ವಿಜಯಪುರ: ಕೊವಿಡ್-19 ಲಾಕ್ ಡೌನ್ ಮಧ್ಯೆಯೂ ಹಣ್ಣು ತರಕಾರಿ ಸೇರಿದಂತೆ ತೋಟಗಾರಿಕೆ ಉತ್ಪನ್ನ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ರೈತರು ವಿವಿಧ ಸ್ಥಳಗಳಿಗೆ ತೋಟಗಾರಿಕೆ ಉತ್ಪನ್ನ ಸಾಗಾಟಕ್ಕೆ ಅನುಮತಿ ನೀಡುವಂತೆ ಮಾಜಿ ಸಚಿವರಾದ ಬಬಲೇಶ್ವರ ಶಾಸಕ ಡಾ.ಎಂ.ಬಿ.ಪಾಟೀಲ ಮನವಿ ಮಾಡಿದ್ದಾರೆ.
ಈ ಕುರಿತು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಮಾಡಿರುವ ಅವರು, ಕೇಂದ್ರ ಸರ್ಕಾರ ಲಾಕ್ ಡೌನ್ ಆದೇಶ ಮಾಡಿದ್ದರೂ ಅಗತ್ಯ ವಸ್ತುಗಳ ಸಾಗಾಟಕ್ಕೆ ಅವಕಾಶ ನೀಡಿದೆ. ಆದರೆ ವಿಜಯಪುರ ಜಿಲ್ಲೆ ರೈತರು ಬೆಳೆದ ಅದರಲ್ಲೂ ಬೇಗ ಹಾಳಾಗುವ ತೊಟಗಾರಿಕೆ ಬೆಳೆ ಸಾಗಾಟಕ್ಕೆ ನಿರ್ಬಂಧ ಹೇರಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದು ಗ್ರಾಹಕರೂ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ತೋಟಗಾರಿಕೆ ವಿವಿಧ ಬೆಳೆ ಬೆಳೆಯುಲ್ಲಿ ವಿಜಯಪುರ ಜಿಲ್ಲೆ ಪ್ರಸಿದ್ಧಿ ಪಡೆದಿದೆ. ತೋಟಗಾರಿಕೆ ಬಹುತೇಕ ಬೆಳೆಗಳು ಬೇಗ ಹಾಳಾಗುವ ಗುಣ ಹೊಂದಿದ್ದು, ದಾಸ್ತಾನು ಮಾಡುವ ಸ್ಥಿತಿಯೂ ನಮ್ಮಲ್ಲಿ ಇಲ್ಲ. ನಿತ್ಯವೂ ನೂರಾರು ಟನ್ ದ್ರಾಕ್ಷಿ, ದಾಳಿಂಬೆ, ಬಾಳೆ, ಕಲ್ಲಂಗಡಿ, ಪಪ್ಪಾಯಿ, ಕರಬೂಜ, ನಿಂಬೆ ಹಾಗೂ ವಿವಿಧ ತರಕಾರಿಗಳು ಸೇರಿದಂತೆ ಹಲವು ಉತ್ಪನ್ನಗಳು ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳ ವಿವಿಧ ಪ್ರದೇಶಗಳಿಗೆ ಸಾಗಾಟ ಮಾಡಲಾಗುತ್ತದೆ ಎಂದು ಪರಿಸ್ಥಿತಿ ಮನವರಿಕೆ ಮಾಡಿದ್ದಾರೆ.
ಆದರೆ ಪ್ರಸ್ತುತ ಕೋವಿಡ್-19 ಲಾಕ್ ಡೌನ್‍ನಿಂದಾಗಿ ಜಿಲ್ಲೆಯ ಸಾಗಾಟ ಹಾಗೂ ಸಕಾಲದಲ್ಲಿ ಮಾರುಕಟ್ಟೆ ಹಾಗೂ ಕೋಲ್ಡ್ ಸ್ಟೋರೆಜ್ ಹಾಗೂ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗದೇ ನಷ್ಟ ಅನುಭವಿಸುವಂತಾಗಿದೆ. ರೈತರ ಉತ್ಪನ್ನಗಳು ಸಕಾಲದಲ್ಲಿ ಗ್ರಾಹಕರಿಗೆ ತಲುಪದಿದ್ದರೆ ಜಿಲ್ಲೆಯ ರೈತರ ಕೋಟ್ಯಾಂತರ ರೂ.ಗಳ ಬೆಳೆ ನಾಶವಾಗುತ್ತದೆ.
ಇದರಿಂದ ರೈತರು ನಷ್ಟದ ಆತಂಕಕ್ಕೆ ಈಡಾಗಿದ್ದಾರೆ. ಇದರಿಂದ ರೈತರಿಗೂ ಹಾಗೂ ಗ್ರಾಹಕರಿಗೂ ತೀವ್ರ ತೊಂದರೆಯಾಗುತ್ತದೆ. ಹೀಗಾಗಿ ಜಿಲ್ಲೆಯ ರೈತರು ಬೆಳೆದ ತೋಟಗಾರಿಕೆ ಉತ್ಪನ್ನ ಸಾಗಾಟಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.