ಶಿರ್ವ: ಶಿರ್ವ ಶ್ರೀ ಸಿದ್ಧಿ ವಿನಾಯಕ ದೇಗುಲದ ಸಂಸ್ಥಾಪಕ ಗ್ಯಾಬ್ರಿಯಲ್ ಫೇಬಿಯನ್ ನಜರೆತ್ (80) ಅವರು ಆ.18 ರಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಅವಿವಾಹಿತರಾಗಿದ್ದರು.
ಶ್ರೀ ಸಿದ್ಧಿವಿನಾಯಕನ ಪರಮ ಭಕ್ತರಾಗಿದ್ದ ಅವರು ತನ್ನ ಧರ್ಮದ ಜತೆಗೆ ಹಿಂದೂ ಧರ್ಮದ ಬಗ್ಗೆ ಅಪಾರ ಪ್ರೀತಿ ಮತ್ತು ಚಿಂತನೆ ಹೊಂದಿದ್ದರು. ಮುಂಬೈಯಲ್ಲಿದ್ದ ಉದ್ದಿಮೆಯನ್ನು ಮಾರಾಟ ಮಾಡಿ ಊರಿಗೆ ಬಂದು ನೆಲೆಸಿದ ಬಳಿಕ ಸುಮಾರು 15 ಸೆಂಟ್ಸ್ ಜಾಗದಲ್ಲಿ ಕಟಪಾಡಿ-ಶಿರ್ವ ಮುಖ್ಯರಸ್ತೆಯ ಮಟ್ಟಾರು-ಅಟ್ಟಿಂಜ ಕ್ರಾಸ್ ಬಳಿ ಸುಮಾರು 2 ಕೋ.ರೂ ವೆಚ್ಚದಲ್ಲಿ ತನ್ನ ಹೆತ್ತವರ ನೆನಪಿಗಾಗಿ ಶ್ರೀ ಸಿದ್ದಿವಿನಾಯಕನ ದೇಗುಲ ನಿರ್ಮಿಸಿ ಹಿಂದುಗಳಿಗೆ ಕೊಡುಗೆಯಾಗಿ ನೀಡಿದ್ದರು. ಪಲಿಮಾರು ಮಠಾಧೀಶರ ಮಾರ್ಗದರ್ಶನದಲ್ಲಿ 2021ರ ಜು. 15ರಂದು ಶ್ರೀಸಿದ್ದಿ ವಿನಾಯಕ ದೇಗುಲ ಲೋಕಾರ್ಪಣೆ ಗೊಂಡಿತ್ತು. ದೇಗುಲದ ತೃತೀಯ ವರ್ಷದ ಪ್ರತಿಷ್ಠಾ ವರ್ಧಂತಿ ಜು.15 ರಂದು ಅವರು ಅಸ್ವಸ್ಥಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಮುಂಬೈಯ ಪ್ರಭಾದೇವಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿ ವಾಸ್ತವ್ಯವಿದ್ದ ಅವರು ಶ್ರೀ ಸಿದ್ಧಿವಿನಾಯಕನನ್ನ ನೆನೆದು ಸ್ವಪ್ರಯತ್ನದಿಂದ ದೇವಸ್ಥಾನದ ಬಳಿಯೇ ಪ್ಲಾಸ್ಟಿಕ್ ಮತ್ತು ಮೆಟಲ್ ಡೈ ಮೇಕಿಂಗ್ ವರ್ಕ್ ಶಾಪ್ ಸ್ಥಾಪಿಸಿ ಯಶಸ್ಸು ಗಳಿಸಿ, 40 ವರ್ಷಗಳಲ್ಲಿ 3 ಕಡೆ ಉದ್ದಿಮೆ ಸ್ಥಾಪಿಸಿದ್ದರು. ಕೊಡುಗೈ ದಾನಿಯಾಗಿದ್ದ ಅವರು ಮುಂಬೈಯ ಉದ್ದಿಮೆ ಮಾರಿ ಬಂದ ಹಣವನ್ನು ಅಲ್ಲಿನ ಸಿಬಂದಿ ವರ್ಗಕ್ಕೆ ದಾನವಾಗಿ ನೀಡಿ ಬಂದಿದ್ದರು.
ಜಾತಿ ಮತಧರ್ಮದ ಭೇದವಿಲ್ಲದೆ ಸುಮಾರು 60 ಮಂದಿಯ ಮದುವೆಗೆ ಧನಸಹಾಯ ಮಾಡಿದ್ದರು ಅಲ್ಲದೆ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಸರ್ವಧರ್ಮದ ಬಡಜನರ ಸೇವೆಗಾಗಿ ನಿವೇಶನವನ್ನೂ ಕೊಡುಗೆಯಾಗಿ ನೀಡಿದ್ದರು.
ಮೃತರ ಅಂತ್ಯಕ್ರಿಯೆಯು ಆ. 19 ರಂದು ಮಧ್ಯಾಹ್ನ 3-00 ಗಂಟೆಗೆ ಶಿರ್ವ ಆರೋಗ್ಯ ಮಾತೆಯ ದೇಗುಲದಲ್ಲಿ ನಡೆಯಲಿದೆ. ಮೃತರ ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ಬೆಳಗ್ಗೆ 11-00ರಿಂದ ಶ್ರೀ ಸಿದ್ಧಿವಿನಾಯಕ ದೇಗುಲದ ಬಳಿಯ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಿದೆ.