Advertisement

ಚಾ.ನಗರ: 5016 ರಾಸುಗಳಿಗೆ ಚರ್ಮಗಂಟು ರೋಗ

04:34 PM Dec 20, 2022 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಇದುವರೆಗೆ 5016 ರಾಸುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, 3470 ರಾಸುಗಳು ಗುಣಮುಖವಾಗಿವೆ.

Advertisement

1365 ರಾಸು ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ರೋಗ ದಿಂದ ಇದುವರೆಗೆ 181 ರಾಸುಗಳು ಮೃತಪಟ್ಟಿವೆ. ಜಿಲ್ಲೆಯ 313 ಗ್ರಾಮಗಳಲ್ಲಿ ಈ ರೋಗ ಕಾಣಿಸಿ ಕೊಂಡಿದ್ದು, ಈ ಪೈಕಿ ಹನೂರು ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಗುಂಡ್ಲುಪೇಟೆ ತಾಲೂಕಿನ 52 ಗ್ರಾಮ ಗಳಲ್ಲಿ 2972 ಪ್ರಕರಣಗಳು ಕಂಡು ಬಂದಿವೆ.

ಇವುಗಳಲ್ಲಿ 2193 ರಾಸುಗಳು ಗುಣಮುಖವಾಗಿದ್ದು, 713 ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ತಾಲೂಕಿನಲ್ಲಿ 66 ರಾಸುಗಳು ಕಾಯಿಲೆಯಿಂದ ಸಾವನ್ನಪ್ಪಿವೆ. ಹಾಗೆಯೇ ಹನೂರು ತಾಲೂಕಿನ 184 ಗ್ರಾಮಗಳಲ್ಲಿ 1317 ಪ್ರಕರಣಗಳು ವರದಿಯಾಗಿವೆ. ಇವುಗಳ ಪೈಕಿ 693 ರಾಸುಗಳು ಗುಣಮುಖವಾಗಿವೆ. 535 ರಾಸುಗಳಿಗೆ ಚಿಕಿತ್ಸೆ ಮುಂದುವರಿ ಸಲಾಗಿದೆ. 89 ಜಾನುವಾರುಗಳು ಮೃತಪಟ್ಟಿವೆ. ರಾಮನಗರ, ಕನಕಪುರ ಭಾಗದಲ್ಲಿ ಗಂಟು ರೋಗ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ರಾಸುಗಳ ಮಾಲೀಕರು ಅವುಗಳನ್ನು ಮಹದೇಶ್ವರ ಬೆಟ್ಟದ ಕಾಡಂಚಿನಲ್ಲಿ ಬಿಟ್ಟು ಹೋದ ಪರಿಣಾಮ ಹನೂರು ಭಾಗದಲ್ಲಿ ರಾಸುಗಳಿಗೆ ರೋಗ ಹರಡಲು ಕಾರಣ ವಾಯಿತು ಎನ್ನುತ್ತಾರೆ ಪಶುವೈದ್ಯಕೀಯ ಅಧಿಕಾರಿಗಳು.

ಅಲ್ಲದೇ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಜಾನುವಾರುಗಳನ್ನು ನೂರಾರು ಸಂಖ್ಯೆಯಲ್ಲಿ ಒಟ್ಟಾಗಿ ಸಾಕಲಾಗುತ್ತದೆ. ಇವನ್ನು ದೊಡ್ಡಿಯಲ್ಲಿ ಒಂದೇ ಕಡೆ ಇರಿಸಲಾಗುತ್ತಿದೆ. ಹೀಗಾಗಿ ಸೋಂಕು ವೇಗವಾಗಿ ರಾಸುಗಳಿಗೆ ಹರಡಿದೆ. ಹಾಗೆಯೇ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದದ್ದರಿಂದ, ಗಡಿಯಲ್ಲಿರುವ ಗುಂಡ್ಲುಪೇಟೆ ತಾಲೂಕಿನಲ್ಲೂ ರಾಸುಗಳಿಗೆ ಸೋಂಕು ವೇಗವಾಗಿ ಹರಡಿದೆ ಎನ್ನುತ್ತಾರೆ.

