ವರದಿ: ಸಂತೋಷ ನಾಯಕ
ರಟ್ಟೀಹಳ್ಳಿ: ಐತಿಹಾಸಿಕ ಮದಗದ ಕೆಂಚಮ್ಮನ ಸ್ಥಳದಲ್ಲಿರುವ ಮದಗ ಮಾಸೂರು ಕೆರೆ ಮೈದುಂಬಿ ಧುಮ್ಮಿಕ್ಕಿ ಹರಿಯುತ್ತಿದ್ದು ಜಲಧಾರೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಪ್ರತಿನಿತ್ಯ ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮದಗ ಮಾಸೂರು ಕೆರೆಯ ಒಂದು ಕಡೆ ನೈಸರ್ಗಿಕವಾಗಿ ಜಲಪಾತ ಸೃಷ್ಟಿಯಾಗಿದ್ದು, ಪ್ರವಾಸಿಗರು ಅದರ ಬಳಿ ತೆರಳಲು ದಾರಿ ಇದೆ. ಹತ್ತಿರದಿಂದ ಜಲಪಾತದ ಭೋರ್ಗರೆತದ ಶಬ್ದ ಕೇಳಿದರೆ ಒಂದು ಕ್ಷಣ ಎದೆ ಝಲ್ಲೆನ್ನುತ್ತದೆ. ಅಲ್ಲದೇ ಮನಸ್ಸು ಮುದಗೊಳ್ಳುತ್ತದೆ. ಅಷ್ಟೊಂದು ಸುಂದರ-ರಮಣೀಯ ಸ್ಥಳ ಇದಾಗಿದೆ.
ವಿಹಾರಕ್ಕೆ ಸೂಕ್ತ ಸ್ಥಳ: ಕೊರೊನಾದಿಂದ ಜಡ್ಡು ಹಿಡಿದಿರುವ ದೇಹಗಳಿಗೆ ನವೋಲ್ಲಾಸ ತುಂಬಬೇಕಾದರೆ ಪ್ರಕೃತಿಯ ಸೌಂದರ್ಯ ಸವಿಯೇ ಮದ್ದು ಎನ್ನುವ ಹಾಗೆ ಇಂದಿನ ಕೊರೊನಾ ಮಳೆಗಾಲ ಸಮಯದಲ್ಲಿ ವಿಹಾರ ಮತ್ತು ಇಲ್ಲಿನ ಪ್ರಕೃತಿಯ ಚಿತ್ರಣ ಸವಿಯಲು ಸೂಕ್ತ ಸ್ಥಳವೆಂದು ಸ್ಥಳೀಯರು ಹೇಳುತ್ತಾರೆ.
ವಾರದಿಂದ ಬರುತ್ತಿರುವ ಮಳೆಗೆ ಶಿಕಾರಿಪುರ ತಾಲೂಕಿನ ಆಂಜನಾಪುರ ಡ್ಯಾಂ ತುಂಬಿದ್ದು, ಈಗ ನೀರು ಮದಗದ ಕೆರೆಗೆ ಹರಿದು ಬರುತ್ತಿದೆ. ಮದಗದ ಕೆರೆ ತುಂಬಿ ತುಳುಕುವ ಮೂಲಕ ಕೋಡಿ ಬಿದ್ದಿದ್ದು, ಕುಮದ್ವತಿ ನದಿಗೆ ನೀರು ಸೇರುತ್ತದೆ. ಬೃಹತ್ ಗಾತ್ರದ ಕೆರೆ ಹಾಗೂ ನೈಸರ್ಗಿಕವಾಗಿ ಬೆಳೆದು ನಿಂತ ಗಿಡಮರಗಳು, ಸುತ್ತಮುತ್ತ ಗುಡ್ಡ ಬೆಟ್ಟಗಳು, ನೂರಕ್ಕೂ ಹೆಚ್ಚು ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರಿನ ರಮಣೀಯ ದೃಶ್ಯ ಜೋಗ ಜಲಪಾತ ನೆನಪಿಸುವಂತಿದೆ.