ಕಾಸರಗೋಡು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಗುರುವಾರ ಆರಂಭಗೊಂಡಿತು. ಎ. 17ರ ವರೆಗೆ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಎ. 13ರಂದು ಪೂರ್ವಾಹ್ನ ವೇದ ಪಾರಾಯಣ, ಧ್ವಜಾರೋಹಣ, ಸಹಸ್ರ ಕುಂಭಾಭಿಷೇಕ, ಸಂಗೀತ ಸೇವಾ ಕಾರ್ಯಕ್ರಮ, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಸಂಗೀತ ಸೇವಾ ಕಾರ್ಯಕ್ರಮ, ತಾಯಂಬಕ, ದೀಪಾರಾಧನೆ, ಉತ್ಸವ ಬಲಿ ನಡೆಯಿತು.
ಎ. 14ರಂದು ಪ್ರಾತಃಕಾಲ 5ರಿಂದ ದೀಪೋತ್ಸವ,
ವಿಷುಕಣಿಯ ವಿಶೇಷ ಬಲಿ, ರಾಜಾಂಗಣ ಪ್ರಸಾದ, 7.30 ರಿಂದ ಪಂಚವಾದ್ಯ, ರಾತ್ರಿ 7ಕ್ಕೆ ಉತ್ಸವ ಬಲಿ, 15 ರಂದು ಪ್ರಾತಃಕಾಲ 5ಕ್ಕೆ ದೀಪೋತ್ಸವ, ಉತ್ಸವ ಬಲಿ, ಸಂಜೆ 5ರಿಂದ ಎಡನೀರು ಮಠದ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರಿಂದ ಭಕ್ತಿ ಸಂಗೀತ, ರಾತ್ರಿ 7 ಕ್ಕೆ ನಡುದೀಪೋತ್ಸವ, ರಾತ್ರಿ 9ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಎ. 16ರಂದು ಪೂರ್ವಾಹ್ನ 9.30 ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4.30ಕ್ಕೆ ಯಕ್ಷಗಾನ ತಾಳಮದ್ದಳೆ, ಸಂಜೆ 6.30ಕ್ಕೆ ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಮೆರವಣಿಗೆ, ರಾತ್ರಿ 9.30ರಿಂದ ಮೂಲಸ್ಥಾನ ಉಳಿಯತ್ತ ಡ್ಕದಲ್ಲಿ ಕಟ್ಟೆಪೂಜೆ, 11ಕ್ಕೆ ವಿಶೇಷ ಸಿಡಿಮದ್ದು ಪ್ರದರ್ಶನ, 12.30ಕ್ಕೆ ಶಯನ, ಕವಾಟ ಬಂಧನ ನಡೆಯುವುದು. ಎ. 17ರಂದು ಪೂರ್ವಾಹ್ನ 7ಕ್ಕೆ ಕವಾಟೋದ್ಘಾಟನೆ, ರಾತ್ರಿ 11ಕ್ಕೆ ವಿಶೇಷ ವಿದ್ಯುತ್ ದೀಪಾಲಂಕೃತಗೊಂಡ ಕ್ಷೇತ್ರದ ಕೆರೆಯಲ್ಲಿ ಶ್ರೀ ದೇವರ ಅವಭೃಥ ಸ್ನಾನ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ಜರಗಲಿದೆ.