ಮದ್ದೂರು: ತಾಲ್ಲೂಕು ಭಾರತೀನಗರ ಸಮೀಪದ ದೊಡ್ಡರಸಿನಕೆರೆ ಗ್ರಾಮದ ಶ್ರೀಸಣ್ಣಕ್ಕಿರಾಯಸ್ವಾಮಿ ದೇವಾಲಯದ ಮುಂಬಾಗಿಲಿಗೆ ಬೀಗ ಹಾಕಿದ ಹಿನ್ನೆಲೆಯಲ್ಲಿ ದೇವರ ಬಸವ ಬೀಗ ತೆಗೆಸಲು ಕಾದುಕುಳಿತಿದೆ.
ದೊಡ್ಡರಸಿನಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಸಣ್ಣಕ್ಕಿರಾಯಸ್ವಾಮಿ ದೇವಾಲಯಕ್ಕೆ ಕಳೆದ 8 ದಿನಗಳಿಂದ ಬೀಗ ಹಾಕಲಾಗಿದ್ದು, ಈ ಹಿನ್ನೆಲೆಯಲ್ಲಿ ದೇವರ ಬಸವ ದರ್ಶನ ಪಡೆಯಲು ದೇವಾಲಯದ ಮುಂಬಾಗಿಲಿನ ಮುಂದೆ ಕಾದು ನಿಂತಿದೆ.
ಗಂಡ ಹೆಂಡಿತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಎರಡು ಗುಂಪುಗಳ ನಡುವಿನ ಶೀಥಲ ಸಮರದಿಂದಾಗಿ ದೇವಸ್ಥಾನದ ಬಾಗಿಲು ಮುಚ್ಚಿದಂತಾಗಿದೆ.
ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಗ್ರಾಮದ ಶ್ರೀಸಣ್ಣಕ್ಕಿರಾಯಸ್ವಾಮಿ ಬಸವ ಪ್ರತೀ ಸೋಮವಾರ ಗ್ರಾಮದಿಂದ ದೇವಸ್ಥಾನಕ್ಕೆ ಬಂದು ಸಣ್ಣಕ್ಕಿರಾಯಸ್ವಾಮಿ ದೇವರ ದರ್ಶನ ಪಡೆದು ಭಕ್ತಾಧಿಗಳಿಗೆ ಆಶೀರ್ವಾದ ನೀಡಿ ಮತ್ತೆ ಗ್ರಾಮಕ್ಕೆ ತೆರಳುತ್ತಿತ್ತು. ಅದರಂತೆ ಇಂದು ಸೋಮವಾರ ದೇವಸ್ಥಾನಕ್ಕೆ ಬಂದಾಗ ಎರಡು ಗುಂಪುಗಳ ಪ್ರತಿಷ್ಠೆಯಿಂದ ದೇವಾಲಯ ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿತ್ತು. ಬಸವ ಸಂಜೆವವರೆವಿಗೂ ಅಲ್ಲೇ ನಿಂತು ಭಕ್ತಾಧಿಗಳಿಗೆ ಆಶೀರ್ವಾದ ನೀಡಿದ್ದು ಕಂಡುಬಂದಿತು.
ಇದನ್ನೂ ಓದಿ:ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ
ಗ್ರಾಮದ ಎರಡು ಗುಂಪುಗಳ ಗಲಾಟೆಯಿಂದ ದೇವಸ್ಥಾನ ಬಂದ್ ಆಯಿತು. ಇದರಿಂದ ದೇವರಿಗೆ ನಿತ್ಯ ಪೂಜೆ ಇಲ್ಲದಂತಾಗಿದೆ. ದೇವಸ್ಥಾನಕ್ಕೆ ಬೀಗ ಹಾಕಿ ಟ್ರಸ್ಟ್ನ ಅಧ್ಯಕ್ಷ ಜೈಪ್ರಕಾಶ್ಗೌಡ ನಾಪತ್ತೆಯಾಗಿದ್ದಾರೆ. ಇದರಿಂದ ಬಸವ ಗೇಟ್ನ ಮುಂದೆ ಅಲುಗಾಡದೆ ರಾತ್ರಿಯಾದರೂ ಕಾದು ಕುಳಿತಿದೆ. ಗ್ರಾಮಸ್ಥರು ಎಷ್ಟೇ ಮನವಿ ಮಾಡಿದರೂ ದೇವಸ್ಥಾನದ ಸ್ಥಳದಿಂದ ಕದಲದಿರುವುದರಿಂದ ಗ್ರಾಮದ ಮುಖಂಡರು ಯಜಮಾನರು ಇದನ್ನು ನೋಡಿ ಏನೂ ಮಾಡಲಾಗದೆ ಮೂಕ ಪ್ರೇಕ್ಷಕರಾಗಿದ್ದಾರೆ.