ಬೆಂಗಳೂರು: ನಾನು ಕ್ಷೇತ್ರದ ಅನುದಾನಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳು ಅನುದಾನ ಕೊಡುತ್ತೇನೆಂದು ಹೇಳಿದ್ದಾರೆ. ಅನುದಾನ ಕೊಡಲಿಲ್ಲ ಅಂದರೆ ನನ್ನ ತೀರ್ಮಾನ ನಾನು ಮಾಡುತ್ತೇನೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸರಿಯಾಗಿ ಸ್ಪಂದನೆ ಸಿಕ್ಕಿಲ. ಈ ಬಾರಿಯೂ ಅನುದಾನ ಸಿಗಲಿಲ್ಲ ಅಂದರೆ ಬೇರೆ ತರಹ ಯೋಚನೆ ಮಾಡಬೇಕಾಗುತ್ತದೆ. ಬೇರೆ ತರಹದ ಯೋಚನೆ ಮಾಡಿಯೇ ಮಾಡುತ್ತೇನೆ ಎಂದರು.
ನನ್ನ ಕ್ಷೇತ್ರದಲ್ಲಿ ಕಳೆದ ಬಾರಿ ಪ್ರವಾಹವಾಗಿತ್ತು. ಅದರಿಂದ ಆರು ಜನ ಕೊಚ್ಚಕೊಂಡು ಹೋಗಿದ್ದರು. ಮನೆಗಳಿಗೆ ಹಾನಿಯಾಗಿತ್ತು. ಕ್ಷೇತ್ರದ ಜನರು ನನ್ನ ಮೇಲೆ ದಂಗೆ ಎದ್ದೇಳುತ್ತಾರೆ. ನನ್ಮ ಕ್ಷೇತ್ರಕ್ಕೆ ಸಿಎಂ ಬಂದಿದ್ದರು. ಸಚಿವ ಆರ್. ಅಶೋಕ್ ಬಂದಿದ್ದರು. ಬಂದಾಗಲೂ ಸಮಸ್ಯೆ ಬಗೆ ಹರಿದಿಲ್ಲ ಎಂದಾದರೆ ಜನ ಪ್ರಶ್ನೆ ಮಾಡುತ್ತಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕ್ಷೇತ್ರದ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರ ಬಂದು ಹೋದರೆ ಎಂಪಿ ಕುಮಾರಸ್ವಾಮಿ ಕೆಲಸ ಮಾಡಿಲ್ಲ ಎಂದು ಆರೋಪ ಮಾಡುತ್ತಾರೆ ಎಂದರು.
ಇದನ್ನೂ ಓದಿ:ಕ್ಯಾಂಟೀನ್ ಹೆಸರಿನ ಬಗ್ಗೆ ಸರ್ಕಾರದಿಂದ ಉಚಿತ ಅನ್ನ ಸ್ವೀಕರಿಸಿದ ಜನರೇ ನಿರ್ಧರಿಸಲಿ: ಸುನೀಲ್
ಸಿಎಂ ನನಗೆ ಭರವಸೆ ನೀಡಿದ್ದಾರೆ. ನಾನು ಅಧಿಕಾರಕ್ಕೆ ಬಂದು ಸ್ವಲ್ಪ ದಿನಾವಾಗಿದೆ, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಇವತ್ತು ಮೂರು ಗಂಟೆಗೆ ಭೇಟಿ ಮಾಡಲು ಸಿಎಂ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹುಟ್ಟುಹಬ್ಬವಿತ್ತು. ಪ್ರತಿವರ್ಷ ನಾನು ಅವರಿಗೆ ಶುಭಕೋರಲು ಹೋಗುತ್ತೇನೆ. ಸಿದ್ದರಾಮಯ್ಯ ಅಂದರೆ ನನಗೆ ತುಂಬ ಇಷ್ಟ. ಅಹಿಂದ ನಾಯಕ ಅಂತ ಸಿದ್ದರಾಮಯ್ಯ ಒಬ್ಬರೇ ಇದ್ದಾರೆ. ಅವರನ್ನು ಗೌರವಿಸಬೇಕು ಅದಕ್ಕಾಗಿ ನಾನು ಹೋಗಿದ್ದೆ ಎಂದು ಹೇಳಿದರು.
ಸಿಟಿ ರವಿ ಹಾಗೂ ತಮ್ಮ ನಡುವಿನ ಭಿನ್ನಾಭಿಪ್ರಾಯದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿ.ಟಿ ರವಿ ಅವರಿಗೂ ನನಗೂ ಯಾವತ್ತಿಗೂ ಚೆನ್ನಾಗಿಲ್ಲ. ರಾಜಕೀಯಕ್ಕೆ ಬಂದಾಗಿಂದಲೂ ಚೆನ್ನಾಗಿಲ್ಲ. ಮತದಾರರ ಜೊತೆ ನಾನು ಚೆನ್ನಾಗಿದ್ದೇನೆ. ಬೇರೆಯವರ ಜೊತೆಗೂ ಭಿನ್ನಾಭಿಪ್ರಾಯ ಇರಬಹುದು. ನಾನೇನು ದೇವರಲ್ಲ, ಆದರೆ ನನ್ನ ನಾಯಕತ್ವ ಸಾಬೀತಾಗಿದೆ. ನಾನು ನಾಯಕತ್ವ ವಹಿಸಿದ ಯಾವುದೇ ಚುನಾವಣೆಗಳು ಸೋತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.