Advertisement

ಕೈ-ಬಿಜೆಪಿಗೆ ಮಧ್ಯಪ್ರದೇಶ ಸವಾಲು

06:00 AM Nov 27, 2018 | Team Udayavani |

ಇದುವರೆಗೆ ಹಿಂದುತ್ವ ಮತ್ತು ಅದಕ್ಕೆ ಸಂಬಂಧಿ ವಿಚಾರಗಳನ್ನು ತಪ್ಪಿಯೂ ಆಡದಿದ್ದ ಕಾಂಗ್ರೆಸ್‌ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಗೋವು, ರಾಮ, ದೇಗುಲ ವಿಚಾರಗಳನ್ನು ಪ್ರಸ್ತಾಪಿಸಿದೆ. ಕಾಂಗ್ರೆಸ್‌ ರಾಮ ವನ ಗಮನ ಪಥ, ಗೋಮೂತ್ರ ಉತ್ಪಾದನೆ, ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಗೋ ಶಾಲೆ ಸ್ಥಾಪಿಸುವ ಮಾತುಗಳನ್ನಾಡಿದೆ.

Advertisement

ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಮ್ಮ ದೇಶದ ಇತಿಹಾಸದಲ್ಲಿಯೇ ಅತ್ಯಂತ ತುರುಸಿನ ಚುನಾವಣೆ ಎನ್ನಬಹುದು. ಮುಂದಿನ ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ ಎಂದೇ ಪರಿಗಣಿತವಾಗಿದೆ ಈ ಫ‌ಲಿತಾಂಶ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಳ್ಳಬೇಕಾದರೆ ಇಲ್ಲಿ ಅಧಿಕಾರ ಉಳಿಸಿಕೊಳ್ಳಲೇಬೇಕು. 1956 ನ.1 ರಂದು ಮಧ್ಯಪ್ರದೇಶದಲ್ಲಿ ರವಿಶಂಕರ ಶುಕ್ಲಾ ನೇತೃತ್ವದಲ್ಲಿ ಮೊದಲ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆದರೆ ಅದು ಬಾಳುವಿಕೆ ನಡೆಸಿದ್ದು ಕೇವಲ ಅರವತ್ತು ದಿನ ಮಾತ್ರ. ಅಂದರೆ 1956 ಡಿ.31ರವರೆಗೆ ಮಾತ್ರ ಶುಕ್ಲಾ ಮುಖ್ಯಮಂತ್ರಿಯಾಗಿದ್ದರು. ನಂತರ 1957ರ ಜ.31ರಿಂದ 1963 ಮಾ.11ರ ವರೆಗೆ ಅಂದರೆ ಐದು ವರ್ಷ 39 ದಿನಗಳ ಕಾಲ ಕೈಲಾಸನಾಥ ಕಾಟುj ಮೊದಲ ಬಾರಿಗೆ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿದ್ದರು. ನಂತರ ಬಂದ ಸರ್ಕಾರಗಳೆಲ್ಲ ಸರಿ ಸುಮಾರು ಪೂರ್ಣಾವಧಿಗೆ ಇದ್ದರೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು 1, 2, 3 ವರ್ಷಕ್ಕೆ ಹುದ್ದೆ ತ್ಯಜಿಸಿದವರೇ ಹೆಚ್ಚು. ಅದಕ್ಕೆ ಪೂರ್ಣ ವಿರಾಮ ಹಾಕಿದ್ದು ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌. ಅವರು 1993 ಡಿ.7 ರಿಂದ 2003 ಡಿ.7ರ ತನಕ, ಅಂದರೆ, ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದವರು. 

ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ 2003-2005ರವರೆಗೆ ಉಮಾ ಭಾರತಿ, ಬಾಬುಲಾಲ್‌ ಗೌರ್‌ ಮುಖ್ಯಮಂತ್ರಿಗಳಾಗಿದ್ದರು. 2005 ನ.29ರಿಂದ ಇಲ್ಲಿನವರೆಗೆ ಬರೋಬ್ಬರಿ 12 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುವವರು ಶಿವರಾಜ್‌ ಸಿಂಗ್‌ ಚೌಹಾಣ್‌. ಹೀಗಾಗಿ, ಅವರ ನೇತೃತ್ವದ ಸರ್ಕಾರ ಬಿಜೆಪಿಗೂ ಭದ್ರತೆಯ ನೆರಳನ್ನು ನೀಡಿದೆ. ಎಲ್ಲದರ ಜತೆಗೆ ಸರಿ ಸುಮಾರು ಉತ್ತಮ ರೀತಿಯಲ್ಲಿಯೇ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. 

2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ಕಲ್ಯಾಣ ಕಾರ್ಯಕ್ರಮಗಳು ಜಾರಿಯಾಗಿವೆ. ಆರೋಪಗಳು ಇಲ್ಲವೆಂದಲ್ಲ. ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ ಎನ್ನುವುದು ಚೌಹಾಣ್‌ ಜಾರಿಗೊಳಿಸಿದ ಅತ್ಯುತ್ತಮ ಅಭಿವೃದ್ಧಿ ಕಾರ್ಯಕ್ರಮಗಳ ಕಂಪನ್ನು ನುಂಗಿ ಹಾಕುವಷ್ಟು ಬೆಳೆಯಿತು. ಅವೆಲ್ಲದರ ಜತೆಗೆ ಪ್ರದೇಶ ಕಾಂಗ್ರೆಸ್‌ ಸಮಿತಿಯಲ್ಲಿ ಪ್ರಬಲ ನಾಯಕತ್ವ ಇಲ್ಲದಿರುವುದೂ ಚವಾಣ್‌ಗೆ ವರದಾನವಾಯಿತು ಎನ್ನುವುದು ಉಲ್ಲೇಖನೀಯ ಅಂಶ. ಹಲವು ರೀತಿಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್‌ ಸೋಲಿಸಲು ಮುಂದಾಗಿದ್ದರೂ ಅದು ಫ‌ಲ ನೀಡಿಲ್ಲ. 

ಬರೋಬ್ಬರಿ 15 ವರ್ಷ ಬಿಜೆಪಿ ಸರ್ಕಾರದ ಆಡಳಿತ. ಈ ಪೈಕಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರದ್ದೇ 12 ವರ್ಷ.  ಮಧ್ಯಪ್ರದೇಶವನ್ನು ಇದುವರೆಗೆ ಅತ್ಯಂತ ಹೆಚ್ಚಿನ ಅವಧಿಗೆ ಆಡಳಿತ ನಡೆಸಿದ ಮೂರನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರದ್ದು. ಇದರ ಹೊರತಾಗಿಯೂ ಆಡಳಿತ ವಿರೋಧಿ ಅಲೆ ಎನ್ನುವುದು ನೆರವಾಗಲಿದೆ ಎನ್ನುವುದು ಕಾಂಗ್ರೆಸ್‌ ನಾಯಕರ ವಾದ. ಹಲವರು ಅತೃಪ್ತಿ ವ್ಯಕ್ತಪಡಿಸಿದರೂ ಬಿಜೆಪಿ ನೇತೃತ್ವದ ಸರ್ಕಾರವೇ ಮುಂದುವರಿಯಲಿ ಎನ್ನುವುದು ಹಲವು ಮಂದಿಯ ಆಶಯ. 

