Advertisement
1980ರಲ್ಲಿ “ಉದಯವಾಣಿ’ ಆಯೋಜಿಸಿದ್ದ ಕುಗ್ರಾಮ ಗುರುತಿಸಿ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಎರಡನೇ ಕುಗ್ರಾಮ ಎಂದು ಗುರುತಿ ಸಲ್ಪಟ್ಟಿದ್ದ ಮಡಪ್ಪಾಡಿ ಅನಂತರದಲ್ಲಿ ಆ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಶ್ರಮ ಪಡುತ್ತಿದೆ.
Related Articles
Advertisement
ಅಭಿವೃದ್ಧಿಗೊಳ್ಳಬೇಕಿದೆ ಸಂಪರ್ಕ ರಸ್ತೆ
ಮಡಪ್ಪಾಡಿಯನ್ನು ಹಾದು ಹೋಗುವ ಎಲಿಮಲೆ-ಸೇವಾಜೆ-ಮಡಪ್ಪಾಡಿ- ಕಂದ್ರಪ್ಪಾಡಿ- ಗುತ್ತಿಗಾರು ಸಂಪರ್ಕ ರಸ್ತೆ ಐದು ಗ್ರಾಮಗಳ ಸಂಪರ್ಕದ ಕೊಂಡಿ. ಈ ರಸ್ತೆಯ ಕೆಲವು ಭಾಗ ಅಭಿವೃದ್ಧಿಗೊಂಡಿದ್ದರೂ ಪೂರ್ತಿ ಅಭಿವೃದ್ಧಿಯಾಗಿಲ್ಲ. ಸಂಪೂರ್ಣ ಅಭಿವೃದ್ಧಿಯಾದರೆ ವ್ಯಾವಹಾರಿಕವಾಗಿ ಹೊರ ಊರಿಗೆ ತೆರಳುವವರಿಗೆ ಅನು ಕೂಲವಾಗುತ್ತದೆ. ಈಗ ಮಡಪ್ಪಾಡಿಗೆ ಒಂದೆರಡು ಬಸ್ ಸಂಪರ್ಕ ಮಾತ್ರ ಇದೆ. ರಸ್ತೆ ಅಭಿವೃದ್ಧಿಯಾದರೆ ಬಸ್ ಓಡಾಟ ಹೆಚ್ಚಿ ಗ್ರಾಮದ ಅಭಿವೃದ್ಧಿಗೆ ಸಹಾಯಕ ವಾಗಲಿದೆ. 80ರ ದಶಕದಲ್ಲಿ ಸಾವಿರ ಆಳುಗಳ ಶ್ರಮದಲ್ಲಿ ಈ ರಸ್ತೆಯನ್ನು ಗ್ರಾಮಸ್ಥರೇ ಅಭಿವೃದ್ಧಿ ಮಾಡಿದ್ದು ಆಗಿನ ಕಾಲದಲ್ಲಿ ಬಸ್ ಸಂಪರ್ಕಕ್ಕೆ ನಾಂದಿಯಾಗಿತ್ತು ಎಂದು ಹಿರಿಯ ಗ್ರಾಮಸ್ಥರು ಈಗ ನೆನಪಿಸಿಕೊಳ್ಳುತ್ತಾರೆ. ಗ್ರಾಮದಲ್ಲಿ ಒಂದು ಪ್ರಾಥಮಿಕ ಶಾಲೆ, 2 ಕಿರಿಯ ಪ್ರಾಥಮಿಕ ಶಾಲೆ ಇದೆ.
ನೆಟ್‌ವರ್ಕ್ ತಲೆನೋವು
ಮಡಪ್ಪಾಡಿ ಗ್ರಾಮವು ತೀರಾ ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದು ಗ್ರಾಮದ ಬಹುತೇಕ ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಹೇಳತೀರದು. ಹಾಡಿಕಲ್ಲು, ಕಡ್ಯ ಭಾಗಗಳಲ್ಲಿ 80 ಮನೆಗಳಿದ್ದು ಇಲ್ಲಿ ಮೊಬೈಲ್ ಸಂಪರ್ಕಕ್ಕಾಗಿ ಲಿಂಕ್ ಟವರ್ ಸ್ಥಾಪಿಸಲು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದಲ್ಲದೆ ಇಲ್ಲಿನ ಪ್ರತೀ ತೋಟಗಳಿಗೂ ಕಾಡು ಪ್ರಾಣಿಗಳ ಹಾವಳಿ ಇದ್ದು ಕೃಷಿ ನಾಶವಾಗುತ್ತಿದೆ. ಕೆಲವೆಡೆ ಆನೆ ಕಂದಕ ಮಾಡಿದ್ದರೂ ಪೂರ್ಣಪ್ರಮಾಣದಲ್ಲಿ ಅದು ಪ್ರಯೋಜನಕ್ಕೆ ಬರುತ್ತಿಲ್ಲ.
ಕಡ್ಯದಲ್ಲಿ ಇತ್ತೀಚೆಗಷ್ಟೇ ಒಂದು ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕೋಟೆಗುಡ್ಡೆ ಪ್ರದೇಶದ ರಸ್ತೆ ಅಭಿವೃದ್ಧಿಯಾದರೆ ಜನರಿಗೆ ಮತ್ತಷ್ಟು ಖುಷಿಯಾಗಲಿದೆ.
ಹಳದಿ ರೋಗ
ಗ್ರಾಮದಲ್ಲಿ ಅಡಿಕೆಗೆ ಬಾಧಿಸಿದ ಹಳದಿ ರೋಗದಿಂದಾಗಿ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಅವರಿಗೆ ಸೂಕ್ತ ಪರಿಹಾರ ದೊರಕಬೇಕಿದೆ. ಈ ಗ್ರಾಮವು ಸುಳ್ಯ ಠಾಣೆ ವ್ಯಾಪ್ತಿಗೆ ಬರುತ್ತಿದ್ದು ಇದನ್ನು ಸುಬ್ರಹ್ಮಣ್ಯ ಠಾಣೆಗೆ ಸೇರಿಸಬೇಕೆಂಬ ಆಗ್ರಹವಿದೆ. ಒಟ್ಟಾರೆ ಪುಟ್ಟ ಗ್ರಾಮ ಮಡಪ್ಪಾಡಿ ಅಭಿವೃದ್ಧಿಗೆ ತೆರೆದುಕೊಳ್ಳಲು ಜನಪ್ರತಿನಿಧಿಗಳು, ಸರಕಾರ ಪೂರಕವಾಗಿ ಸ್ಪಂದಿಸಬೇಕಿದೆ.
ದೇಗುಲ, ಮಸೀದಿ, ಚರ್ಚ್ ಇಲ್ಲ
ಮಡಪ್ಪಾಡಿ ಗ್ರಾಮದಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳಿಲ್ಲ. ಗ್ರಾಮದಲ್ಲಿ ಬಹುಮುಖ್ಯವಾಗಿ ಆರಾಧಿಸಿಕೊಂಡು ಬರುತ್ತಿರುವ ಮಡಪ್ಪಾಡಿ ಉಳ್ಳಾಕುಲು ದೈವಸ್ಥಾನ ಹೊರತುಪಡಿಸಿದರೆ ಗ್ರಾಮದೇವರಾಗಿ ಇಲ್ಲಿಯ ಜನ ಗುತ್ತಿಗಾರು ಗ್ರಾಮದಲ್ಲಿರುವ ವಳಲಂಬೆ ಶಂಖಪಾಲ ಸುಬ್ರಹ್ಮಣ್ಯನನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಗ್ರಾಮದ ಕಡ್ಯ ಎಂಬಲ್ಲಿ ಮಂಜುನಾಥ ಸ್ವಾಮಿಯ ಸನ್ನಿಧಿ ಇದೆ ಎಂದು ಹೇಳಲಾಗುತ್ತಿದ್ದರೂ ಯಾವುದೇ ಪೂರಕ ಕುರುಹುಗಳಾಗಲಿ, ದಾಖಲೆಗಳಾಗಲಿ ಲಭ್ಯವಿಲ್ಲ.
ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ: ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಗ್ರಾಮದಲ್ಲಿ ನೆಟ್‌ವರ್ಕ್, ರಸ್ತೆ, ಸಂಚಾರ, ವಿದ್ಯುತ್ ಸಮಸ್ಯೆ ಇದ್ದು ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸುತ್ತಿದ್ದೇವೆ. ಗ್ರಾಮದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. –ಮಿತ್ರದೇವ ಮಡಪ್ಪಾಡಿ, ಗ್ರಾ.ಪಂ. ಅಧ್ಯಕ್ಷರು, ಮಡಪ್ಪಾಡಿ
ಗ್ರಾಮದ ಅಗತ್ಯಕ್ಕೆ ನೆರವು: ಮಡಪ್ಪಾಡಿಯಲ್ಲಿ ಕಳೆದ 8 ವರ್ಷಗಳಿಂದ 12 ಮಂದಿಯ ಮಹಾತ್ಮಾಗಾಂಧಿ ಗ್ರಾಮಸೇವಾ ತಂಡ ತನ್ನ ಶ್ರಮದಾನದ ಮೂಲಕ ಗಮನ ಸೆಳೆದಿದೆ. ತಂಡದ ವತಿಯಿಂದ 235 ಶ್ರಮದಾನ ಸೇವೆ ನಡೆಸಿ ಗ್ರಾಮದ ಅಗತ್ಯಕ್ಕೆ ನೆರವಾಗುತ್ತಿದೆ –ಎಂ. ಡಿ. ವಿಜಯಕುಮಾರ್, ಮಹಾತ್ಮಾಗಾಂಧಿ ಗ್ರಾಮಸೇವಾ ತಂಡದ ಸದಸ್ಯ
-ಕೃಷ್ಣಪ್ರಸಾದ್ ಕೋಲ್ಚಾರ್