ಭೋಪಾಲ್ : ಮಧ್ಯಪ್ರದೇಶ ಪೊಲೀಸ್ ದಳದ ಉಗ್ರ ನಿಗ್ರಹ ತಂಡ, ರಾಜ್ಯದ ವಿವಿಧ ಭಾಗಗಳಿಂದ ಪಾಕ್ ಗೂಢಚರ ಸಂಸ್ಥೆ ಐಎಸ್‌ಐ ಬೆಂಬಲಿತ ಬೇಹು ಜಾಲದ 11 ಸದಸ್ಯರನ್ನು ಬಂಧಿಸಿದೆ.
ಈ ಬಂಧಿತರು ಚೀನದ ಸಲಕರಣೆಗಳು, ಸಿಮ್ ಕಾರ್ಡ್‌ಗಳು, ಸಿಮ್ ಬಾಕ್ಸ್‌ಗಳನ್ನು ಬಳಸಿ ಅನಧಿಕೃತ ಕಾಲ್ ಸೆಂಟರ್‌ಗಳನ್ನು ನಡೆಸುತ್ತಿದ್ದರು. ಇವುಗಳ ಮೂಲಕ ಭಾರತದ ಸೇನಾ ಕಾರ್ಯಾಚರಣೆಗಳ ಬೇಹುಗಾರಿಕೆಯನ್ನು ಐಎಸ್‌ಐ ನಡೆಸುತ್ತಿತ್ತು.
ಉಗ್ರ ನಿಗ್ರಹ ತಂಡದ ಅಧಿಕಾರಿಗಳು ಬಂಧಿತರಲ್ಲಿದ ಚೀನದ ಸಿಮ್ ಕಾರ್ಡ್, ಸಿಮ್ ಬಾಕ್ಸ್, ಪ್ರೀಪೇಡ್ ಸಿಮ್ ಕಾರ್ಡ್‌ಗಳು, ಲ್ಯಾಪ್‌ಟಾಪ್‌ಗ್ಳು ಮತ್ತು ಡೇಟಾ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಾಗಿರುವ ಎಲ್ಲ 11 ಮಂದಿಯ ವಿರುದ್ಧ ಪೊಲೀಸರು ಭಾರತೀಯ ಟೆಲಿಗ್ರಾಫ್ ಕಾಯಿದೆಯಡಿ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಕೇಸುದಾಖಲಿಸಿಕೊಂಡಿದ್ದಾರೆ.
ಪಾಕ್ ಐಎಸ್‌ಐ ಬೆಂಬಲಿತ ಈ ಬೇಹು ಜಾಲದಲ್ಲಿ ಸೆರೆಯಾಗಿರುವ 11 ಮಂದಿಯಲ್ಲಿ ಮೂವರನ್ನು ಭೋಪಾಲದಲ್ಲಿ, ಒಬ್ಬನನ್ನು ಸಾತ್ನಾದಲ್ಲಿ, ಇಬ್ಬರನ್ನು ಜಬಲ್ಪುರದಲ್ಲಿ ಮತ್ತು ಐವರನ್ನು ಗ್ವಾಲಿಯರ್‌ನಲ್ಲಿ ಬಂಧಿಸಲಾಗಿದೆ ಎಂದು ಎಟಿಎಸ್ ಮುಖ್ಯಸ್ಥ ಸಂಜೀವ ಶಾಮಿ ತಿಳಿಸಿದ್ದಾರೆ.
ಸಾತ್ನಾದಲ್ಲಿ ಬಂಧಿತನಾದ ಬಲರಾಮ್ ಎಂಬಾತನು ಈ ಬೇಹು ಜಾಲದ ಮಾಸ್ಟರ್ ಮೈಂಡ್ ಆಗಿದ್ದಾನೆ ಎಂದವರು ತಿಳಿಸಿದ್ದಾರೆ.