 230 ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಉಳಿಸಿಕೊಂಡು ದಾಖಲೆಯನ್ನೇ ನಿರ್ಮಿಸಿದೆ.

Advertisement

ಸಾಮಾನ್ಯವಾಗಿ ಆಯಾ ರಾಜ್ಯದಲ್ಲಿ ಇರುವ ಪಕ್ಷದ ಅಭ್ಯರ್ಥಿಗಳನ್ನೇ ಲೋಕಸಭೆ ಚುನಾವಣೆಯಲ್ಲಿ ಜನರು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಇರುತ್ತದೆ. ಮಧ್ಯಪ್ರದೇಶ ವಿಚಾರಕ್ಕೆ ಬಂದರೆ ಆ ಅಂಶ ನಿಜವೂ ಆಗಿದೆ. 2014ರ ಲೋಕ ಸಭೆ ಚುನಾವಣೆಯಲ್ಲಿ ಒಟ್ಟು 29 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆದ್ದಿದೆ. ಛಿಂದ್ವಾರಾ ಕ್ಷೇತ್ರದಿಂದ ಮಾಜಿ ಸಿಎಂ
ಕಮಲ್‌ನಾಥ್‌, ಗುಣಾದಿಂದ ಆಗ ಕಾಂಗ್ರೆಸ್‌ನಲ್ಲಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಗೆದ್ದಿದ್ದರು. 2019ರ ಚುನಾವಣೆಯಲ್ಲಿ ಛಿಂದ್ವಾರಾ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿ ಹುರಿಯಾಳುಗಳೇ ಗೆದ್ದಿದ್ದಾರೆ.

ಗುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಕೆ.ಪಿ.ಯಾದವ್‌ ಆಗ ಕಾಂಗ್ರೆಸ್‌ನಲ್ಲಿದ್ದ ಜ್ಯೋತಿರಾಧಿತ್ಯ ಸಿಂಧಿಯಾರನ್ನು ಸೋಲಿಸಿದ್ದರು. ಲೋಕಸಭೆ ಚುನಾವಣೆ ಘೋಷಣೆಯಾಗುವುದಕ್ಕಿಂತ ಮೊದಲು ಪ್ರಕಟವಾಗಿರುವ ಕೆಲವು ಸುದ್ದಿ ವಾಹಿನಿಗಳ ಸಮೀಕ್ಷೆ ಪ್ರಕಾರ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 29 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಗಳಿಸುವ ಸಾಧ್ಯತೆಗಳಿವೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ.35.8 ಮತ ಪ್ರಾಪ್ತಿಯಾಗಿದ್ದರೆ, ಬಿಜೆಪಿಗೆ ಅದ್ಧೂರಿ ಎಂಬಂತೆ ಶೇ.61.2 ಮತಗಳು ಬಗಲಿಗೆ ಬಿದ್ದಿವೆ.

ಕಮಲ್‌ನಾಥ್‌ ಪ್ರಭಾವ: ಒಂದು ಹಂತದಲ್ಲಿ ಮಾಜಿ ಸಿಎಂ ಕಮಲ್‌ನಾಥ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ಅಂಶ ದೇಶಾದ್ಯಂತ ಕುತೂಹಲಕ್ಕೆ ಕಾರಣ ವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಹಲವು ವ್ಯಾಖ್ಯಾನಗಳೂ ಮಾಧ್ಯಮಗಳಲ್ಲಿ ಪ್ರಕಟವಾದವು. ನಂತರ ಕಮಲ್‌ನಾಥ್‌
ಅವರೇ ಅದನ್ನು ತಿಳಿಸಿಗೊಳಿಸಿದರು.

Advertisement

ಕಾಂಗ್ರೆಸ್‌ ವರ್ಸಸ್‌ ಬಿಜೆಪಿ: ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್‌ ಇಂಡಿಯಾ ಒಕ್ಕೂಟದ ಪಾಲುದಾರ ಪಕ್ಷಗಳಿಗಾಗಲಿ, ಬಿಜೆಪಿ ಎನ್‌ಡಿಎಯ ಮಿತ್ರಪಕ್ಷಗಳಿಗಾಗಲಿ ಸ್ಥಾನ ಬಿಟ್ಟುಕೊಡ
ಬೇಕಾಗಿರುವ ಅನಿವಾರ್ಯ ಸ್ಥಿತಿ 2 ಪಕ್ಷಗಳಿಗೂ ಇಲ್ಲ.