Advertisement

ರೈತರ ಸಮಸ್ಯೆ ಸರ್ಕಾರಕ್ಕೆ ಸವಾಲಾಗಿರುವ ವಿಚಾರ. 2017ರಲ್ಲಿ ಮಂದಸೌರ್‌ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗುಂಡು ಹಾರಿಸಿದ್ದರಿಂದ ಆರು ಮಂದಿ ಅಸುನೀಗಿದ್ದರು. ಆ ವಿಷಯ ಇನ್ನೂ ಸ್ಥಳೀಯರಲ್ಲಿ ಮನವನ್ನು ಕೊರೆಯುತ್ತಲೇ ಇದೆ. ಸೋಯಾ ಬೀನ್‌, ಈರುಳ್ಳಿ ಸೇರಿದಂತೆ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಸ್ಪಂದಿಸಿಲ್ಲ ಎಂಬ ದೂರುಗಳು ಪ್ರಬಲವಾಗಿಯೇ ಇವೆ. ಹೀಗಾಗಿಯೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ “ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ. ಒಂದು ವೇಳೆ ಆ ರೀತಿ ನಿರ್ಧಾರ ಕೈಗೊಳ್ಳದೇ ಇದ್ದರೆ ಮುಖ್ಯಮಂತ್ರಿಯನ್ನೇ ಬದಲಾಯಿಸುತ್ತೇವೆ’ ಎಂದು ಘಂಟಾಘೋಷವಾಗಿ ಹೇಳಿದ್ದರು. 

ಮಧ್ಯಪ್ರದೇಶ ಸರ್ಕಾರವೇ 2016ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ 1.12 ಮಿಲಿಯನ್‌ ನೋಂದಾಯಿತ ಪದವೀಧರರು ಅಲ್ಲಿ ಕೆಲಸಕ್ಕಾಗಿ ಕಾಯುತ್ತಿದ್ದಾರೆ. ಈ ಪೈಕಿ 2017ರ ಮುಕ್ತಾಯಕ್ಕೆ 422 ಮಂದಿಗೆ ಮಾತ್ರ ಉದ್ಯೋಗ ಸಿಕ್ಕಿದೆ. 

ಇದರ ಜತೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರದ (ಎನ್‌ಸಿಆರ್‌ಬಿ) ಮಾಹಿತಿ ಪ್ರಕಾರ ಮಧ್ಯಪ್ರದೇಶದಲ್ಲಿ ಪರಿಶಿಷ್ಟ ಜಾತಿ (ಎಸ್‌ಟಿ) ಗೆ ಸೇರಿದವರಿಗೆ ಕಿರುಕುಳ ನೀಡಿದ ದೇಶದಲ್ಲಿಯೇ ಅತ್ಯಂತ ಹೆಚ್ಚು 1,823 ಪ್ರಕರಣಗಳು ವರದಿಯಾಗಿವೆ. ಅಂದರೆ ಶೇ.27ರಷ್ಟು. ರಾಜಸ್ಥಾನದಲ್ಲಿ 1,195 ಪ್ರಕರಣಗಳು ವರದಿಯಾ ಗುವ ಮೂಲಕ ಶೇ.18.2ರಷ್ಟು ಆಗಿವೆ. 2016ರಲ್ಲಿ ಒಂದರಲ್ಲೇ ಮಧ್ಯಪ್ರದೇಶದಲ್ಲಿ 4,882 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 

ಇನ್ನು ಎಲ್ಲಾ ಜಿಲ್ಲೆಗಳಲ್ಲಿ ಹಾಲಿ ಶಾಸಕರ ವಿರುದ್ಧ ಜನರು ಅಸಮಾಧಾನ  ತೋಡಿಕೊಳ್ಳುತ್ತಿದ್ದಾರೆ. ಆದರೆ ಸಿಎಂ ಆಗಿ ಶಿವರಾಜ್‌ ಸಿಂಗ್‌ ಚೌಹಾಣ್‌ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂಬ ಮೆಚ್ಚುಗೆ ವ್ಯಕ್ತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣ, ವಿದ್ಯುತ್‌ ಪೂರೈಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಸುಧಾರಣೆಯಾಗಿರುವುದು ಮುಖ್ಯಮಂತ್ರಿಗೆ ಅನುಕೂಲವಾಗಿಯೇ ಪರಿಣಮಿಸಲಿದೆ. ಬಿಜೆಪಿಯ ಹಾಲಿ ಶಾಸಕರ ವಿರುದ್ಧ ಪ್ರಬಲವಾಗಿಯೇ ಆರೋಪ ಕೇಳಿ ಬಂದಿದ್ದರಿಂದ ಪಕ್ಷದ ಅಧ್ಯಕ್ಷ ಅಮಿತ್‌ ಶಾ 120 ಮಂದಿ ಹೊಸಬರಿಗೆ ಅವಕಾಶ ನೀಡುವುದಾಗಿ ಹೇಳಿಕೊಂಡಿದ್ದರು. ಇದರ ಹೊರತಾಗಿಯೂ ಎಲ್ಲಾ ಕ್ಷೇತ್ರಗಳಲ್ಲಿ ಹೊಸಬರನ್ನು ಕಣಕ್ಕೆ ಇಳಿಸದೇ ಇದ್ದರೂ, ಹಲವರನ್ನು ಕೈಬಿಡಲಾಗಿದೆ.