ರೈತರಲ್ಲಿ ಹೈನುಗಾರಿಕೆಯನ್ನೇ ನಂಬಿರುವ ಸಾಕಷ್ಟು ಮಂದಿ ಇದ್ದಾರೆ. ಹೀಗಿರುವಾಗ ರಾಸುಗಳಲ್ಲಿ ಹರಡುತ್ತಿರುವ ಗಂಟು ರೋಗ ಸಹಜವಾಗಿಯೇ ರೈತರನ್ನು ಚಿಂತೆಗೀಡು ಮಾಡಿದೆ.

Advertisement

ರಾಸುಗಳಿಗೆ ಲಸಿಕೆ ನೀಡಿಕೆ ಕಾರ್ಯ ಚುರುಕು: ಶಿವಣ್ಣ : ಜಿಲ್ಲೆಯಲ್ಲಿ ಒಟ್ಟು 2,46,790 ಜಾನುವಾರುಗಳಿವೆ. ಇವುಗಳ ಪೈಕಿ 1,74,598 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 65,500 ಲಸಿಕೆ ದಾಸ್ತಾನಿದೆ. ಡಿ. 25ರೊಳಗೆ ಶೇ. 100 ರಷ್ಟು ಲಸಿಕಾ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಶಿವಣ್ಣ ತಿಳಿಸಿದರು. ಜಿಲ್ಲೆಯಲ್ಲಿ ಗಂಟು ರೋಗ ನಿಯಂತ್ರಣದಲ್ಲಿದೆ. ಯಳಂದೂರು ತಾಲೂಕಿನಲ್ಲಿ ಶೇ.100 ರಷ್ಟು ಲಸಿಕಾ ಕಾರ್ಯ ಪೂರ್ಣಗೊಂಡಿದೆ. ಕೊಳ್ಳೇಗಾಲ ತಾಲೂಕಿನಲ್ಲಿ ಶೇ. 97 ಹನೂರು ತಾಲೂಕಿನಲ್ಲಿ ಶೇ. 79ರಷ್ಟು, ಗುಂಡ್ಲು ಪೇಟೆ ತಾಲೂಕಿನಲ್ಲಿ ಶೇ. 63 ಹಾಗೂ ಚಾಮ ರಾಜನಗರ ತಾಲೂಕಿನಲ್ಲಿ ಶೇ. 57ರಷ್ಟು ಲಸಿಕೀಕರಣ ಮಾಡಲಾಗಿದೆ ಎಂದು ಅವರು ಹೇಳಿದರು.

ಸೊಳ್ಳೆಗಳ ಮೂಲಕ ಚರ್ಮಗಂಟು ರೋಗದ ವೈರಸ್‌ ಬರುತ್ತದೆ. ರೈತರು ಕೊಟ್ಟಿಗೆಗಳನ್ನು ಶುಚಿಯಾಗಿಟ್ಟು ಕೊಳ್ಳಬೇಕು. ರೋಗ ಕಾಣಿಸಿಕೊಂಡ ಜಾನುವಾರುಗಳ ಮೈಮೇಲೆ ಗುಳ್ಳೆಗಳು ಬರುತ್ತದೆ. ಈ ಚಿಹ್ನೆ ಕಾಣಿಸಿಕೊಂಡ ತಕ್ಷಣ ವೈದ್ಯರಿಗೆ ತೋರಿಸಬೇಕು. ಸಕಾಲದಲ್ಲಿ ಚಿಕಿತ್ಸೆ ದೊರೆತರೆ ಒಂದು ವಾರದಲ್ಲಿ ಕಾಯಿಲೆ ಗುಣಮುಖವಾಗುತ್ತದೆ. -ಡಾ. ಶಿವಣ್ಣ, ಉಪನಿರ್ದೇಶಕರು, ಪಶುಪಾಲನಾ ಇಲಾಖೆ

-ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next