ಚೇಳೂರು : ಇತಿಹಾಸ ಪ್ರಸಿದ್ದ ಎಂ.ಎನ್.ಕೋಟೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆಯಿಂದ ದೇವಾಲಯದಲ್ಲಿ ಅಭಿಷೇಕ , ಪಂಚಾಮೃತ , ಸುಪ್ರಭಾತಸೇವೆ ನಡೆಯಿತು. ರಥೋತ್ಸವದಲ್ಲಿ ಗ್ರಾಮದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿ, ಸಾಗಸಂದ್ರ ಶ್ರೀ ಕೆಂಪಮ್ಮದೇವಿ ವಿಶೇಷ ಪೂಜೆ ನಡೆಯಿತು.
ಪ್ರತಿ ವರ್ಷ ಆಷಾಢಮಾಸದ ಏಕದಾಶಿಯ ಮಾರನೇ ದಿನ ದ್ವಾದಶಿ ದಿನ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತದೆ.ಈ ರಥೋತ್ಸವದಲ್ಲಿ ನವ ವಧು-ವರರು ಪಾಲ್ಗೊಂಡು ರಥವನ್ನು ಎಳೆಯುವ ಮೂಲಕ ಹರಕೆ ತೀರಿಸುವ ಸಾಂಪ್ರದಾಯ ವಿಶೇಷವಾಗಿದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದ ಜಾತ್ರೆ ಸರಳವಾಗಿ ನಡೆದಿತ್ತು. ಈ ವರ್ಷ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.ಜತೆಗೆ ಒಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಇಂದು ರಥೋತ್ಸವಕ್ಕೆ ಸಮಯದಲ್ಲಿ ಮಳೆಯಿಲ್ಲದೆ ಅದ್ಧೂರಿಯಾಗಿ ನಡೆಯಿತು.
ರಥೋತ್ಸವಲ್ಲಿ ವಿವಿಧ ಗೊಂಬೆ ಕುಣಿತ .ಭಜರಂಗಿ ಕುಣಿತ,ಚೀಟಿಮೇಳ , ನಗಾರಿ ವಾದ್ಯಗಳು ಭಕ್ತರ ಕಣ್ಮನ ಸೆಳೆಯಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದರ್ಶನ ಪಡೆದರು. ಶಾಸಕ ಎಸ್. ಆರ್. ಶ್ರೀನಿವಾಸ್ , ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ , ಚಂದ್ರಶೇಖರಬಾಬು , ಎನ್. ಸಿ. ಪ್ರಕಾಶ್ , ದೀಲೀಪ್ ಕುಮಾರ್ ಹಾಗೂ ಇತರರು ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.