Advertisement

Congress ಶಾಸಕರಿಗೆ ಆಮಿಷ: ಆಯುಕ್ತರಿಗೆ ದೂರು

11:00 PM Feb 20, 2024 | Team Udayavani |

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಅಡ್ಡ ಮತದಾನ ಮಾಡುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಹ ಸದಸ್ಯರಾಗಿರುವ ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿಗೌಡ ಹಾಗೂ ಕೆಲವು ಕಾಂಗ್ರೆಸ್‌ ಶಾಸಕರಿಗೆ ಆಮಿಷವೊಡ್ಡಿ ಒತ್ತಡ ಹಾಕಲಾಗುತ್ತಿದೆ ಎಂದು ಮಂಡ್ಯ ಕಾಂಗ್ರೆಸ್‌ ಶಾಸಕ ಗಣಿಗ ರವಿ ಅವರು ಪೊಲೀಸ್‌ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

Advertisement

ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ 2ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕುಪೇಂದ್ರ ರೆಡ್ಡಿಗೆ ಗೆಲುವಿಗೆ ಅಗತ್ಯ ಸಂಖ್ಯಾಬಲವಿಲ್ಲ. ಹೀಗಾಗಿ ಸಹ ಸದಸ್ಯ ಶಾಸಕರು ಹಾಗೂ ಕಾಂಗ್ರೆಸ್‌ ಶಾಸಕರನ್ನು ಒತ್ತಡ ಹಾಗೂ ಹಣದ ಆಮಿಷ ನೀಡಿ ಪಕ್ಷಾಂತರ ನಡೆಸಿ ಮತ ಚಲಾಯಿಸುವಂತೆ ಒತ್ತಡ ಹಾಕಲಾಗುತ್ತಿದೆ. ಪ್ರತಿಷ್ಠಿತ ಹೊಟೇಲ್‌ ಮಾಲಕರೊಬ್ಬರು ಶಾಸಕಿ ಲತಾ ಅವರನ್ನು ಸಂಪರ್ಕಿಸಿ ಕುಪೇಂದ್ರ ರೆಡ್ಡಿ ಪುತ್ರ ತಮ್ಮನ್ನು ಭೇಟಿಯಾಗಿ ಹಣ ಕೊಡುತ್ತಾರೆ, ನೀವು ಕುಪೇಂದ್ರ ರೆಡ್ಡಿಗೆ ಮತ ಚಲಾಯಿಸಿ. ಇಲ್ಲದಿದ್ದರೆ ನಿಮಗೆ ತೊಂದರೆಯಾಗುತ್ತದೆ ಎಂದು ಬೆದರಿಕೆ ಹಾಕಿರುತ್ತಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಅದೇ ರೀತಿ ಅವರ ಭಾವ ಡಾ| ಮಹಾಂತೇಶ್‌ ಕೂಡ ಬಿಜೆಪಿ, ಜೆಡಿಎಸ್‌ ನಾಯಕರ ಸೂಚನೆಯಂತೆ ಲತಾಗೆ ಹಣದ ಆಮಿಷ ಒಡ್ಡಿರುತ್ತಾರೆ. ಹರಿಹರದ ಮಾಜಿ ಶಾಸಕ ಶಿವಶಂಕರ್‌ ಅವರನ್ನು ಕಳುಹಿಸಿ ಲತಾ ಪತಿ ಮಲ್ಲಿಕಾರ್ಜುನ್‌ ಅವರನ್ನು ಭೇಟಿಯಾಗಿ ಹಣದ ಆಮಿಷ ನೀಡಿ ಮತ ಹಾಕುವಂತೆ ಒತ್ತಾಯಿಸಿದ್ದಾರೆ ಎಂದು ಶಾಸಕ ಗಣಿಗ ರವಿ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತಿಬ್ಬರು ಶಾಸಕರಾದ ಪುಟ್ಟಸ್ವಾಮಿಗೌಡ, ದರ್ಶನ್‌ ಪುಟ್ಟಣ್ಣಯ್ಯ ಅವರಿಗೂ ಇಂಥ ಆಮಿಷವೊಡ್ಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ನಮ್ಮಲ್ಲಿದೆ ಎಂದು ಹೇಳಿದ್ದಾರೆ.

ನಮ್ಮದು ಧಮ್ಕಿ ಸಂಸ್ಕೃತಿ ಅಲ್ಲ:
ಡಿ.ಕೆ. ಶಿವಕುಮಾರ್‌ಗೆ ಕುಮಾರಸ್ವಾಮಿ ತಿರುಗೇಟು
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕುಪೇಂದ್ರ ರೆಡ್ಡಿಗೆ ಮತ ಹಾಕುವಂತೆ ಪಕ್ಷೇತರ ಶಾಸಕರಿಗೆ ಧಮ್ಕಿ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, “ನಮ್ಮದು ಧಮ್ಕಿ ಸಂಸ್ಕೃತಿ ಅಲ್ಲ’ ಎಂದಿದ್ದಾರೆ.

Advertisement

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು? ಸೆಟ್ಲಮೆಂಟ್‌ ಮಾಡುವ ಸಂಸ್ಕೃತಿ ನಮ್ಮದಲ್ಲ. ಸಿಕ್ಕ ಸಿಕ್ಕಿದ ಜಾಗದಲ್ಲಿ ತಂತಿ ಬೇಲಿ ಹಾಕುವವರು ಯಾರು? ನಾವು ಆತ್ಮ ಸಾಕ್ಷಿಯಾಗಿ ಮತ ಕೇಳುತ್ತೇವೆ ಅಂತ ಹೇಳಿದ್ದೇವೆ. ನಾವು ಕಾಂಗ್ರೆಸ್‌ ಶಾಸಕರ ಜತೆ ಮಾತನಾಡಿದರೆ ಅಪರಾಧವೇ ಎಂದು ಪ್ರಶ್ನಿಸಿದರು.

ಇವರು ಮೊನ್ನೆ ಬಿಜೆಪಿ ಶಾಸಕರನ್ನು ಕೂರಿಸಿಕೊಂಡು ಮಾತನಾಡಿದ್ದರಲ್ವ, ಅದು ಅಪರಾಧ ಅಲ್ಲವೇ? ಜೆಡಿಎಸ್‌ನ ಎರಡು ಮತ ಬರಲಿದೆ ಅಂತ ಹೇಳಿದ್ದಾರೆ, ಅದು ತಪ್ಪಲ್ವಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next