Advertisement

Kaup Sri Hosa Marigudi Temple: ಜೀರ್ಣೋದ್ಧಾರದಿಂದ ಕ್ಷೇತ್ರ ಪ್ರಸಿದ್ಧಿ: ವಿನಯ್‌ ಗುರೂಜಿ

12:11 AM Sep 04, 2024 | Team Udayavani |

ಕಾಪು: ಕಾಪು ಮಾರಿಯಮ್ಮನ ಸನ್ನಿಧಾನವು ಜಾಗೃತ ಸನ್ನಿಧಾನವಾಗಿದ್ದು ಇಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರವು ಲೋಕೋತ್ತರವಾಗಿ ಪ್ರಸಿದ್ಧಿಯಲ್ಲಿದೆ. ನವದುರ್ಗೆಯರ ಆರಾಧನೆಯಿಂದ ಸಕಲ ಕಷ್ಟ, ದುರಿತಗಳೂ ನಿವಾರಣೆಯಾಗುತ್ತವೆ ಎಂದು ಅವಧೂತ ವಿನಯ್‌ ಗುರೂಜಿ ಗೌರಿಗದ್ದೆ ಹೇಳಿದರು.

Advertisement

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ, ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿರುವ ನವದುರ್ಗಾ ಲೇಖನ ಯಜ್ಞ ಸಮಿತಿ ಮತ್ತು ಲೇಖನ ಸಂಕಲ್ಪ ಸ್ವೀಕಾರಕ್ಕೆ ಚಾಲನೆಯ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರದ್ಧೆ ಎತ್ತಿ ತೋರುತ್ತದೆ. ಮುಂದಿನ ದಿನಗಳಲ್ಲಿ ತಮ್ಮ ಹಾಗೂ ಭಕ್ತರ ಕಡೆಯಿಂದ ಚಿನ್ನ ಹಾಗೂ ಬೆಳ್ಳಿಯನ್ನು ಸಮರ್ಪಿಸುವುದಾಗಿ ಘೋಷಿಸಿದರು.

ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಕಾಪು ಮಾರಿಯಮ್ಮ ಸನ್ನಿಧಿಯ ಜೀರ್ಣೋದ್ಧಾರದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಪುಣ್ಯದ ಫಲವಾಗಿದೆ ಎಂದರು.

ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ, ಕೆ. ರಘುಪತಿ ಭಟ್‌ ಮಾತನಾಡಿ, ನಾಲ್ಕು ಭಾಷೆಗಳಲ್ಲಿ ನವದುರ್ಗಾ ಲೇಖನ ಯಜ್ಞದ ಪುಸ್ತಕಗಳು ಮುದ್ರಣಗೊಳ್ಳಲಿದ್ದು ಕನಿಷ್ಠ 99,999 ಲೇಖನ ಯಜ್ಞ ಸಂಕಲ್ಪದ ಗುರಿ ಹೊಂದಲಾಗಿದೆ. ಎಂದರು.

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ರವಿ ಸುಂದರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ| ಜಿ. ಶಂಕರ್‌ ವೆಬ್‌ಸೈಟ್‌ ಅನಾವರಣಗೊಳಿಸಿದರು. ಆಂಧ್ರದ ಶಾಸಕ ಅಮಿಲಿನೆನಿ ಸುರೇಂದ್ರ ಬಾಬು, ತಹಶೀಲ್ದಾರ್‌ ಡಾ| ಪ್ರತಿಭಾ ಆರ್‌. ಶುಭಾಶಂಸನೆಗೈದರು.

Advertisement

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಆಳ್ವಾಸ್‌ನ ಡಾ| ಎಂ. ಮೋಹನ್‌ ಆಳ್ವ, ಶಾಸಕರಾದ ಯಶಪಾಲ್‌ ಸುವರ್ಣ, ಕಿರಣ್‌ ಕುಮಾರ್‌ ಕೊಡ್ಗಿ, ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಉದ್ಯಮಿ ಎರ್ಮಾಳು ಚಂದ್ರಹಾಸ ಶೆಟ್ಟಿ, ಮಹೇಶ್‌ ವಿಕ್ರಮ್‌ ಹೆಗ್ಡೆ, ಆಡಳಿತಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ, ಇಒ ರವಿ ಕಿರಣ್‌ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಯೋಗೀಶ್‌ ಶೆಟ್ಟಿ ಬಾಲಾಜಿ ವಂದಿಸಿದರು. ದಾಮೋದರ ಶರ್ಮಾ ಬಾಕೂìರು ನಿರೂಪಿಸಿದರು.

ಸಂಕಲ್ಪ ಸ್ವೀಕಾರ
ಕ್ಷೇತ್ರದ ತಂತ್ರಿಗಳಾದ ವಿ| ಕೆ. ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿಗಳ ಉಪಸ್ಥಿತಿಯಲ್ಲಿ ಮಂಗಳ ಗೌರಿ ಪೂಜೆ ನಡೆಸಿ, 99 ಮಂದಿ ಮಹಿಳೆಯರು ಏಕಕಾಲದಲ್ಲಿ ನವದುರ್ಗಾ ಮಂತ್ರ ಪಠಿಸುವ ಮೂಲಕ ನವದುರ್ಗಾ ಲೇಖನ ಬರೆಯುವ ಸಂಕಲ್ಪ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next