Advertisement

ಎಂ.ಎಸ್. ರಾಮಯ್ಯ ಆಸ್ಪತ್ರೆಗೆ 30 ವೆಂಟಿಲೇಟರ್ ಹಸ್ತಾಂತರ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ

06:53 PM Aug 14, 2020 | Mithun PG |

ಬೆಂಗಳೂರು: ಕೋವಿಡ್-19 ರೋಗಿಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡುತ್ತಿರುವ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾನಿಗಳು ಹಾಗೂ ಸರಕಾರದ ವತಿಯಿಂದ ನೀಡಲಾದ 30 ವೆಂಟಿಲೇಟರುಗಳು ಸೇರಿದಂತೆ ಮತ್ತಿತರೆ ವೈದ್ಯಕೀಯ ಉಪಕರಣಗಳನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಶುಕ್ರವಾರ ಆಸ್ಪತ್ರೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು.

Advertisement

ಜುಲೈ 21ರಂದು ಈ ಆಸ್ಪತ್ರೆಗೆ ಭೇಟಿ ನೀಡಿದ್ದ ಡಿಸಿಎಂ, ಕೋವಿಡ್ ಸೋಂಕಿತರಿಗೆ ಹಾಸಿಗೆಗಳನ್ನು ನೀಡುವಂತೆ ಆಸ್ಪತ್ರೆಯನ್ನು ಕೋರಿದ್ದರು. ಆದರೆ, ವೆಂಟಿಲೇಟರುಗಳು ಸೇರಿದಂತೆ ಮತ್ತಿತರೆ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿ ಅವರ ಬಳಿ ಹೇಳಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸಿಎಂ, ಅಗತ್ಯ ಸಲಕರಣೆಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಭರವಸೆ ನೀಡಿದ 25 ದಿನದಲ್ಲಿ ಎಲ್ಲ ಉಪಕರಣಗಳನ್ನು ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ.

ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವ ಆಸ್ಪತ್ರೆಯ ಪ್ರಯತ್ನಕ್ಕೆ ಸರಕಾರ ಮತ್ತು ದಾನಿಗಳಿಂದ ಅಗತ್ಯ ವೈದ್ಯಕೀಯ ಉಪಕರಣಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಚಿಕಿತ್ಸೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಸಿಗಲಿದೆ ಎಂಬ ವಿಶ್ವಾಸವನ್ನು ಉಪ ಮುಖ್ಯಮಂತ್ರಿ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೋಕುಲ ಎಜುಕೇಶನ್ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್ ಜಯರಾಂ ಹಾಗೂ ಸಿಇಒ  ಎಂ.ಆರ್ ಶ್ರೀನಿವಾಸಮೂರ್ತಿ, ಇಷ್ಟು ಕ್ಷಿಪ್ರವಾಗಿ ಸ್ಪಂದಿಸಿದ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೆ, ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಕೋವಿಡ್ ಬಿಕ್ಕಟ್ಟು ಎದುರಿಸಲು ಸರಕಾರದ ಹೆಗಲಿಗೆ ಹೆಗಲು ಕೊಡಲು ತಮ್ಮ ಆಸ್ಪತ್ರೆ ಸಿದ್ಧವಿದೆ ಎಂದರು.

ಸರಕಾರ ಕೇಳುವ ಮೊದಲೇ ಎಂ.ಎಸ್. ರಾಮಯ್ಯ ಆಸ್ಪತ್ರೆ ಕೋವಿಡ್ ಸೋಂಕಿತರಿಗೆ ತನ್ನಲ್ಲಿದ್ದ ಶೇ.50ರಷ್ಟು ಹಾಸಿಗೆಗಳನ್ನು ಮೀಸಲು ಇಟ್ಟಿತ್ತು. ಒಟ್ಟು 500 ಹಾಸಿಗೆಗಳನ್ನು ಮೀಸಲಿಟ್ಟಿದೆ. ಹೀಗಾಗಿ ಮತ್ತೆ ಏನೇ ಸೌಲಭ್ಯ ಬೇಕಿದ್ದರೂ ನೀಡಲು ಸರಕಾರ ಸಿದ್ಧವಿದೆ. ಈ ಆಸ್ಪತ್ರೆಯಂತೆ ಉಳಿದ ಖಾಸಗಿ ಆಸ್ಪತ್ರೆಗಳು ಕೂಡ ಮುಂದೆ ಬಂದು ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಏನೇ ನೆರವು ಬೇಕಿದ್ದರೂ ಕೊಡಲು ಸರಕಾರ ತಯಾರಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

Advertisement

ನೀಡಿದ್ದು ಏನೇನು?:

ಆಸ್ಪತ್ರೆಗೆ ನೀಡಲಾದ ಒಟ್ಟು 30 ವೆಂಟಿಲೇಟರುಗಳಲ್ಲಿ 20 ವೆಂಟಿಲೇಟರುಗಳನ್ನು ಸರಕಾರ ನೀಡಿದ್ದರೆ, ಉಳಿದ 10 ಅನ್ನು ಕೋವಿಡ್ ಆ್ಯಕ್ಷನ್ ಟೀಮಿನ ಪ್ರಶಾಂತ್ ಪ್ರಕಾಶ್ ದೇಣಿಗೆಯಾಗಿ ನೀಡಿದ್ದಾರೆ. ಜತೆಗೆ, ಅಧಿಕ ಒತ್ತಡದಲ್ಲಿ ಆಮ್ಲಜನಕವನ್ನು ಪೂರೈಸುವ 20 ಎಚ್ಎಫ್ಎನ್’ಸಿಒ ಉಪಕರಣಗಳನ್ನು ಕೋವಿಡ್ ಆಕ್ಷನ್ ಟೀಮ್ ಕೊಟ್ಟಿದೆ. ಯುನೈಟೆಡ್ ವೇ ಸಂಸ್ಥೆಯು ಆರು ಹಾಗೂ ಶ್ರೀರಾಮ್ ಪ್ರಾಪರ್ಟೀಸ್ ಸಂಸ್ಥೆ ಎರಡು ಒಟ್ಟು ಎಂಟು ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ನೀಡಿದೆ.

ಇದೇ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ, ಸರ್ಕಾರ ಕೇಳಿದ ಕೂಡಲೇ ಬೆಲೆಬಾಳುವ ವೈದ್ಯಕೀಯ ಪುಕರಣಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರಲ್ಲದೆ, ಕೋವಿಡ್ ಸಮರದಲ್ಲಿ ಜನರ ಸಹಭಾಗಿತ್ವದಿಂದ ಸರಕಾರಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸುವ ಸ್ಥೈರ್ಯ ಸರಕಾರಕ್ಕೆ ಬಂದಿದೆ ಎಂದು ನುಡಿದರು.

ಒಂದೆಡೆ ಕೋವಿಡ್ ಮಾರಿಯನ್ನು ಎದುರಿಸುತ್ತಲೇ, ಮತ್ತೊಂದೆಡೆ ಎಂ.ಎಸ್. ರಾಮಯ್ಯದಂತಹ ಪ್ರತಿಷ್ಠಿತ ಆಸ್ಪತ್ರೆಗೆ ಸ್ವಾತಂತ್ರ್ಯ ದಿನದ ಮುನ್ನಾ ದಿನವೇ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರ ಮಾಡಿದ್ದು ಸಂತಸ ಉಂಟು ಮಾಡಿದೆ. ದಾನಿಗಳ ನೆರವೂ ಈ ಸಾರ್ಥಕ ಕೆಲಸಕ್ಕೆ ಕಾರಣವಾಗಿದೆ. ಈ ಭಾಗದ ಕೊವಿಡ್ ಸೋಂಕಿತರಿಗೆ ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಈ ಸಂದರ್ಭದಲ್ಲಿ ಅ್ಯಕ್ಷನ್ ಕೋವಿಡ್ ಟೀಮ್ ಮುಖ್ಯಸ್ಥರೂ ಅದ ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ, ಶ್ರೀರಾಮ ಪ್ರಾಪರ್ಟಿಸ್  ವ್ಯವಸ್ಥಾಪಕ ನಿರ್ದೇಶಕ ಮುರಳಿ, ಎಂ.ಎಸ್. ರಾಮಯ್ಯ ಆಸ್ಪತ್ರೆಯ ಅಧಿಕಾರಿಗಳು, ವೈದ್ಯರು, ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್, ಬಸವರಾಜ, ಉದ್ಯೋಗ ಮತ್ತು ತರಬೇತಿ ಆಯುಕ್ತ ತ್ರಿಲೋಕಚಂದ್ರ  ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next