ಮೈಸೂರು: ಸಣ್ಣ ನೀರಾವರಿ ಖಾತೆ ಬದಲಾಯಿಸಿದ್ದಕ್ಕೆ ಸ್ವಲ್ಪ ಬೇಸರವಾಗಿದೆ. ಆದರೆ, ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದ ಸುತ್ತೂರು ಶಾಖಾ ಮಠಕ್ಕೆ ಶುಕ್ರವಾರ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಖಾತೆ ಬದಲಾಗಿರುವುದು ಗೊತ್ತಿಲ್ಲ. ಯಾವ ಖಾತೆ ತೆಗೆದು, ಯಾವುದನ್ನು ಕೊಟ್ಟಿದ್ದಾರೆ ಎಂದು ನನಗೆ ಗೊತ್ತಿಲ್ಲ. ನೀವು ಹೇಳಿದ ಮೇಲೆ ನನಗೆ ಖಾತೆ ಬದಲಾಗಿರುವುದು ಗೊತ್ತಾಯಿತು. ಬೆಳಗ್ಗೆಯಿಂದಲೂ ಪ್ರವಾಸದಲ್ಲಿದ್ದೇನೆ. ನನ್ನ ಖಾತೆ ಬದಲಾದ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದರು.
ನಾನು ಗ್ರಾಮೀಣ ಪ್ರದೇಶದ ಹಿನ್ನೆಲೆ ಉಳ್ಳವನು. ಆದ್ದರಿಂದ ರೈತರಿಗೆ ಅನುಕೂಲ ಮಾಡಿಕೊಡುವ ಖಾತೆ ಬೇಕು ಅಂತ ಕೇಳಿದ್ದೆ. ಒಂದು ಖಾತೆಯಲ್ಲಿ ಇರುತ್ತೇವೆ. ಏಕಾಏಕಿ ಖಾತೆ ಬದಲಾದಾಗ ಬೇಸರ ಆಗೋದು ಸಹಜ. ಸಣ್ಣ ನೀರಾವರಿ ಖಾತೆ ತೆಗೆದಿರುವುದು ಬೇಸರ ತರಿಸಿದೆ. ಅದು ಸಹಜ ಕೂಡ ಎಂದರು.
ಇದನ್ನೂ ಓದಿ:ಉಪ ಆರೋಗ್ಯ ಘಟಕ ಉದ್ಘಾಟನೆ
ಯಾರು ಕೂಡ ಯಾವುದೇ ಖಾತೆಯನ್ನು ಸುದೀರ್ಘವಾಗಿ ನಿಭಾಯಿಸಲು ಸಾಧ್ಯವಿಲ್ಲ. ಇದೇನೂ ನನಗೆ ಡಿಮೋಷನ್ ಅಲ್ಲ. ವೈದ್ಯಕೀಯ ಖಾತೆಯೂ ಪ್ರಭಾವಿ ಖಾತೆ ಆಗಿದೆ. ಇದನ್ನು ನಿಭಾಯಿಸಲು ಕೂಡ ನಾನು ಶಕ್ತನಾಗಿದ್ದೇನೆ. ಈ ಖಾತೆಯನ್ನು ನನ್ನ ಕೈಯಲ್ಲಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಯಾರು ಅಂದುಕೊಳ್ಳಬೇಡಿ. ಕೆಲ ಪ್ರಮುಖ ಖಾತೆಗಳು ಮುಖ್ಯಮಂತ್ರಿಗಳ ಬಳಿಯೇ ಇದ್ದರೆ, ಅವರಿಗೆ ಕಾರ್ಯದ ಒತ್ತಡ ಹೆಚ್ಚುತ್ತದೆ.
ಆದರೆ, ಮುಖ್ಯಮಂತ್ರಿಯವರೇ ತಾವು ನಿಭಾಯಿಸುತ್ತೇನೆ ಎಂದುಕೊಂಡು ಕೆಲವು ಪ್ರಮುಖ ಖಾತೆಗಳನ್ನು ಅವರ ಬಳಿಯೇ ಇಟ್ಟು ಕೊಂಡಿದ್ದಾರೆ. ಇದು ಅವರ ಪರಮಾಧಿಕಾರ. ಈ ಹಿಂದೆಯೂ ಮುಖ್ಯಮಂತ್ರಿಗಳಾಗಿದ್ದವರು ಪ್ರಮುಖ ಖಾತೆಗಳನ್ನು ಅವರ ಬಳಿಯೇ ಇಟ್ಟು ಕೊಂಡಿದ್ದರು ಎಂದರು.