Advertisement

ಉಡುಪಿ ಸಹಿತ ವಿವಿಧೆಡೆ ಮಧ್ವನವಮಿ ಉತ್ಸವ

11:46 PM Feb 03, 2020 | mahesh |

ಉಡುಪಿ: ಸುಮಾರು ಏಳು ಶತಮಾನಗಳ ಹಿಂದೆ ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ತಣ್ತೀವಾದವೆಂಬ ವೇದಾಂತ ಪ್ರಕಾರವನ್ನು ಪ್ರಚಾರಕ್ಕೆ ತಂದ ಮಧ್ವಾಚಾರ್ಯರು ಭೌತಿಕವಾಗಿ ಕೊನೆಯದಾಗಿ ಕಂಡುಬಂದ ದಿನ ಮಧ್ವನವಮಿ ಉತ್ಸವವನ್ನು ಸೋಮವಾರ ಶ್ರೀಕೃಷ್ಣ ಮಠವೂ ಸೇರಿದಂತೆ ವಿವಿಧೆಡೆ ಆಚರಿಸಲಾಯಿತು.

Advertisement

ಶ್ರೀಕೃಷ್ಣ ಮಠದಲ್ಲಿ ಸರ್ವಮೂಲಗ್ರಂಥ, ಗೀತೆ, ವಿಷ್ಣುಸಹಸ್ರನಾಮ, ವಾಯುಸ್ತುತಿ, ಮಧ್ವವಿಜಯ, ವೇದ, ಭಾಗವತಾದಿ ಗ್ರಂಥಗಳ ಪಾರಾಯಣ ನಡೆಯಿತು. ಮಹಾಪೂಜೆಯನ್ನು ನಡೆಸಿದ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅನಂತೇಶ್ವರ ದೇವಸ್ಥಾನದಲ್ಲಿರುವ ಮಧ್ವರ ಸನ್ನಿಧಾನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ರಥಬೀದಿಯಲ್ಲಿ ಮಧ್ವರ ಸರ್ವಮೂಲ ಗ್ರಂಥವನ್ನು ಸುವರ್ಣ ರಥದಲ್ಲಿರಿಸಿ ಮೆರವಣಿಗೆ ನಡೆಸಲಾಯಿತು.

ಆಶೀರ್ವಚನ ನೀಡಿದ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು, ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು, ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಚಾರ್ಯ ಮಧ್ವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು. ಗಿಡ ಮರ ಬಳ್ಳಿಯಿಂದ ಹಿಡಿದು ಮಾನವ ಕೋಟಿಯವರೆಗೆ ವಿಶಾಲ ವಿಶ್ವ ಚಿಂತನೆ ನಡೆಸಿದ ಮಹಾನುಭಾವರು ಮಧ್ವರು ಎಂದು ಸ್ವಾಮೀಜಿ ಬಣ್ಣಿಸಿದರು.

ಮಧ್ವರು ಜನಿಸಿದ ಪಾಜಕ ಕ್ಷೇತ್ರದಲ್ಲಿ ಆಡಳಿತದಾರ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು, ಮಧ್ವರು ಉಡುಪಿ ಮತ್ತು ಸುಬ್ರಹ್ಮಣ್ಯ ಮಠಕ್ಕೆ ತೆರಳುವಾಗ ಮಧ್ಯದಲ್ಲಿ ತಂಗುತ್ತಿದ್ದ ನಡ್ಡಂತಾಡಿ (ಮಧ್ಯವಾಟ) ಮಠದಲ್ಲಿ ಆಡಳಿತೆದಾರ ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥರು, ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥರು ವಿಶೇಷ ಪೂಜೆ ನಡೆಸಿದರು.

ಕುಂಜಾರುಗಿರಿ: ಏಕಶಿಲಾ ಮೂರ್ತಿಗೆ ವಿಶೇಷ ಪೂಜೆ
ಕಟಪಾಡಿ: ಕುಂಜಾರುಗಿರಿ ಬೆಟ್ಟದ ತಪ್ಪಲಿನಲ್ಲಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪ್ರತಿಷ್ಠಾಪಿಸಿದ 32 ಅಡಿ ಎತ್ತರದ ಮಧ್ವಾಚಾರ್ಯರ ಏಕಶಿಲಾ ಮೂರ್ತಿಗೆ ಮಧ್ವನವಮಿಯ ಪ್ರಯುಕ್ತ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಪಂಚಕಲಶಾಭಿಷೇಕ ನಡೆಸಿ ವಿಶೇಷ ಪೂಜೆಯನ್ನು ನೆರವೇರಿಸಿದರು. ಮಠದ ವಿದ್ವಾಂಸ ರಾಜಗೋಪಾಲ ಆಚಾರ್ಯರು ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು.