ಈ ಎಲ್ಲಾ ಪ್ರತಿಕೂಲಗಳ ಹೊರತಾಗಿಯೂ ಬಿಜೆಪಿಗೆ ನಾಲ್ಕನೇ ಬಾರಿಗೆ ಅಧಿಕಾರ ನೀಡುವ ಬಗ್ಗೆ ಮಧ್ಯಪ್ರದೇಶ ಮತದಾರ ಮುಂದಾಗಿದ್ದಾನೆ ಎನ್ನಲಾಗುತ್ತಿದೆ. 1993ರಿಂದ 2003ರ ವರೆಗೆ ದಿಗ್ವಿಜಯ ಸಿಂಗ್‌ ಮುಖ್ಯಮಂತ್ರಿಯಾಗಿದ್ದ ಅವಧಿಗೂ ಹಾಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ರ ಆಡಳಿತಕ್ಕೂ ಹೋಲಿಕೆ ಮಾಡುವ ಹಲವರು ಹಾಲಿ ಮುಖ್ಯಮಂತ್ರಿಯೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಅದಕ್ಕೆ ಪೂರಕವಾಗಿಯೇ ಟೈಮ್ಸ್‌ ನೌ ಮತ್ತು ನ್ಯೂಸ್‌ ಎಕ್ಸ್‌ ಸುದ್ದಿವಾಹಿನಿಗಳು ನ.28ರ ಚುನಾವಣೆಯಲ್ಲಿ ಹಾಲಿ ಸರ್ಕಾರವೇ ಅಧಿಕಾರ ಉಳಿಸಿಕೊಳ್ಳಲಿದೆ ಎನ್ನುವುದನ್ನು ತಮ್ಮ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ  ತೋರಿಸಿವೆ. ಟೈಮ್ಸ್‌ ನೌ- ಸಿಎನ್‌ಎಕ್ಸ್‌  ನಡೆಸಿದ ಸಮೀಕ್ಷೆ ಪ್ರಕಾರ 230 ಸ್ಥಾನಗಳ ಪೈಕಿ 122 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಹಾಲಿ ವಿಧಾನಸಭೆಯಲ್ಲಿ 165 ಸ್ಥಾನಗಳನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್‌ 95 ಸ್ಥಾನಗಳಲ್ಲಿ ಗೆಲ್ಲುವುದರ ಮೂಲಕ 2013ರ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಲಿದೆ. ಬಿಎಸ್‌ಪಿ 3, ಗೊಂಡ್ವಾನಾ ಗಣತಂತ್ರ ಪಾರ್ಟಿ, ಸಮಾಜವಾದಿ ಪಕ್ಷ, ಎಡಪಕ್ಷಗಳು ಮತ್ತು ಸ್ವತಂತ್ರರು ಸೇರಿಕೊಂಡು 10 ಸ್ಥಾನಗಳನ್ನು ಗಳಿಸಲಿದ್ದಾರೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಪ್ರತಿಪಕ್ಷಗಳ ಸಂಖ್ಯೆ ಈ ಬಾರಿ ಹೆಚ್ಚಾಗಲಿದೆ ಎನ್ನುವುದು ಸಮೀಕ್ಷೆಯ ಸೂಚನೆ. ಈ ರಾಜ್ಯದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರ ನಡೆಸಲು 116 ಸ್ಥಾನಗಳು ಬೇಕು. ಬುಕಿಗಳ ಪ್ರಕಾರ ಬಿಜೆಪಿಯೇ ಅಧಿಕಾರದಲ್ಲಿ ಮುಂದುವರಿಯಲಿದೆ. 

