Advertisement
ಬದುಕಿನ ಅರ್ಥದ ಶೋಧನೆಯೇ ತತ್ವಶಾಸ್ತ್ರದ ತಿರುಳು. ಭಗವದ್ಗೀತೆ ಹೇಳುವ ವ್ಯಕ್ತಮಧ್ಯ ಅಥವಾ ಹುಟ್ಟು ಹಾಗೂ ಸಾವಿನ ಮಧ್ಯದ ಅವಧಿಯಲ್ಲಿ ಮನುಷ್ಯನನ್ನು ಕಾಡುವ ಮೂಲಭೂತ ಸಮಸ್ಯೆಗಳನ್ನು ಅರ್ಥೈಸುವ ಹಾಗೂ ಪರಿಹರಿಸುವ ನಿಟ್ಟಿನಲ್ಲಿ ತತ್ವಶಾಸ್ತ್ರಜ್ಞ ಗಂಭೀರವಾಗಿ, ತಾರ್ಕಿಕವಾಗಿ ಯೋಚಿಸುತ್ತಾನೆ. ಮನುಷ್ಯ ಒಂದೆಡೆ ತನಗೂ ತಾನು ಇರುವ ಪ್ರಪಂಚಕ್ಕೂ ತಾನು ನಂಬುವ ದೇವರಿಗೂ, ಇನ್ನೊಂದೆಡೆ ತನಗೂ ತನ್ನ ಜೊತೆ ಬದುಕುವ ಇತರರಿಗೂ ಇರುವ ಸಂಬಂಧಗಳ ಹಾಗೂ ಆ ಸಂಬಂಧಗಳ ಅರ್ಥದ ಬಗ್ಗೆ ನಡೆಸುವ ಚಿಂತನೆಯ ಫಲವಾಗಿ ತತ್ವಶಾಸ್ತ್ರದ ವಿವಿಧ ಧಾರೆಗಳು ಹುಟ್ಟಿಕೊಳ್ಳುತ್ತವೆ.
Related Articles
Advertisement
ಅದ್ವೆ„ತ ಹಾಗೂ ವಿಶಿಷ್ಟಾದ್ವೆ„ತದ ಕಟುಟೀಕಾಕಾರರಾಗಿ ತನ್ನ ತತ್ವಜ್ಞಾನವನ್ನು ತತ್ವವಾದ (ವಾಸ್ತವ ದೃಷ್ಟಿವಾದ)ವೆಂದು ಕರೆದು, ಸಂಸ್ಕೃತದಲ್ಲಿ ಲಯಬದ್ಧವಾದ ಹಾಡುಗಬ್ಬವಾಗಿರುವ ದ್ವಾದಶಸ್ತೋತ್ರ ಬರೆದವರು ಮಧ್ವಾಚಾರ್ಯರು. ಬನ್ನಂಜೆ ಗೋವಿಂದಾಚಾರ್ಯರು ಕನ್ನಡಕ್ಕೆ ಭಾವಾನುವಾದ ಮಾಡಿರುವ ಈ ರಚನೆ ವಿದ್ಯಾಭೂಷಣರ ವಿಶಿಷ್ಟ ಧ್ವನಿಯಲ್ಲಿ ಉಪಮೆ ರೂಪಕಗಳ ರಸಸೃಷ್ಟಿಯಾಗಿ ಕನ್ನಡಿಗರ ಗೃಹ ಸಂಗೀತವಾಗಿದೆ. ಆದರೆ ಬ್ರಹ್ಮಸೂತ್ರಗಳಿಗೆ ಭಾಷ್ಯ, 35ಕ್ಕೂ ಹೆಚ್ಚು ಗ್ರಂಥಗಳು, 15 ಭಾಷ್ಯಗಳು, ಭಾಗವತ ತಾತ್ಪರ್ಯ ನಿರ್ಣಯ, ಬ್ರಹ್ಮಸೂತ್ರಗಳಿಗೆ ಬರೆದ ಭಾಷ್ಯಕ್ಕೆ ಒಂದು ಪೂರಕ ಭಾಷ್ಯ, ಹಾಗೂ ವಿದ್ವಾಂಸ ಬಿ.ಎನ್. ಕೃಷ್ಣಮೂರ್ತಿಶರ್ಮ ಹೇಳುವಂತೆ ಒಂದು ಮಾಸ್ಟರ್‌ಪೀಸ್ ಎನ್ನಲಾದ ಅಣುವ್ಯಾಖ್ಯಾನದಿಂದ ಪ್ರಖ್ಯಾತರಾಗಿ ಪ್ರಮುಖ ಭಾರತೀಯ ತತ್ವಶಾಸ್ತ್ರಜ್ಞರಾಗಿರುವ ಮಧ್ವಾಚಾರ್ಯರ ವಾದದ ವೈಖರಿ, ತರ್ಕದ ಹರಹು, ವಾಕ್ಯಗಳ ಬಿಗಿತ ಸುಲಭಗ್ರಾಹ್ಯವಲ್ಲ.
