ವಿಜಯಪುರ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಚಂದ್ರಯಾನ ಮಾಡಲಾಗಿದೆ ಎಂಬುದು ಸರಿಯಲ್ಲ. ವಿಕ್ರಮ ಲ್ಯಾಂಡರ್ ಯಶಸ್ಸಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಇಸ್ರೋ ಭೆಟಿ ಸಹಜ ಪ್ರಕ್ರಿಯೆ. ವಿಜ್ಞಾನ ತಂತ್ರಜ್ಞಾನ ವಿಷಯವೇ ಬೇರೆ. ವಿಶ್ವ ಸಾಧನೆ ಮಾಡಿರುವ ವಿಜ್ಞಾನಿಗಳ ಸಾಧನೆಗೆ ಅಭಿನಂದಿಸುವುದರಲ್ಲಿ ಯಾವ ರಾಜಕೀಯ ಇರಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದ್ದಾರೆ.
ಗುರುವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಂದ್ರಯಾನ 3 ಯಶಸ್ಸು ಇಡೀ ಭಾರತ ದೇಶಕ್ಕೆ ಹೆಮ್ಮೆಯ ವಿಷಯ. ಚಂದ್ರನ ಅಂಗಳ ತಲುಪಿದ ವಿಶ್ವದ 4 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ. ಭಾರತ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಚಂದ್ರಯಾನ ಯಶಸ್ಸಿನಿಂದ ನಿರೂಪಿಸಿದ್ದು, ಇಸ್ರೋ ಸಂಸ್ಥೆಯ ವಿಜ್ಞಾನಿಗಳ ತಂಡಕ್ಕೆ, ಪ್ರಧಾನಿ ಮೋದಿ ಅವರಿಗೆ ಈ ಹಿರಿಮೆ ಸಲ್ಲುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಶ್ಲಾಘಿಸಿದರು.
ಚಂದ್ರಯಾನ 3 ರ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳು ಕಾರಣೀಕರ್ತರಾಗಿದ್ದು, ದೇಶವೇ ಹೆಮ್ನೆ ಪಡುವಂಥ ಅದ್ಭುತ ಸಾಧನೆಗೆ ಭಾರತೀಯರೆಲ್ಲರೂ ಒಕ್ಕೊರಲಿನಿಂದ ವಿಜ್ಞಾನಿಗಳನ್ನು ಅಭಿನಂದಿಸುತ್ತಿದ್ದಾರೆ ಎಂದರು.
ಚಂದ್ರಯಾನದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಸ್ಪರ್ಶ ಮಾಡುವ ಅದ್ಭುತ ಕ್ಷಣಗಳನ್ನು ಅತೀ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ. ಇದು ಕೂಡ ನಮ್ಮ ದೇಶಕ್ಕೆ ಹೆಮ್ಮೆಯ ಸಂಗತಿಯೇ ಎಂದು ಸಂತಸ ವ್ಯಕ್ತಪಡಿಸಿದರು.
ಐತಿಹಾಸಿಕ ಸಾಧನೆ ಮಾಡಿದರುವ ಇಸ್ರೋಗೆ ಸ್ವಯಂ ಪ್ರಧಾನಿಗಳೇ ಭೇಟಿ ನೀಡಿ, ಸಾಧನೆಗೆ ಕಾರಣರಾದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವುದರಿಂದ ವಿಜ್ಞಾನಿಗಳಲ್ಲಿ ಸ್ಫೂರ್ತಿ ತುಂಬುವ ಕೆಲಸ ಆಗಲಿದೆ. ಹೀಗಾಗಿ ಪ್ರಧಾನಮಂತ್ರಿಗಳು ಇಸ್ರೋ ಭೇಟಿಯಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿದರು.
ಜವಾಹರ ಲಾಲ್ ನೆಹರು, ಅಟಲ್ ಬಿಹಾರಿ ವಾಜಪೇಯಿ ಅವರಿಂದ ಮೋದಿವರೆಗೆ ಎಲ್ಲರೂ ಕೆಲಸ ಮಾಡಿದ್ದಾರೆ. ಅದರಲ್ಲಿ ಕಾಂಗ್ರೆಸ್, ಬಿಜೆಪಿ ಅಂತೆಲ್ಲ ರಾಜಕೀಯವಾಗಿ ಮಾತನಾಡಿದರೆ ಅದು ತಪ್ಪಾಗುತ್ತದೆ ಎಂದರು.