ಆಯುರ್ವೇದದ ಮಹತ್ವ ಸಾರುವ “ಮಧುರ ಕಾವ್ಯ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಜುಲೈ 21ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಹಿರಿಯ ನಟ ದೇವರಾಜ್ ಅವರು ಟ್ರೇಲರ್ ಬಿಡುಗಡೆ ಮಾಡಿ, ಹೊಸ ತಂಡದ ಬೆನ್ನು ತಟ್ಟಿದ್ದಾರೆ.
ಆಯುರ್ವೇದದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲೆಂದೇ ಸ್ವತಃ ಆಯುರ್ವೇದ ವೈದ್ಯರಾಗಿರುವ ಮಧುಸೂದನ್ ಅವರು “ಮಧುರಕಾವ್ಯ’ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲೂ ಅಭಿನಯಿಸಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ದೇವರಾಜ್, “ಎಲ್ಲೂ ಸುಳಿವನ್ನು ಬಿಟ್ಟುಕೊಡದೇ ಟ್ರೇಲರ್ ಅನ್ನು ಇಂಟರೆಸ್ಟಿಂಗ್ ಆಗಿ ಮಾಡಿದ್ದಾರೆ. ನಿರ್ದೇಶಕರು ಆಯುರ್ವೇದ ಡಾಕ್ಟರ್ ಅಂತ ಕೇಳಿ ತುಂಬಾ ಸಂತೋಷವಾಯಿತು. ಕಥೆ ಬಗ್ಗೆ ಕೇಳಿದೆ, ನಿಜಕ್ಕೂ ಒಳ್ಳೆಯ ಆಲೋಚನೆ. ಅಲೋಪತಿ ಬಗ್ಗೆ ಮುಂಚೆ ಅದೆಷ್ಟು ನಂಬಿಕೆ ಇತ್ತು. ಅದೀಗ ಕಡಿಮೆಯಾಗುತ್ತಿದೆ. ಆಯುರ್ವೇದ ಬಗ್ಗೆ ಕುತೂಹಲ ಜಾಸ್ತಿಯಾಗಿದೆ. ಜನ ಕೂಡ ಅತ್ತ ವಾಲಿದ್ದಾರೆ. ಇವರ ಇಡೀ ಫ್ಯಾಮಿಲಿ ನಾಟಿ ವೈದ್ಯರು ಅಂತ ಗೊತ್ತಿರಲಿಲ್ಲ. ಅದನ್ನೇ ಮುಂದುವರೆಸಿಕೊಂಡು ಹೋಗಿ’ ಎನ್ನುತ್ತಾ ಶುಭ ಹಾರೈಸಿದರು.
ನಾಯಕ ಕಂ ನಿರ್ದೇಶಕ ಮಧುಸೂದನ್ ಮಾತನಾಡುತ್ತಾ, “ನಮ್ಮ ಚಿತ್ರಕ್ಕೆ ಹರಸಲು ದೇವರಾಜ್ ಅವರು ಬಂದಿರೋದು ನನ್ನ ಅದೃಷ್ಟ. ಒಳ್ಳೆಯ ಉದ್ದೇಶಕ್ಕೆ ಯಾವಾಗಲೂ ಪ್ರೋತ್ಸಾಹ ಇದೆ ಅಂತ ಗೊತ್ತಾಯಿತು. ಆ ದೇವರು ನನ್ನನ್ನು ಸಿನಿಮಾ ಮಾಡುವ ಲೆವೆಲ್‌ಗೆ ತಂದಿದ್ದಾರೆ. ಜೀವಭಯ ಎಲ್ಲರಿಗೂ ಇರುತ್ತದೆ. ಮಾತ್ರೆಗಳನ್ನು ತಿಂದರೆ ಏನಾಗುತ್ತೋ ಎಂಬ ಭಯ ಇದೆ. ಹಣಕ್ಕೋಸ್ಕರ ಕಂಪನಿಗಳು ಜನರನ್ನು ಯಾವ ರೀತಿ ಮೋಸಪಡಿಸುತ್ತಾರೆ ಅಂತ ನಮ್ಮ ಚಿತ್ರದಲ್ಲಿ ಹೇಳಿದ್ದೇವೆ.
ಆಯುರ್ವೇದದಲ್ಲಿ ಸರ್ವರೋಗಗಳಿಗೂ ಪರಿಹಾರವಿದೆ. ಹಣ ಎಂಬುದನ್ನು ಬದಿಗಿಟ್ಟು ಸಮಾಜಸೇವೆ ಅಂತ ಈ ಸಿನಿಮಾ ಮಾಡಿದ್ದೇವೆ. ಎಲ್ಲರೂ ಬಂದು ನೋಡಿ ತಿಳಿದುಕೊಳ್ಳಲಿ ಅನ್ನುವುದೇ ನಮ್ಮ ಉದ್ದೇಶ. ಬೆಸ್ಟ್ ಫುಡ್ ಈಸ್ ಬೆಸ್ಟ್ ಮೆಡಿಸಿನ್. ನಮ್ಮ ಬಹುತೇಕ ಖಾಯಿಲೆಗಳಿಗೆ ಹಿತ್ತಲ ಗಿಡದಲ್ಲೇ ಮದ್ದಿದೆ. ಹಿತ್ತಲ ಗಿಡವನ್ನು ಹೇಗೆ ಬಳಸಿಕೊಳ್ಳಬೇಕು ಹಾಗೂ ಒತ್ತಡದಿಂದ ರೋಗಗಳು ಹೇಗೆ ಹೆಚ್ಚಾಗುತ್ತವೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ’ ಎಂದು ಹೇಳಿದರು.
ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮಧುಸೂದನ್ ಕ್ಯಾತನಹಳ್ಳಿ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಾಯಕಿಯ ಪಾತ್ರವಿಲ್ಲ.ನಾಯಕನ ತಾಯಿಯಾಗಿ ರಂಗಭೂಮಿ ನಟಿ ಯಶೋಧ ಅವರು ಕಾಣಿಸಿಕೊಂಡಿದ್ದು, ಖಳನಾಯಕನಾಗಿ ರಾಜಕುವರ್ ನಾಯಕ್ ನಟಿಸಿದ್ದಾರೆ. ಸತೀಶ್ ಮೌರ್ಯ ಅವರ ಸಂಗೀತ ಸಂಯೋಜನೆಯ 4 ಹಾಡುಗಳು ಚಿತ್ರದಲ್ಲಿದೆ.