ಅತ್ಯಂತ ಅಮೂರ್ತ (abstract) ವಿಷಯಗಳಾದ ಜೀವ-ಜೀವಾತ್ಮ, ಬ್ರಹ್ಮ-ಪರಮಾತ್ಮ ಹಾಗೂ ಇವುಗಳ ಅಂತರ್ ಸಂಬಂಧವನ್ನು ಚರ್ಚಿಸಿ, ಜ್ಞಾನಾಧ್ಯಯನ (epistemology)ವನ್ನು ಅಣುಪ್ರಮಾಣವೆಂದು ಕರೆದು ಜ್ಞಾನಾರ್ಜನೆಗೆ ಪ್ರತ್ಯಕ್ಷ, ಅನುಮಾನ, ಶಬ್ದವೆಂಬ ಮೂರು ಮಾರ್ಗಗಳನ್ನು ತೋರಿದ ಮಧ್ವಾಚಾರ್ಯರು ಮೀಮಾಂಸಾ (ಕ್ರಿಯೆ/ಕರ್ಮ) ಮತ್ತು ಜ್ಞಾನ-ಎರಡೂ ಸಮಾನವಾಗಿ ಮುಖ್ಯ ಎಂದು ಪ್ರತಿಪಾದಿಸಿದರು. ತತ್ ತ್ವಂ ಅಸಿ (ನೀನು ಅದು (ಆತ್ಮ) ಆಗಿದ್ದಿ) ಎಂಬ ಪ್ರಮೇಯದ ಬದಲು ಅತತ್ ತ್ವಂ ಅಸಿ (ನೀನು ಅದು ಆಗಿ ಇಲ್ಲ) ಎನ್ನುವ ತತ್ವಶಾಸ್ತ್ರೀಯ ನಿಲುವು; ಮೋಕ್ಷದ ಪರಿಕಲ್ಪನೆಯ ಚಿಂತನೆ; ಕೆಡುಕು ಮತ್ತು ಯಾತನೆ ಮನುಷ್ಯನ ಇಂದಿನ/ಹಿಂದಿನ ಕರ್ಮದಿಂದಾಗಿಯೇ ಹೊರತು ದೇವರಿಂದಾಗಿ ಅಲ್ಲ; ಆದ್ದರಿಂದ ಕೆಡುಕಿನ (evil)ಸಮಸ್ಯೆಯೇ ಉದ್ಭವಿಸುವುದಿಲ್ಲ, ಅಣು ಪ್ರಮಾಣ, ಕೇವಲ ಪ್ರಮಾಣ ಇತ್ಯಾದಿ ವಿಷಯಗಳಲ್ಲ ಜಿಜ್ಞಾಸುವಿಗೆ, ಬೌದ್ಧಿಕ ಸವಾಲುಗಳಾಗುತ್ತವೆ. ಇವೆಲ್ಲಾ ಬಿಟ್ಟ ಖಾಲಿ ಜಾಗ ತುಂಬಿರಿ ಅಥವಾ ಈ ಕೆಳಗಿನ ನಾಲ್ಕರಲ್ಲಿ ಸರಿಯಾದ ಒಂದನ್ನು ಟಿಕ್ ಮಾಡಿ ಎನ್ನುವ ಮಲ್ಟಿಪಲ್ ಚಾಸ್ ಪ್ರಶ್ನೋತ್ತರಗಳ ಆಧುನಿಕ ತಲೆಮಾರಿಗೆ ಶುದ್ಧತರ್ಕ ಹಾಗೂ ತತ್ವಶಾಸ್ತ್ರೀಯ ಹಗ್ಗ ಜಗ್ಗಾಟ ಅನ್ನಿಸಿದರೆ ಆಶ್ಚರ್ಯವಿಲ್ಲ. ಆದರೆ ತನ್ನದೇ ಆದ ತತ್ವಶಾಸ್ತ್ರವನ್ನು ಪ್ರತಿಪಾದಿಸಲು ಪ್ರಾಚೀನ ಹಾಗೂ ಮಧ್ಯಯುಗದ 21 ಮಂದಿ ವಿದ್ವಾಂಸರ ವಿರುದ್ಧ ವಾದಗಳನ್ನು ಬರೆದರೆನ್ನಲಾದ ಆಚಾರ್ಯರ ಮಾಧ್ವತತ್ವ ಕರ್ನಾಟಕದಲ್ಲಿ ವೈಷ್ಣವ ಪಂಥದ ದಾಸಕೂಟ ಅಥವಾ ದಾಸ ಪಂಥಕ್ಕೆ ನಾಂದಿಯಾಗಿ ಕನ್ನಡ ನಾಡಿನ ದಾಸ ಸಾಹಿತ್ಯ ಹಾಗೂ ಸಂಗೀತ ಪರಂಪರೆಗೆ ದೊಡ್ಡ ಕೊಡುಗೆಯಾಯಿತು ಎಂಬುದನ್ನು ನಾವು ಮರೆಯುವಂತಿಲ್ಲ.
