ಬೆಂಗಳೂರು: ಯಾವುದೇ ಆಣೆಕಟ್ಟು ಸುತ್ತಮುತ್ತ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯಬಾರದು. ಕೆಆರ್ ಎಸ್ ಪುರಾತನ ಜಲಾಶಯ. ಜಲಾಶಯದ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಸುದ್ದಗಾರರೊಂದಿಗೆ ಅವರು ಮಾತನಾಡಿದರು.
ಅಂಬರೀಶ್ ಕಾಲದಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎಂಬ ಜೆಡಿಎಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂಬರೀಶ್ ನನ್ನ ಸ್ನೇಹಿತ, ಇಬ್ಬರ ನಡುವೆ ಒಳ್ಳೆ ಸ್ನೇಹ ಇತ್ತು. ಸುಮಲತಾ ಅವರ ಬಗ್ಗೆಯೂ ಅಪಾರ ಗೌರವ ಇದೆ. ಅಕ್ರಮ ಗಣಿಗಾರಿಕೆ ವಿಚಾರವಾಗಿ ನನಗೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ:ಪರಸ್ಪರ ಸೋಲಿಸಲು ಪ್ರಯತ್ನಿಸಿಲ್ಲ ಎಂದು ಸಿದ್ದರಾಮಯ್ಯ, ಪರಮೇಶ್ವರ್ ಆಣೆ ಮಾಡಲಿ: ಈಶ್ವರಪ್ಪ
ಕೆಆರ್ ಎಸ್ ಸೇರಿದಂತೆ ರಾಜ್ಯದ ಹಲವು ಡ್ಯಾಂಗಳ ಆಧುನೀಕರಣಕ್ಕೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಅನುಮತಿ ಸಿಕ್ಕಿತ್ತು. ಉಮಾ ಭಾರತಿ ಅವರು ಆಗ ಕೇಂದ್ರ ಜಲಸಂಪನ್ಮೂಲ ಸಚಿವೆಯಾಗಿದ್ದರು. ಆಗ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಡ್ಯಾಂಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.
ಸಿಎಂ ಭೇಟಿ ಬಗ್ಗೆ ಮಾತನಾಡಿದ ಅವರು, ನಾನು ಒಬ್ಬ ಶಾಸಕ, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಗಳು. ಹಾಗಾಗಿ ನಾನು ಅವರನ್ನು ಭೇಟಿಯಾಗಿದ್ದೇನೆ. ನನ್ನ ಕ್ಷೇತ್ರದ, ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಹೇಳಿದರು.