ನಂಜನಗೂಡು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಹುಲ್ಲ ಹಳ್ಳಿಯ ಕೆ.ಎಂ.ಮಾದಪ್ಪ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಹದಿನಾರಿನ ಸಿದ್ದರಾಜು ಅವಿರೋಧವಾಗಿ ಆಯ್ಕೆಗೊಂಡರು.
ಕಳೆದ ತಿಂಗಳು ನಡೆದ ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಗಳಿಸಿದ್ದರು. ಸೋಮವಾರ ಎಪಿಎಂಸಿ ಆವರಣದಲ್ಲಿ ನಂಜನಗೂಡು ತಹಶೀಲ್ದಾರ್ ದಯಾನಂದ್ ಎಪಿಎಂಸಿ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ನಡೆಸಿದರು. ಇವರಿಗೆ ಮಂಡ್ಯದ ಎಪಿಎಂಸಿ ಸಹಾಯಕ ನಿರ್ದೇಶಕಿ ಹಾಗೂ ನಂಜನಗೂಡಿನ ಪ್ರಭಾರ ಕಾರ್ಯದರ್ಶಿ ಡಿ.ಆರ್.ಪುಷ್ಟ ಸಾಥ್ ನೀಡಿದರು.
ಸೋಮವಾರ ಬೆಳಗ್ಗೆ 11ರ ವೇಳೆಗೆ ಚುನಾವಣಾ ಸಭಾಂಗಣಕ್ಕೆ ಆಗಮಿಸಿದ ಮಾದಪ್ಪ ಹಾಗೂ ಸಿದ್ದರಾಜು ಕ್ರಮವಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇನ್ಯಾರು ನಾಮಪತ್ರ ಸಲ್ಲಿಸಲಿಲ್ಲ. ದಯಾನಂದ ಮಧ್ಯಾಹ್ನ 2ಕ್ಕೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಘೋಷಣೆ ಮಾಡುವುದಾಗಿ ಹೇಳಿ ಹೊರ ನಡೆದರು. ಮಧ್ಯಾಹ್ನ 2.20ಕ್ಕೆ ಆಗಮಿಸಿದ ದಯಾನಂದ್ ಚುನಾವಣೆ ಪ್ರಕ್ರಿಯೆ ಮುಗಿಸಿ ಮಾದಪ್ಪ ಹಾಗೂ ಸಿದ್ದರಾಜು ಎಪಿಎಂಸಿ ಗಾದಿ ಏರಿದ್ದನ್ನು ಘೋಷಿಸಿ, ಶುಭ ಹಾರೈಸಿದರು.
ಪಕ್ಷಾತೀತ ಸಂಸ್ಥೆ: ಅಧ್ಯಕ್ಷರಾಗಿ ಆಯ್ಕೆಯಾದ ಮಾದಪ್ಪ ಮಾತನಾಡಿ, ಎಪಿಎಂಸಿ ಪಕ್ಷಾತೀತ ವಾಗಿದೆ. ಪಕ್ಷ ರಾಜಕಾರಣ ಬಿಟ್ಟು ಎಲ್ಲರೂ ಒಂದಾಗಿ ರೈತರ ಅಭ್ಯುದಯದಲ್ಲಿ ತೊಡಗಿಕೊಳ್ಳೋಣ ಎಂದರು. ತಾವು ಹಮ್ಮಿಕೊಳ್ಳುವ ನ್ಯಾಯಯುತವಾದ ಯೋಜನೆಗಳಿಗೆ ಸಹಕಾರ ನೀಡುವಂತೆ ಕೋರಿದರು. ಉಪಾಧ್ಯಕ್ಷ ಸಿದ್ದರಾಜು ಮಾತನಾಡಿ, ತಮ್ಮ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಸಮಯದಲ್ಲಿ ಇತ್ತ ಸುಳಿಯದಿದ್ದ ಬಿಜೆಪಿ ಬೆಂಬಲಿತ ನಾಲ್ವರು ಚುನಾವಣೆ ಘೋಷಣೆಯ ವೇಳೆಗೆ ಹಾಜರಿದ್ದರು.