ಇನ್ನು ಪ್ರತಿಪಕ್ಷಗಳತ್ತ ಹೊರಳಿದರೆ ಆರಂಭದಲ್ಲಿ ಬಿಜೆಪಿಯನ್ನೆದುರಿಸಲು ಕಾಂಗ್ರೆಸ್‌ ಮತ್ತು ಬಿಎಸ್‌ಪಿ ನಡುವೆ ಮಹಾಮೈತ್ರಿ ನಡೆಯುವ ಸೂಚನೆ ಇತ್ತು. ಆದರೆ ಹೆಚ್ಚಿನ ಸ್ಥಾನಗಳನ್ನು ತನಗೆ ನೀಡಬೇಕು ಎಂಬ ಮಾಯಾವತಿ  ಹಠ ಎಲ್ಲವನ್ನೂ ನುಂಗಿ ಹಾಕಿತು. ನ.23ರಂದು “ಎನ್‌ಡಿಟಿವಿ’ಗೆ ನೀಡಿದ ಸಂದರ್ಶನದ ಪ್ರಕಾರ ಬಿಎಸ್‌ಪಿ ನಾಯಕಿ ಛಿಂದ್ವಾರಾ ಲೋಕಸಭಾ ಕ್ಷೇತ್ರದಲ್ಲಿ ಮತ್ತು ಇತರೆಡೆಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಕೇಳಿದ್ದರು ಎಂದಿದ್ದಾರೆ ಮಾಜಿ ಸಚಿವ ಕಮಲ್‌ನಾಥ್‌. 230 ಕ್ಷೇತ್ರಗಳ ಪೈಕಿ ಮಾಯಾವತಿ 50 ಕ್ಷೇತ್ರಗಳನ್ನು ಕೇಳಿದ್ದರು. ಪಕ್ಷ ಅವರಿಗೆ 25, ಗರಿಷ್ಠವೆಂದರೆ 30 ಸ್ಥಾನ ನೀಡಲು ಸಿದ್ಧವಾಗಿತ್ತು ಎಂದು ಛಿಂದ್ವಾರಾ ಲೋಕಸಭಾ ಕ್ಷೇತ್ರದ ಸಂಸದ ಹೇಳಿದ್ದಾರೆ. ಇದೇ ಮಧ್ಯಪ್ರದೇಶದಲ್ಲಿನ ಮಹಾಮೈತ್ರಿ ಮುರಿದು ಬೀಳಲು ಕಾರಣ. ಇದುವರೆಗೆ ಹಿಂದುತ್ವ ಮತ್ತು ಅದಕ್ಕೆ ಸಂಬಂಧಿ ವಿಚಾರಗಳನ್ನು ತಪ್ಪಿಯೂ ಆಡದಿದ್ದ ಕಾಂಗ್ರೆಸ್‌ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಗೋವು, ರಾಮ, ದೇಗುಲ ವಿಚಾರಗಳನ್ನು ಪ್ರಸ್ತಾಪಿಸಿದೆ. ಕಾಂಗ್ರೆಸ್‌ ರಾಮ ವನ ಗಮನ ಪಥ, ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಗೋ ಶಾಲೆ ಸ್ಥಾಪಿಸುವ ಮಾತುಗಳನ್ನಾಡಿದೆ. ಜತೆಗೆ ಮಧ್ಯಪ್ರದೇಶದ ಪ್ರಮುಖ ದೇಗುಲಗಳಿಗೆ ಪ್ರಚಾರಕ್ಕೆ ಮುನ್ನ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತೆರಳಿದ್ದು, ತಾನು ಶಿವಭಕ್ತ ಎಂದು ಹೇಳಿಕೊಂಡಿದ್ದನ್ನು ಸರಿಯಾದ ರೀತಿಯಲ್ಲಿ ಬಿಂಬಿಸಲು ವಿಫ‌ಲವಾಗಿದೆ. ಇದರ ಜತೆಗೆ ಕಮಲ್‌ನಾಥ್‌ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆಂದು ಹೇಳಲಾಗಿರುವ ವಿಡಿಯೋ ಕೂಡ ಮುಜುಗರಕ್ಕೆ ಈಡು ಮಾಡಿದೆ. ರಾಹುಲ್‌ ಗಾಂಧಿ ಸಮ್ಮುಖದಲ್ಲಿಯೇ ಕಮಲ್‌ನಾಥ್‌ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ವಾಗ್ವಾದ ನಡೆಸಿದ್ದು ಕೂಡ ವೈರಲ್‌ ಆಯಿತು. ಈ ಎಲ್ಲಾ ಬೆಳವಣಿಗೆಗಳನ್ನು ಬಿಜೆಪಿ ಸಮರ್ಥವಾಗಿಯೇ ಬಳಸಿಕೊಂಡಿದೆ. 

