ಭಾರತೀನಗರ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ತವರು ಕ್ಷೇತ್ರ ಮದ್ದೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಎಐಸಿಸಿ ಅಭ್ಯರ್ಥಿಗಳ 1 ಮತ್ತು 2ನೇ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಮದ್ದೂರು ಕ್ಷೇತ್ರಕ್ಕೆ ಮಾತ್ರ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹೀಗಾಗಿ ಎಲ್ಲರಲ್ಲೂ ಕುತೂಹಲ ಮೂಡಿದೆ.
ಅಚ್ಚರಿ: ಕಾಂಗ್ರೆಸ್ ಟಿಕೆಟ್‌ಗಾಗಿ ಎಸ್. ಗುರುಚರಣ್ ಹಾಗೂ ಕದಲೂರು ಉದಯ್ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಕಾಂಗ್ರೆಸ್ ಟಿಕೆಟ್ ಕದಲೂರು ಉದಯ್ ಅವರಿಗೆ ಖಚಿತ ಎಂದು ಹೇಳಲಾಗುತ್ತಿದೆ. ಅಲ್ಲದೇ, ಮದ್ದೂರು ಕ್ಷೇತ್ರದ ಕಾಂಗ್ರೆಸ್ ವಿಚಾರ ಬಹಿರಂಗ ಗೊಳಿಸದೆ ಇರುವುದು ಅಚ್ಚರಿಗೆ ಕಾರಣವಾಗಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹೋದರ ಎಸ್.ಶಂಕರ್ ಪುತ್ರ ಎಸ್.ಗುರುಚರಣ್ ಮತ್ತು ಉದ್ಯಮಿ ಕಾಂಗ್ರೆಸ್ ಮುಖಂಡ ಕದಲೂರು ಉದಯ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೊದಲ ಮತ್ತು 2ನೇ ಪಟ್ಟಿಯಲ್ಲಿ ಮದ್ದೂರು ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಿಸಿಲ್ಲ. ಹೀಗಾಗಿ ಸಹಜವಾಗಿಯೇ ಕ್ಷೇತ್ರದಲ್ಲಿ ಸಾಕಷ್ಟು ಗೊಂದ ಲಕ್ಕೆ ಕಾರಣವಾಗಿದೆ.
ಗುರುವಿಗೆ ಕೈ ಕೊಡ್ತಾರ ಡಿಕೆಶಿ?: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರಿಗೆ ಗುರುಗಳಾಗಿದ್ದಾರೆ. ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರಲ್ಲಿ ಎಸ್.ಎಂ.ಕೃಷ್ಣ ಅವರ ತಮ್ಮನ ಮಗನಿಗೆ ಟಿಕೆಟ್ ಕೊಡ್ತಾರಾ ಅಥವಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು ಮುಂದಾಳತ್ವ ವಹಿಸಿದ ಕದಲೂರು ಉದಯ್‌ಗೆ ಕೊಡ್ತಾರಾ?. ಅಲ್ಲದೇ, ಡಿ.ಕೆ.ಶಿವಕುಮಾರ್ ಗುರುವಿಗೆ ಕೈಕೊಡ್ತಾರಾ ಎಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿದೆ.
ಬಿಜೆಪಿ ಟಿಕೆಟಿಗೂ ಪೈಪೋಟಿ: ಮದ್ದೂರು ವಿಧಾನಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಕಾವು ಹೆಚ್ಚಾಗುತ್ತಿದ್ದಂತೆ ಬಿಜೆಪಿ ವಲಯದಲ್ಲೂ ಟಿಕೆಟ್‌ಗಾಗಿ ಪೈಪೋಟಿ ಎದುರಾಗಿದೆ. ಬಿಜೆಪಿಯಿಂದ ಮನ್‌ಮುಲ್ ನಿರ್ದೇಶಕರಾದ ಎಸ್.ಪಿ.ಸ್ವಾಮಿ ಮತ್ತು ಎಂ.ರೂಪಾ ನಡುವೆ ಟಿಕೆಟ್ ಪೈಪೋಟಿ ಏರ್ಪಟ್ಟಿದೆ. ಇವರಿಬ್ಬರ ಹೆಸರನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ಹೈಕಮಾಂಡ್ ಸಮಿತಿಗೆ ಶಿಫಾರಸ್ಸು ಮಾಡಿದೆ. ಈ ನಡುವೆ ಮೂಲ ಮತ್ತು ವಲಸಿಗ ಬಿಜೆಪಿ ಎಂಬ ತಿಕ್ಕಾಟ ಶುರುವಾಗಿದೆ.
