ಶಿರಸಿ: ರಾಜ್ಯದ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ಜಾತ್ರೆ ರಂಗೇರುತ್ತಿದ್ದು, ಶನಿವಾರ ದೇವಿ ದರ್ಶನಕ್ಕೆ ಜನ ಸಾಗರವೇ ಹರಿದು ಬಂದಿದೆ. ಕಳೆದ ಮೂರು ದಿನಗಳಿಂದ ತಾಯಿ ಮಾರಿಕಾಂಬೆ ಗದ್ದುಗೆ ಏರಿ ದರ್ಶನ ನೀಡುತ್ತಿದ್ದು, ಶನಿವಾರ ಮಧ್ಯಾಹ್ನದ ಬಳಿಕ ಜನ ಸಾಗರವೇ ನೆರೆದಿತ್ತು.
ಶುಕ್ರವಾರ ಅಕಾಲಿಕ ಮಳೆಯಾಗಿದ್ದು, ಶನಿವಾರವೂ ಮಳೆ ಬರಬಹುದು ಎಂಬ ಆತಂಕ ಇತ್ತಾದರೂ ಭಕ್ತರು ಅದಕ್ಕೆ ಸಜ್ಜಾಗಿಯೇ ತಾಯಿಯ ದರ್ಶನಕ್ಕೆ ದಾಪುಗಾಲಿಟ್ಟಿದ್ದರು. ಶನಿವಾರ ಸುಮಾರು 80 ಸಾವಿರಕ್ಕೂ ಅಧಿ ಕ ಭಕ್ತರು ತಂಡೋಪ ತಂಡವಾಗಿ ಆಗಮಿಸಿದ್ದು, ಉಡಿ, ಹಣ್ಣು ಕಾಯಿ ಸೇವೆ ಸಮರ್ಪಿಸಿದರು. ಬೇವಿನ ಉಡಿ ಸೇವೆ, ತುಲಾಭಾರ ಸೇವೆ ಕೂಡ ಹೆಚ್ಚಾಗಿ ನಡೆದವು.
ಕಳೆದ ಮೂರು ದಿನಗಳಿಂದ ನಿತ್ಯ 16 ರಿಂದ 17 ಸಾವಿರ ಉಡಿಗಳು, 17 ಸಾವಿರದಷ್ಟು ಕುಂಕುಮಾರ್ಚನೆಗಳು ಅಮ್ಮನಿಗೆ ಸಲ್ಲಿಕೆ ಆದವು. ನಿತ್ಯವೂ ಪ್ರತಿ ಉಡಿಯ ಪರಿಶೀಲನೆ ನಡೆಸಲಾಗುತ್ತಿದ್ದು, ಪ್ರತಿದಿನ ಎರಡು ಸಾವಿರದಷ್ಟು ಉಡಿಯನ್ನು ಪುನಃ ಕಟ್ಟಲಾಗುತ್ತದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ತೇರು ಬೀದಿ, ಪೋಸ್ಟ್ ವೃತ್ತ, ಶಿವಾಜಿ ಚೌಕ, ಮಿರ್ಜಾನಕರ ಪೆಟ್ರೋಲ್ ವೃತ್ತ, ಕೋಣನಬಿಡಕಿ ಪ್ರದೇಶ, ನಟರಾಜ್ ರಸ್ತೆ ಜನರಿಂದ ತುಂಬಿ ತುಳುಕುತ್ತಿತ್ತು. ಮಹಿಳೆಯರು, ಮಕ್ಕಳು ಹಾಗೂ ವೃದ್ಧರೂ ಜಾತ್ರೆಗೆ ಆಗಮಿಸಿ ಸಂತೋಷ ಪಟ್ಟರು.
ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ವಿಐಪಿ ಅತಿಥಿಗಳೂ ಆಗಮಿಸಿದ್ದು ಕೆಲಕಾಲ ಒತ್ತಡಕ್ಕೆ ಕಾರಣವಾಯಿತು. ಸ್ಪೀಕರ್ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಸಚಿವ ಶಿವರಾಮ ಹೆಬ್ಟಾರ್, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಎಸ್.ವಿ.ಸಂಕನೂರು, ಬಣ್ಣದ ಮಠದ ಶ್ರೀಗಳು, ಹೈಕೋರ್ಟ ನ್ಯಾಯಾಧೀಶರೂ ದೇವಿ ದರ್ಶನ ಪಡೆದರು. ಪೊಲೀಸರು, ಕಾರ್ಯಕರ್ತರು ಒತ್ತಡ ನಿಯಂತ್ರಿಸಿದರು. ಕೈಗಾರಿಕಾ ಅಭಿವೃದ್ಧಿ ನಿಗಮದ ನೂತನ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ಶಶಿಧರಯ್ಯ ಅವರು ದೇವಿ ದರ್ಶನ ಪಡೆದೇ ಅಧಿಕಾರ ಸ್ವೀಕರಿಸಿದರು.
ಬಳೆ ಪೇಟೆ, ನಟರಾಜ್ ರಸ್ತೆ, ಅಮ್ಯೂಸಮೆಂಟ್ ಪಾರ್ಕ್‌ಗಳಲ್ಲಿ ಜನ ಹೆಚ್ಚಿದ್ದರು. ಮೋಡ ಕವಿದ ವಾತಾವರಣ ಇದ್ದರೂ ಮಳೆಬಾರದೇ ಇದ್ದುದರಿಂದ ವರ್ತಕರು ಭಕ್ತರು ನಿಟ್ಟುಸಿರು ಬಿಟ್ಟರು. ಭಾನುವಾರ ಜಿಲ್ಲಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡ ದೇವಿ ದರ್ಶನಕ್ಕೆ ಆಗಮಿಸಲಿದ್ದಾರೆ. ರಜಾ ದಿನವಾದ ಭಾನುವಾರ ಭಕ್ತರ ಸಂಖ್ಯೆ ಲಕ್ಷ ದಾಟುವ ನಿರೀಕ್ಷೆ ಇದೆ.