ಈ ರಾಜ್ಯದಲ್ಲಿ ಹಾಲಿ ಚುನಾವಣೆಯ ಪ್ರಧಾನ ಅಂಶವೆಂದರೆ ಆದಿವಾಸಿಗಳ  ಜೈ ಆದಿವಾಸಿ ಯುವ ಶಕ್ತಿ ಎಂಬ ಸಂಘಟನೆ ಚುನಾವಣೆಯಲ್ಲಿ ಸ್ಪರ್ಧಿಸುವ ಮಾತಾಡಿದ್ದು. ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಸ್‌)ಯ ವೈದ್ಯ ಹರಿಲಾಲ್‌ ಅಲಾವಾ 2012ರಲ್ಲಿ ಅದನ್ನು ಸ್ಥಾಪಿಸಿದರು. ಮಾಲ್ವಾ-ನಿಮರ್‌ ಪ್ರದೇಶದಲ್ಲಿ 66 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 28 ಕ್ಷೇತ್ರಗಳು 22 ಎಸ್‌ಟಿ ಅಭ್ಯರ್ಥಿಗೆ ಮೀಸಲಾಗಿವೆ. ಅವುಗಳನ್ನು ತನಗೆ ಬಿಟ್ಟುಕೊಡಬೇಕೆಂದು ಅದು ಕೇಳಿದೆ. ಕಾಂಗ್ರೆಸ್‌ ಅಥವಾ ಬಿಜೆಪಿಗೆ ಗೆಲ್ಲಬೇಕಾದರೆ ಇಲ್ಲಿಯ ಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯನ್ನು ಬುಟ್ಟಿಗೆ ಹಾಕಿಕೊಳ್ಳಲೇಬೇಕು. “ಈ ಬಾರಿ ಆದಿವಾಸಿ ಸರ್ಕಾರ’ ಎಂಬ ಘೋಷಣೆಯನ್ನೂ ಈ ಸಂಘಟನೆ ಮಾಡಿದೆ. ಹೀಗಾಗಿ, ಕಾಂಗ್ರೆಸ್‌ ಅಥವಾ ಬಿಜೆಪಿ ಈ ಸಂಘಟನೆ ಜತೆಗೆ ಮಾಡಿಕೊಳ್ಳಲಿರುವ ಒಪ್ಪಂದ ಈ ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲು ನೆರವಾಗಲಿದೆ ಎಂದು ಹೇಳಲಾಗುತ್ತಿದೆ. ಒಂದಂತೂ ನಿಜವೇ, ಕಾಂಗ್ರೆಸ್‌ ಮತ್ತು ಬಿಜೆಪಿಗೆ ಮಧ್ಯಪ್ರದೇಶ ದೂರವೂ ಅಲ್ಲ ಹತ್ತಿರವೂ ಅಲ್ಲ ಎಂಬಂತಿದೆ.   

ಕೆ ಸದಾಶಿವ

Advertisement

Udayavani is now on Telegram. Click here to join our channel and stay updated with the latest news.

Next