ಸಕ್ರಿಯ ರಾಜಕಾರಣ: 2019ರಲ್ಲಿ ನಡೆದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರೂಪಾ ಗೆಲುವು ಸಾಧಿಸಿದ್ದರು. ಮೊದಲ ಬಾರಿಗೆ ಮದ್ದೂರು ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದು ಇತಿಹಾಸ ಸೃಷ್ಟಿಸಿದ್ದರು. ಎಸ್.ಪಿ.ಸ್ವಾಮಿ ಅವರು ಜಿಪಂನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದರು. ನಂತರ ದಿನಗಳಲ್ಲಿ ಜಿಲ್ಲಾ ಹಾಲು ಒಕ್ಕೂಟಕ್ಕೂ ಸ್ಪರ್ಧಿಸಿ ಜೆಡಿಎಸ್ ಬಂಡಾಯವಾಗಿ ಆಯ್ಕೆಯಾದರು. ಕಾಲಕ್ರಮೇಣ ಬಿಜೆಪಿಗೆ ಸೇರ್ಪಡೆಯಾಗಿ ಬಿಜೆಪಿಯಲ್ಲೇ ಸಕ್ರೀಯ ರಾಜಕಾರಣ ಮಾಡಲು ಪ್ರಾರಂಭಿಸಿದರು. ಈ ಮೊದಲು ಎಸ್.ಪಿ.ಸ್ವಾಮಿ ಕಳೆದ 15 ವರ್ಷಗಳಿಂದಲೂ ಅವರ ಪುತ್ರ ಶ್ರೀನಿಧಿಗೌಡರ ಹೆಸರಿನಲ್ಲಿ ಹಲವಾರು ಸಮಾಜಮುಖೀ ಕೆಲಸ ಮಾಡುತ್ತಿದ್ದರು. ಈಗ ಬಿಜೆಪಿ ಟಿಕೆಟ್‌ಗಾಗಿ ಇಬ್ಬರಲ್ಲೂ ಪೈಪೋಟಿ ಏರ್ಪಟ್ಟಿದೆ.
ಜೆಡಿಎಸ್‌ನಲ್ಲಿ ಗೊಂದಲವಿಲ್ಲ : ಹ್ಯಾಟ್ರಿಕ್ ಗೆಲುವಿನತ್ತ ಡಿ.ಸಿ.ತಮ್ಮಣ್ಣ ಉತ್ಸಾಹದಿಂದ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಕಿರುಗಾವಲು ಕ್ಷೇತ್ರದಲ್ಲಿ ಡಿ.ಸಿ.ತಮ್ಮಣ್ಣ 1999 ರಲ್ಲಿ ಪ್ರಥಮವಾಗಿ ರಾಜಕಾರಣ ಪ್ರವೇಶ ಮಾಡಿದರು. ಅಂದಿನಿಂದ ಇಂದಿನವರೆಗೂ ಕಾರ್ಯಕರ್ತರನ್ನು ಸಂಘಟಿಸುತ್ತ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿದ್ದಾರೆ. ತಮ್ಮಣ್ಣ ಕಾಂಗ್ರೆಸ್‌ನಲ್ಲಿ 2 ಬಾರಿ, ಜೆಡಿಎಸ್‌ನಲ್ಲಿ 2 ಬಾರಿ ಆಯ್ಕೆಗೊಂಡಿದ್ದಾರೆ. ಈಗ ಮತ್ತೂಮ್ಮೆ ಜೆಡಿಎಸ್‌ನಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇವರ ನಡುವೆ ಯಾವುದೇ ಗೊಂದಲವಿಲ್ಲ.
ತಮ್ಮಣ್ಣ ಗೆಲುವು ಸುಗಮ?: ಕಾಂಗ್ರೆಸ್‌ನಲ್ಲಿ ಉದಯ್‌ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಹಳೆ ಕಾಂಗ್ರೆಸಿಗರು ಮತ್ತು ಗುರುಚರಣ್ ಬೆಂಬಲಿಗರು ಬಂಡಾಯವೇಳುತ್ತಾರೆ. ಅದೇ ರೀತಿ ಬಿಜೆಪಿಯಲ್ಲೂ ಎಸ್.ಪಿ.ಸ್ವಾಮಿ ಅವರಿಗೆ ಟಿಕೆಟ್ ಕೊಟ್ಟರೆ ಹಳೇ ಬಿಜೆಪಿಗರು ಬಂಡಾಯವೇಳುವುದು ಖಚಿತವಾಗಿದೆ. ಇವರ ನಡುವೆ ತಮ್ಮಣ್ಣ ಅವರ ಗೆಲುವು ಸುಗಮವಾಗಲಿದೆ ಎಂಬುವುದು ಕ್ಷೇತ್ರದ ಜನರ ಮಾತಾಗಿದೆ.
–ಅಣ್ಣೂರು ಸತೀಶ್