Advertisement

ಮೆಲ್ಬರ್ನ್ನಲ್ಲಿ ಮಧ್ವರ ವಿಗ್ರಹ ಸ್ಥಾಪನೆ
ಉಡುಪಿ: ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದ ಮುರುಂಬೀನಾ ಪ್ರದೇಶದಲ್ಲಿರುವ ಶ್ರೀ ವೆಂಕಟಕೃಷ್ಣ ವೃಂದಾವನ ಕ್ಷೇತ್ರದಲ್ಲಿ ಸೋಮವಾರ ಮಧ್ವನವಮಿ ಪರ್ವದಿನ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಧ್ವಾಚಾರ್ಯರ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

ವಾಯುಸ್ತುತಿಯೊಂದಿಗೆ ಮಧು ಅಭಿಷೇಕ ನಡೆಸಿದ ಶ್ರೀಪಾದರು ಸಂಸ್ಥಾನ ಪೂಜೆ ನಡೆಸಿ ಪ್ರತಿಷ್ಠಾಪನೆಗೈದರು. ಇದೇ ಸಂದರ್ಭ ಸುದರ್ಶನ ಹೋಮದಿಂದ ತಪ್ತವಾದ ಮುದ್ರೆಗಳಿಂದ ಭಕ್ತರಿಗೆ ಮುದ್ರಾಧಾರಣೆ ನಡೆಸಿದರು.

ಮಧ್ವಾಚಾರ್ಯರು ಉಡುಪಿಯಿಂದ ಭೌತಿಕ ಶರೀರದಿಂದ ನಿರ್ಗಮಿಸಿ ಏಳು ಶತಕಗಳು ಕಳೆದಿವೆ. ಇದೀಗ ಮೆಲ್ಬೋರ್ನ್ ನಗರದವರಿಗೆ ಸುವರ್ಣಾಕ್ಷರಗಳಿಂದ ಬರೆದಿಡುವ ದಿನ. ಇಂದು ಮಧ್ವರ ವಿಗ್ರಹ ಇಲ್ಲಿ ಪ್ರತಿಷ್ಠಾಪನೆಯಾಗಿದೆ ಎಂದು ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.

ಇಂದು ಜಗತ್ತು ಅತೀವ ಆಸೆಯಿಂದ ಬಳಲುತ್ತಿದೆ. ನಾವು ಈ ಜಗತ್ತಿನಿಂದ ಅತ್ಯಂತ ಕನಿಷ್ಠ ಪ್ರಯೋಜನವನ್ನು ಮಾತ್ರ ಪಡೆಯಬೇಕು. ನಾವು ಸಾಧಿಸಿದ್ದೆಲ್ಲವೂ ಭಗವಂತನಿಂದ ಎಂಬ ಅನುಸಂಧಾನದಿಂದ ನಮಗೆ ಕನಿಷ್ಠವನ್ನು ಇರಿಸಿಕೊಂಡು ಉಳಿದುದನ್ನು ಹಂಚಬೇಕು. ನಮಗೆ ಸಿಕ್ಕಿದ ಅಧಿಕಾರ ಯಾರಿಂದ ಬಂತು ಎಂಬ ಪ್ರಶ್ನೆ ಮೂಡಬೇಕು. ಭಗವಂತನಿಂದ ಬಂದ ಕಾರಣ ನಮ್ಮ ಕೃತಜ್ಞತೆ ಆತನಿಗೆ ಸಲ್ಲಬೇಕು ಎಂದು ಸ್ವಾಮೀಜಿ ಹೇಳಿದರು. ಅಮೆರಿಕ, ಮಸ್ಕತ್‌ ಮೊದಲಾದೆಡೆ ಶ್ರೀಕೃಷ್ಣನ ಸನ್ನಿಧಾನವನ್ನು ಪ್ರತಿಷ್ಠಾಪಿಸುತ್ತಿರುವ ಶ್ರೀಪಾದರು ಇದೀಗ ಆಸ್ಟ್ರೇಲಿಯಾದಲ್ಲಿಯೂ ಮಧ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next