“ನಮ್ಮ ಪರಿವಾರ ‘ಅಂತ ಒಂದು ಗ್ರೂಪ್ ಮಾಡಿಕೊಂಡಿದ್ದೇವೆ. ಅದರಲ್ಲಿ ಮನೆಯ ಹಿರಿಯರು, ಅಂದರೆ-ದೊಡ್ಡಪ್ಪ, ಅಜ್ಜ, ಅಜ್ಜಿ, ಮಾವ ಹೀಗೆ ಎಲ್ಲರನ್ನೂ ಸೇರಿಸಿದ್ದೇವೆ. ಈ ಗ್ರೂಪ್ ಒಂಥರಾ ಬದುಕಿನ ಗೈಡ್ ಇದ್ದಹಾಗೆ. ಯಾರಿಗೆ ಏನೇ ಆದರೂ, ಯಾರಿಗೆ ಏನೇ ಬೇಕಾದರೂ ಗ್ರೂಪ್ ನೆರವಾಗುತ್ತದೆ. ಹೀಗಾಗಿ, ಕಿರಿಯರಿಗೆ ಒಂಥರಾ ಆತ್ಮಸ್ಥೈರ್ಯ ಹೆಚ್ಚಾಗಿರುತ್ತದೆ. ಒಂದು ಸಲ ಹೀಗಾಯ್ತು. ನಮ್ಮ ಮಾವನಿಂದ ಒಂದು ಸಂದೇಶ ಬಂತು;
“ನನ್ನ ಹೆಂಡತಿಯ ಅಜ್ಜಿ ನಮ್ಮ ಮನೆಗೆ ಬಂದಿದ್ದಾರೆ. ಅವರು ಮಡಿ ಜಾಸ್ತಿ. ಸ್ನಾನ, ಪೂಜೆ ಎಲ್ಲವೂ ಜೋರು. ಹೀಗಾಗಿ, ಅವರಿಗೆ ಮಡಿಯಿಂದ ಶುದ್ದವಾಗಿ ಸ್ನಾನ ಮಾಡಲು ಯಾವುದಾದರೂ ವಿಶೇಷವಾದ ಸೋಪ್ ಬೇಕಂತೆ. ಗ್ರೂಪ್‌ನಲ್ಲಿ ಯಾರಾದರೂ ಈ ಸಮಸ್ಯೆಗೆ ಪರಿಹಾರ ಕೊಡಿ’ ಅಂತ ವಿನಂತಿಸಿದರು. ಅದನ್ನು ಓದಿದ ಎಲ್ಲರಿಗೂ ತಲೆಯಲ್ಲಿ ಹುಳು ಬಿಟ್ಟುಕೊಂಡಂತೆ ಆಯಿತು. ಈ ಜಗತ್ತಿನಲ್ಲಿ ಮಡಿ ಮಾಡುವವರಿಗೆ ವಿಶೇಷವಾದ ಸೋಪ್ ಯಾರು ತಯಾರು ಮಾಡುತ್ತಾರೆ?
ತಯಾರು ಮಾಡಿದರೂ ಅಂತಿಟ್ಟುಕೊಳ್ಳಿ, ಅವರೂ ಕೂಡ ಮಡಿಯಿಂದಲೇ ಈ ಕೆಲಸ ಮಾಡಿರುತ್ತಾರೆ ಅನ್ನೋ ಗ್ಯಾರಂಟಿ ಏನು? ಹೀಗೆಲ್ಲ ಯೋಚನೆ ಬಂದದ್ದು. ಇದು ಸರಿದು ಹೋಗುವ ಹೊತ್ತಿಗೆ -“ಮಡಿಮಿಕ್ಸ್ ‘ ಸೋಪು ಇದೆ ಅಂತ ಮೆಸೇಜ್ ಬಂತು. ನೋಡಿ ಶಾಕ್, ಈ ಸೋಪು ಯಾವುದು? ಯಾರೋ ಇವರಿಗಾಗಿಯೇ ತಯಾರಿಸಿರಬೇಕು ಅಂದು ಕೊಂಡೆವು. ನೋಡಿದರೆ, ಆ ಸಂದೇಶ ಹಾಕಿದ್ದು ನನ್ನ ಮಗನೇ. ಆ ನಂತರ ಅವನು, ಒಂದು ಒಕ್ಕೋಣೆ ಬರೆದ: “ಇದರ ನಿಜವಾದ ಹೆಸರು ಮೆಡಿಮಿಕ್ಸ್ ಅಂತ. ನೀವು ಆ ಸೋಪನ್ನು ಅಜ್ಜಿಗೆ ಕೊಡುವಾಗ “ಮಡಿ’ಮಿಕ್ಸ್ ಅಂತ ಹೇಳಿಕೊಡಿ.
ಹೀಗೆ ಮಾಡಿದರೆ, ಅಜ್ಜಿ ಏನು, ಅವರಜ್ಜಿ ಕೂಡ ಸ್ನಾನದ ಜೊತೆ ಬಟ್ಟೆ ಪಾತ್ರೆಯಲ್ಲಿ ಶುಚಿ ಮಾಡುತ್ತಾರೆ’ ಅಂತ ಹೇಳಿದ್ದಾನೆ. ಈ ಮಾಹಿತಿಯನ್ನು ತಕ್ಷಣ ಅಜ್ಜಿಗೆ ತಲುಪಿಸಿದೆ. ಮಾವ ಎರಡು ದಿನ ನಂತರ, “ಒಂದು ಡಜನ್ ಮಡಿಮಿಕ್ಸ್ ಸೋಪು ಬೇಕು. ಕಳುಹಿಸಿಕೊಡಿ. ಮೊನ್ನೆ ನಿಮ್ಮ ಸಹಕಾರದಿಂದ ಸೋಪನ್ನು ಕಳುಹಿಸಿಕೊಟ್ಟೆ. ಅಜ್ಜಿ ಬಳಸಿ ಆನಂದ ತುಂದಿಲರಾಗಿದ್ದಾರೆ. ಆದರೆ, ಇಲ್ಲಿ ಅಷ್ಟೊಂದು ಸೋಪು ದೊರೆಯುತ್ತಿಲ್ಲ’ ಅಂತ ಮೆಸೇಜ್ ಹಾಕಿದರು. ಕೊನೆಗೆ ಯಾವುದೋ ಸಮಸ್ಯೆಗೆ ಪರಿಹಾರ ಕಲ್ಪಿಸುವುದರ ಜೊತೆಗೆ ಪರಿವಾರ ಗ್ರೂಪ್‌ನಿಂದ ಪರಿಹಾರ ಕೊಡುವಂತಾಯಿತು.
ಗ್ರೂಪ್: ನಮ್ಮ ಪರಿವಾರ
ಅಡ್ಮಿನ್: ಬಾಲಾಜಿ ಟಿ.ಆರ್