ಆದರೆ ಮಧ್ವಾಚಾರ್ಯರ ಕುರಿತು ತಿಳಿದುಕೊಳ್ಳುವ ಮೂಲ ಆಸಕ್ತಿಯಿಂದ ಅಂತರ್ಜಾಲ ಹೊಕ್ಕು ನೋಡಿದಾಗ ಮಾಧ್ವ ತತ್ವಜ್ಞಾನದ ಬಗ್ಗೆ ಬರೆದಿರುವ ವಿದ್ವಾಂಸರ ಯಾದಿಯಲ್ಲಿ ಕ್ರಿಶ್ಚಿಯನ್ ವಾನ್, ಡೆಹ್‌ಸನ್, ಜಾರ್ಜ್ ಅಬ್ರಹಾಂ, ಗ್ರಿಯರನ್, ಕಲಂದ್ರನ್ ಮತ್ತು ಕೇಮರ್, ಬಾರ್ಟ್‌ಲಿ, ಎಡ್ವಿನ್ ಬ್ರಯಂಟ್, ಗಾವಿನ್ ಫ್ಲಡ್, ಕಾನ್‌ಸ್ಟನ್ಸ್ ಜೋನ್ಸ್, ಜೇಮ್ಸ್‌ರ್ಯಾನ್ ಡೇವಿಸ್ ಬುಚ್‌ಟ್, ಬಿಎನ್ ಕೃಷ್ಣಮೂರ್ತಿ ಶರ್ಮ, ಎಸ್‌ಡಿ ಗೋಸ್ವಾಮಿ ಮೊದಲಾದ ವಿದ್ವಾಂಸರ ಹೆಸರುಗಳು ಕಾಣಿಸುತ್ತವೆಯೇ ಹೊರತು 20ನೇ ಶತಮಾನದ ತೃತೀಯ ಜಗತ್ತಿನ ಓರ್ವ ಶ್ರೇಷ್ಠ ಸಂಸ್ಕೃತ- ಮಾಧ್ವತತ್ವ ವಿದ್ವಾಂಸ ಬನ್ನಂಜೆ ಗೋವಿಂದಾ ಚಾರ್ಯರ ಹೆಸರೇ ಕಾಣಿಸುವುದಿಲ್ಲ. 50ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಬನ್ನಂಜೆಯವರು ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳನ್ನು ಸಂಶೋಧಿಸಿ, ಸಂಪಾದಿಸಿ ಪ್ರಕಟಿಸಿದವರು; ಮಾಧ್ವ ತತ್ವಶಾಸ್ತ್ರದ ಬಗ್ಗೆ ಅಧಿಕಾರಯುತವಾಗಿ ಮಾತಾಡಬಲ್ಲ ಅಪರೂಪದ ಬಹುಶುೃತ ವಿದ್ವಾಂಸರು. ಹೀಗಾಗಿ, ಅಂತರ್ಜಾಲದಲ್ಲಿ ಮಾಧ್ವ ತತ್ವಶಾಸ್ತ್ರದ ತಿರುಳನ್ನು ಸರಳವಾದ ಇಂಗ್ಲಿಷ್ ಮತ್ತು ಕನ್ನಡದಲ್ಲಿ ತಿಳಿಸುವಂತಹ ಬನ್ನಂಜೆಯವರ ಬರಹಗಳು ಲಭಿಸುವಂತಾಗಬೇಕು.
ಯಾವುದೇ ತತ್ವಶಾಸ್ತ್ರ ಜನರಿಗೆ ಬದುಕಿನ ಕಠಿಣ ವಾಸ್ತವಗಳನ್ನು ಎದುರಿಸಲು ಒಂದು ಅಸ್ತ್ರವಾಗಬೇಕಾದರೆ ಅದು ಅವರ ಸಮಕಾಲೀನ ಜೀವನಕ್ಕೆ ಕನೆಕ್ಟ್ ಆಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಮೊಬೈಲ್, ಇಂಟರ್‌ನೆಟ್, ಟ್ವಿಟರ್, ಫೇಸ್‌ಬುಕ್, ವಾಟ್ಸ್‌ಅಪ್ ವ್ಯಸನಿ ಯಾಗಿರುವ ಇಂದಿನ ಯುವ ತಲೆಮಾರಿಗೆ ಮಾಧ್ವ ಪರಿಕಲ್ಪನೆಗಳು ಪ್ರಸ್ತುತವಾಗುವಂತೆ ಮಾಡಲು ಮಾಧ್ವ ತತ್ವಶಾಸ್ತ್ರದ ಅಮೂರ್ತ ಪ್ರಮೇಯಗಳು ಮೂರ್ತವಾಗಬೇಕು. ಅಂದರೆ, ಅವುಗಳನ್ನು ಮೂರ್ತ (concrete) ನುಡಿಗಟ್ಟಿನಲ್ಲಿ ವಿವರಿಸುವ ದಿಕ್ಕಿನಲ್ಲಿ ಮಾಧ್ವತತ್ವಾಸಕ್ತರು ಆಸಕ್ತಿ ವಹಿಸಿ ಕಾರ್ಯಪ್ರವೃತ್ತರಾಗಬೇಕು.
ಡಾ| ಬಿ. ಭಾಸ್ಕರರಾವ್