ಮುಂಬಯಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸುವ ಸುದ್ದಿಯನ್ನು ಪ್ರಖ್ಯಾತ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು ತಳ್ಳಿ ಹಾಕಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಮಾಧುರಿ ದೀಕ್ಷಿತ್ ಅವರು ‘ಇದು ಸುಳ್ಳು ಸುದ್ದಿ ಮತ್ತು ಕೇವಲ ಊಹಾತ್ಮಕ’ ಎಂದಿದ್ದಾರೆ.
ಜೂನ್ ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಸಾಧನೆಗಳನ್ನು ವಿವರಿಸಿದ್ದರು. ಆ ಬಳಿಕ ಮಾಧುರಿ ಅವರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು.
ಆ ವಿಚಾರಕ್ಕೆ ಇನ್ನಷ್ಟು ಪುಷ್ಠಿ ನೀಡುವ ಹಾಗೆ ಮಹಾರಾಷ್ಟ್ರದ ಬಿಜೆಪಿ ನಾಯಕರೊಬ್ಬರು ಮಾಧುರಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಪಕ್ಷ ಪರಿಗಣಿಸುತ್ತಿದೆ ಎಂದು ಹೇಳಿದ್ದರು. ಮಾಧುರಿ ಅವರಿಗೆ ಪುಣೆ ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಚಿಂತಿಸಲಾಗಿದೆ ಎಂದಿದ್ದರು.