ದಾವಣಗೆರೆ: ವಿಜಯಪುರ ನಗರ ಶಾಸಕ ಬಸವನಗೌಡ ಯತ್ನಾಳ್, ಮಾಜಿ ಸಚಿವ ವಿ. ಸೋಮಣ್ಣ ರಾಜಕೀಯವಾಗಿ ಅಂತ್ಯವಾಗುವ ಲಕ್ಷಣ ಎನ್ನುವಂತೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಬ್ಬರ ಪಾಪದ ಕೊಡ ತುಂಬಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್, ಸೋಮಣ್ಣ ಇಬ್ಬರೂ ಬ್ಲಾಕ್ ಮೇಲ್ ರಾಜ ಕಾರಣ ಬಿಡಬೇಕು. ಇಬ್ಬರ ಪಾಪದ ಕೊಡ ತುಂಬಿದೆ ಎಂದು ಪುನರುಚ್ಚರಿಸಿದರು.
ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ ಅವರನ್ನು ರಾಜ್ಯದ ಜನರ ಮುಂದೆ ವಿಲನ್ ಮಾಡಲು ಇಬ್ಬರೂ ಹೊರಟಿದ್ದಾರೆ. ರಾಜಕೀಯವಾಗಿ ಅಂತ್ಯವಾಗುವುದಕ್ಕೆ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿರುವ ಯತ್ನಾಳ್, ಸೋಮಣ್ಣ ಏನು ಮಾಡಿದ್ದಾರೆ ಎಂದು ನಾವೂ ಹೇಳುತ್ತೇವೆ.ಯಾರಿಗೂ ಸೊಪ್ಪು ಹಾಕಬೇಕಿಲ್ಲ ಮಾತ್ರವಲ್ಲ ಹೆದರಬೇಕಿಲ್ಲ ಎಂದು ತಿಳಿಸಿದರು.
ಯತ್ನಾಳ್, ಸೋಮಣ್ಣಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡುವುದನ್ನು ಬಿಡಬೇಕು. ಎಲ್ಲರೂ ಒಂದಾಗಿ ಬಿಜೆಪಿಯಲ್ಲಿ ಮುನ್ನಡೆಯಬೇಕು. ಏನಾದರೂ ಸಮಸ್ಯೆ ಇದ್ದರೆ ಪಕ್ಷದ ನಾಲ್ಕು ಗೋಡೆ ಮಧ್ಯೆ ಕುಳಿತು ಮಾತಾಡಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿದ್ದರೆ ಸಹಿಸಿಕೊಂಡಿರಲು ಸಾಧ್ಯವೂ ಇಲ್ಲ ಎಂದರು. ಸೋಮಣ್ಣ, ಯತ್ನಾಳ್‌ಗೆ ಮಾತನಾಡುವ, ಟೀಕಿಸುವ ಯಾವ ನೈತಿಕ ಹಕ್ಕು ಇದೆ. ಸೋಮಣ್ಣ ಅವರು ಸುಳ್ಳನ್ನು ಬಹಳ ಚೆನ್ನಾಗಿ ವೈಭವೀಕರಿಸುವ ಚಾಕುಚಕ್ಯತೆ ಹೊಂದಿರುವ ವ್ಯಕ್ತಿ. ಕಾಂಗ್ರೆಸ್‌ನಿಂದ ಬಂದ ಅವರಿಗೆ ಟೀಕಿಸುವ ಯಾವ ಹಕ್ಕು ಇದೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ, ವಿಜಯೇಂದ್ರ ಅವರ ಬಗ್ಗೆ ಟೀಕಿಸುವುದನ್ನು ಬಿಟ್ಟರೆ ಬೇರೆ ಯಾವುದೇ ಕೆಲಸವೂ ಇಬ್ಬರಿಗೂ ಇಲ್ಲ. ಮಂತ್ರಿ ಮಾಡಲಿಲ್ಲ ಎಂದು ಯತ್ನಾಳ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗಲೂ ಮಾತನಾಡುತ್ತಾರೆ. ಸೋತಾಗಲೂ ಮಾತನಾಡುತ್ತಾರೆ. ಯಡಿಯೂರಪ್ಪ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕು ಯತ್ನಾಳ್‌ಗೆ ಇದೆ. ಅವರನ್ನು ಯಡಿಯೂರಪ್ಪ ಕೇಂದ್ರದ ಮಂತ್ರಿಯನ್ನಾಗಿ ಮಾಡಿದ್ದೇ ತಪ್ಪಾ ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಹೋರಾಟ ಮಾಡಿ. ಹತಾಶೆಯಿಂದ ದಿನಕ್ಕೊಂದು ಹೇಳಿಕೆ ನೀಡುವುದನ್ನು ಇನ್ನಾದರೂ ಬಿಟ್ಟು ಬಿಡಿ. ಸ್ವಪಕ್ಷದವರ ವಿರುದ್ಧವೇ ಹೇಳಿಕೆ ನೀಡುವುದಕ್ಕೆ ನಾಚಿಕೆಯಾಗಬೇಕು. ವಿಜಯೇಂದ್ರಗೆ ಸೋಲಿಸಲು ಯಾರೆಲ್ಲಾ ಪ್ರಯತ್ನ ಮಾಡಿದ್ದಾರೆಂಬುದು ನಮಗೂ ಗೊತ್ತಿದೆ. ಗೆದ್ದರೆ ವಿಜಯೇಂದ್ರ ನಾಯಕನಾಗುತ್ತಾರೆಂದು ಸೋಲಿಗೆ ಪ್ರಯತ್ನಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ ಅವರು ಹಿರಿಯ ನಾಯಕ ಯಡಿಯೂರಪ್ಪ ಯಾವತ್ತಿಗೂ ಕೀಳು ಮಟ್ಟದ ರಾಜಕಾರಣ ಮಾಡಲಿಲ್ಲ ಎಂದರು.
ಇದನ್ನೂ ಓದಿ: Stock: ಫೆಡರಲ್ ರಿಸರ್ವ್ ಎಫೆಕ್ಟ್: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ದಾಖಲೆ ಮಟ್ಟದ ಜಿಗಿತ