Advertisement

Davanagere: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ತಡೆದವರೇ ಯತ್ನಾಳ್: ರೇಣುಕಾಚಾರ್ಯ

03:00 PM Oct 01, 2024 | Team Udayavani |

ದಾವಣಗೆರೆ: ವಿಜಯಪುರ ನಗರ ಶಾಸಕ‌ ಬಸನಗೌಡ ಯತ್ನಾಳ್ ಅವರೇ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2 ಎ ಮೀಸಲಾತಿ ನೀಡದಂತೆ ತಡೆದವರು ಎಂದು ಮಾಜಿ ಸಚಿವ ಎಂ.ಪಿ.‌ ರೇಣುಕಾಚಾರ್ಯ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿರುವಂತಹ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಮುಂದಾಗಿದ್ದರು ಮಾತ್ರವಲ್ಲದೆ ಸಂಪುಟ ಸಭೆಯ ಅಜೆಂಡಾದಲ್ಲೂ ಮೀಸಲಾತಿ ಅಂಶವನ್ನು ಸೇರಿಸಿದ್ದರು.‌ ಇದೇ ಯತ್ನಾಳ್ ಅವರೇ ಅಜೆಂಡಾದಿಂದ ಆ ವಿಷಯವನ್ನೇ ತೆಗೆಸಿದರು. ಈಗ ಯಡಿಯೂರಪ್ಪ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಹಾದಿ ಬೀದಿಯಲ್ಲಿ ಎಲ್ಲೆಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದಾರೆ. ಸ್ವಯಂ ಘೋಷಿತ ನಾಯಕರಾಗಿರುವ ಯತ್ನಾಳ್ ನಾನೇ ಮುಂದಿನ ಮುಖ್ಯಮಂತ್ರಿ ಎಂಬುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಎರಡು ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ ಹಾಲಿ, ಮಾಜಿ ಶಾಸಕರು, ಸಂಸದರು, ಮುಖಂಡರು ಸಭೆ ನಡೆಸಿ ಎಲ್ಲ ವಿಷಯಗಳು, ಕೆಲವರು ಅನಗತ್ಯವಾಗಿ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿರುವ ಬಗ್ಗೆ ಚರ್ಚೆ ಮಾಡಲಾಗುವುದು. ವರಿಷ್ಠರಿಗೆ ದೂರು ನೀಡಲಾಗುವುದು. ಪಕ್ಷದ ಮುಖಂಡರು ಯತ್ನಾಳ್ ಇತರರನ್ನು ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

ವಿಜಯೇಂದ್ರ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರು ಕಿರಿಯರು ಹಾಗಾಗಿ ಅವರ ನಾಯಕತ್ವ ಒಪ್ಪುವುದಿಲ್ಲ ಎಂದು ಹೇಳುವುದು ಪ್ರಧಾನಿ ನರೇಂದ್ರ ಮೋದಿ, ಜೆ.ಪಿ. ನಡ್ಡಾ ಅವರಿಗೇ ಅವಮಾನ ಮಾಡಿದಂತೆ. ನಾವು ಎಲ್ಲರೂ ವಿಜಯೇಂದ್ರ ಅವರ ಪರವಾಗಿ ಅಚಲವಾಗಿ ನಿಲ್ಲುತ್ತೇವೆ. ನಮಗೆ ಪಕ್ಷವೇ ಮುಖ್ಯ ಎಂದು ತಿಳಿಸಿದರು.

Advertisement

ಯಾವುದೇ ಹೇಳಿಕೆ ನೀಡಬಾರದು. ಆದರೂ,‌ಅನಿವಾರ್ಯವಾಗಿ ಸಭೆ ನಡೆಸಿ ವಿಜಯೇಂದ್ರ ಅವರು ನಿಲ್ಲಲು ಮತ್ತು ಯಾರೂ ಸಹ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವಂತಹ ಹೇಳಿಕೆ ನೀಡಬಾರದು ಎಂಬ ನಿರ್ಣಯ ಕೈಗೊಂಡಿದ್ದೇವೆ. ಈಗ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕಾದ ಸಮಯ. ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಇರೋಣ. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ ಆಗಿರಬೇಕು.‌ ನಮ್ಮ ಪಕ್ಷದ ವಿರುದ್ಧವೇ ಆಗಿರಬೇಕು. ಇನ್ನು ಮುಂದೆಯೂ ಹೇಳಿಕೆ ನೀಡುವುದರ ವಿರುದ್ದ ಸುಮ್ಮನೆ ಇರುವುದಿಲ್ಲ ಎಂದರು.

ಮುಖ್ಯಮಂತ್ರಿ ಆಗಲು ಒಂದು ಸಾವಿರ ಕೋಟಿ ಇಟ್ಟುಕೊಂಡಿದ್ದಾರೆ ಎಂದು ಹೇಳಿರುವ ಯತ್ನಾಳ್ ಅವರೇ ಒಂದು ಸಾವಿರ ಕೋಟಿ ಎಲ್ಲಿ ಎಂಬುದನ್ನು ತೋರಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತವರು, ಟಿಕೆಟ್, ಅಧಿಕಾರ ದೊರೆಯದ ಜಿ.ಎಂ. ಸಿದ್ದೇಶ್ವರ, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ ಸಭೆಗಳ ನಡೆಸುವ ಮೂಲಕ ಅನಗತ್ಯವಾದ ಗೊಂದಲ ಮೂಡಿಸುತ್ತಿದ್ದಾರೆ. ಪಕ್ಷಕ್ಕೆ ಒಳ್ಳೆಯ ಸಮಯ ಇರುವಾಗ ಗೊಂದಲದ ಹೇಳಿಕೆ ನೀಡುವುದು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ವಿಜಯೇಂದ್ರ ಪರವಾಗಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ ಇತರರು ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿದರು.

ಇದನ್ನೂ ಓದಿ: BBK11: ಬಿಗ್‌ಬಾಸ್‌ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ? ಗೋಲ್ಡ್‌ ಸುರೇಶ್‌ ಬಳಿ ಇರುವುದೇನು?

Advertisement

Udayavani is now on Telegram. Click here to join our channel and stay updated with the latest news.

Next