ಪ್ರಮುಖ ವಿಚಾರಗಳು: ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಬೆಳಕಿಗೆ ಬಂದ ವ್ಯಾಪಂ, ಭ್ರಷ್ಟಾಚಾರ
ಪ್ರಕರಣಗಳನ್ನು ಕಾಂಗ್ರೆಸ್‌ ನಾಯಕರು ಪ್ರಚಾರ ವೇಳೆ ಮಂಡಿಸುತ್ತಿದ್ದಾರೆ. ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಪದೇ ಪದೆ “ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ‌ ಜಾತಿ ಗಣತಿ ನಡೆಸುತ್ತೇವೆ’ ವಾಗ್ಧಾನ ಮಾಡುತ್ತಿದ್ದಾರೆ. ಈ ಅಂಶ ಒಂದು ಹಂತಕ್ಕೆ ಪ್ರಭಾವ ಬೀರಬಹುದು. ರಾಜ್ಯದಲ್ಲಿನ ರೈತರು ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಕಡಿಮೆ ದರದಲ್ಲಿ ರಸಗೊಬ್ಬರ ಸಿಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದಾರೆ. ಕಾಂಗ್ರೆಸ್‌ ಕರ್ನಾಟಕ ಮಾದರಿಯ ಘೋಷಣೆಗಳನ್ನು ಜಾರಿ ಮಾಡುವ ಘೋಷಣೆ ಮಾಡಿದ್ದರೆ, ಬಿಜೆಪಿ ಪ್ರಧಾನಿಯವರ ಗ್ಯಾರಂಟಿಯನ್ನು ನೆಚ್ಚಿಕೊಂಡಿದೆ.

ಮಧ್ಯಪ್ರದೇಶದಲ್ಲಿನ ನಿರುದ್ಯೋಗ ಸಮಸ್ಯೆಯೂ ಚುನಾವಣಾ ವಿಚಾರವಾಗಿದೆ. ದಲಿತರು, ಬುಡಕಟ್ಟು ಸಮುದಾಯದವರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಪ್ರಕರಣಗಳೂ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ.

ಜಾತಿ ಲೆಕ್ಕಾಚಾರ: 2011ರ ಜನಸಂಖ್ಯೆಯ ಪ್ರಕಾರ ಮಧ್ಯಪ್ರದೇಶದ ಒಟ್ಟು ಜನಸಂಖ್ಯೆ 7.27 ಕೋಟಿ. ಈ ಪೈಕಿ ಹಿಂದೂ ಸಮುದಾಯದ ಪ್ರಮಾಣ ಶೇ.91, ಮುಸ್ಲಿಂ ಸಮುದಾಯ ಶೇ.7, ಒಬಿಸಿ ಶೇ.42, ಎಸ್‌ಸಿ ಶೇ.15.2, ಎಸ್‌ಟಿ ಶೇ.21.9, ಇತರ ಸಾಮಾನ್ಯ ಜಾತಿಗಳ ಪ್ರಮಾಣ ಶೇ.20. ಹೀಗಾಗಿ, ಅಭ್ಯರ್ಥಿಗಳ ಆಯ್ಕೆಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಈ ಸಮೀಕರಣವನ್ನು ಮುಂದಿಟ್ಟು ಕೊಂಡೇ ಅಭ್ಯರ್ಥಿಗಳ ಆಯ್ಕೆ ಮಾಡಿದೆ ಎನ್ನುವುದು ಸ್ಪಷ್ಟ. ಇನ್ನು ಆಡಳಿತಾರೂಢ ಬಿಜೆಪಿಯಂತೂ 12 ಕ್ಷೇತ್ರಗಳಲ್ಲಿ ವಿವಿಧ ಕಾರಣಗಳಿಗಾಗಿ ಹೊಸಬರಿಗೆ ಟಿಕೆಟ್‌ ನೀಡಿದೆ.

ಕೌಟುಂಬಿಕ ರಾಜಕಾರಣವೂ ಇದೆ: ಈ ರಾಜ್ಯದಲ್ಲಿ ಜಾತಿ ರಾಜಕಾರಣದ ಜತೆಗೆ ಕೌಟುಂಬಿಕ ರಾಜಕಾರಣವೂ ಇದೆ.
ಪ್ರಸಕ್ತ ಚುನಾವಣೆಯಲ್ಲಿ ಒಟ್ಟು 15 ಅಭ್ಯರ್ಥಿಗಳು ರಾಜಕೀಯ ಹಿನ್ನೆಲೆ ಇರುವವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ
ಪ್ರಮುಖರಾದವರೆಂದರೆ ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್‌ನಾಥ್‌ ಪುತ್ರ ನಕುಲ್‌ನಾಥ್‌, ಗುಣಾದಿಂದ ಕಣಕ್ಕೆ ಇಳಿದಿರುವ ಜ್ಯೋತಿರಾಧಿತ್ಯ ಸಿಂಧಿಯಾ, ದಿಗ್ವಿಜಯ ಸಿಂಗ್‌, ಕಮಲೇಶ್ವರ ಪಟೇಲ್‌, ಗುಡ್ಡು ರಾಜಾ ಬುಂದೇಲಾ, ಅರುಣ್‌ ಶ್ರೀವಾಸ್ತವ. ಮಧ್ಯಪ್ರದೇಶಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ಹಿನ್ನೆಲೆ ಇರುವ ನಾಯಕರ ಪೈಕಿ ಬಿಜೆಪಿ ವತಿಯಿಂದ 3 ಮಂದಿ ಇದ್ದರೆ, ಕಾಂಗ್ರೆಸ್‌ ವತಿಯಿಂದ 12 ಮಂದಿ ಇದ್ದಾರೆ!

*ಸದಾಶಿವ ಕೆ

Advertisement

Udayavani is now on Telegram. Click here to join our channel and stay updated with the latest news.

Next