ನಾಮಪತ್ರ ಪರಿಶೀಲನೆಯ ನಂತರ ಘೋಷಣೆ ಮಾತ್ರ ಬಾಕಿ ಇರುವುದನ್ನು ಖಚಿತ ಪಡಿಸಿಕೊಂಡ ಮಾದಪ್ಪ, ಸಿದ್ದರಾಜು ಹಾಗೂ ಇತರ ಬೆಂಬಲಿಗರು ಪ್ರವಾಸಿ ಮಂದಿರದಲ್ಲಿದ್ದ ಸಂಸದ ಆರ್.ಧ್ರುವನಾರಾಯಣ ಅಲ್ಲಿಗೆ ತೆರಳಿ ಸಂತಸ ಹಂಚಿಕೊಂಡು ನೇರವಾಗಿ ಎಪಿಎಂಸಿ ಆವರಣಕ್ಕೆ ಬಂದರು. ಸಮಯ 2 ದಾಟಿ 2.20 ನಿಮಿಷವಾದರೂ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ ಪ್ರಕಟಿಸಬೇಕಿದ್ದ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ ದಯಾನಂದ ಇತ್ತ ಬರಲೇ ಇಲ್ಲ. ಮಾದಪ್ಪ, ಸಿದ್ದರಾಜು ಸಹಿತ ಆರೇಳು ಜನ ಸದಸ್ಯರು ಅವರ ಬರುವಿಗಾಗಿ ಕಾಯುತ್ತಲೇ ಇದ್ದರು.
ಸಭೆಯ ಸಿಂಧುತ್ವ ಪ್ರಶ್ನೆ
22 ನಿಮಿಷ ತಡವಾಗಿ ಸಭಾಂಗಣಕ್ಕೆ ಆಗಮಿಸಿದ ದಯಾನಂದ್ ಇನ್ನೇನು ಆಯ್ಕೆ ಪ್ರಕಟಿಸಬೇಕು ಎಂದಿದ್ದಾಗ ಸದಸ್ಯ ಕೆಂಪಣ್ಣ ಸಭೆಯ ಸಿಂಧುತ್ವ ಪ್ರಶ್ನಿಸಿದರು. ಸಭೆ ಕೋರಂ ಇಲ್ಲ ಹಾಗೂ ಸದಸ್ಯರಲ್ಲದವರು ಸಭೆಯಲ್ಲಿದ್ದಾರೆ, ಹೇಗೆ ಘೋಷಣೆ ಸಾಧ್ಯ? ಸಭೆಯನ್ನೆ ಮುಂದೂಡಿ ಎಂದರು. ಆಗ ಮಧ್ಯೆ ಪ್ರವೇಶಿಸಿದ ಕಾರ್ಯದರ್ಶಿ ಪುಷ್ಪಾ. ಎಲ್ಲರನ್ನು ಹೊರಕಳಿಸಲು ಸೂಚಿಸಿದರು. ಆ ಸಮಯಕ್ಕೆ ಸರಿಯಾಗಿ ನಾಲ್ಕೈದು ನೂತನ ಸದಸ್ಯರು ಒಳಬಂದು ಸಭೆಗೆ ಬಹುಮತ ತಂದರು. ನಂತರ ಚುನಾವಾಣಾಧಿಕಾರಿಗಳು ವಿಜೇತ ಅಧ್ಯಕ್ಷ ಉಪಾಧ್ಯಕ್ಷರ ಹೆಸರನ್ನು ಪ್ರಕಟಿಸಿ ಚುನಾವಣೆಗೆ ತೆರೆ ಎಳೆದರು.
ಎಪಿಎಂಸಿಗೆ ಸರ್ಕಾರ ಮೂವರನ್ನು ನಾಮನಿರ್ದೇಶಿತರನ್ನು ನೇಮಿಸಿದೆ. ನಂಜನ ಗೂಡು ವಿಧಾನಸಭಾ ಕ್ಷೇತ್ರದಿಂದ ಹರಸನಹಳ್ಳಿಯ ಸೋಮೇಶ ಹಾಗೂ ಕೊಂಗಳ್ಳಿಯ ರಾಜೇಶ್ವರಿ, ವರುಣಾ ವಿಧಾನ ಸಭಾ ಕ್ಷೇತ್ರದಿಂದ ಆಲಂಬೂರಿನ ಮೋಹನ್ ಕುಮಾರ್‌ರನ್ನು ನೇಮಿಸಲಾಗಿದೆ. ನಂಜನಗೂಡಿನ ಉಪ ಚುನಾವಣೆಯ ಮೇಲೆ ಕಣ್ಣಿಟ್ಟೇ ಅಧ್ಯಕ್ಷ ಹಾಗೂ ಈ ಮೂವರ ನಾಮಕರಣ ಮಾಡಲಾಗಿದೆ ಎನ್ನಲಾಗಿದೆ. ಉಪಾಧ್ಯಕ್ಷರನ್ನಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ತವರು ಹದಿನಾರಿನ ಸಿದ್ದುರಾಜು ಆಯ್ಕೆಗೊಂಡಿದ್ದಾರೆ.