ಮೈಸೂರು: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಹೆಚ್ಚುತ್ತಲೇ ಇದ್ದು, 158ಕ್ಕೂ ಹೆಚ್ಚು ರಾಸುಗಳು ರೋಗಕ್ಕೆ ಬಲಿಯಾಗಿವೆ.ಕಳೆದ ಮೂರು ತಿಂಗಳಿನಿಂದ ಇನ್ನಿಲ್ಲದೆ ಬಾದಿಸುತ್ತಿರುವ ಚರ್ಮಗಂಟು ರೋಗಕ್ಕೆ ಜಿಲ್ಲೆಯ ರೈತರು ಹೈರಾಣಾಗಿದ್ದು, ರೋಗ ನಿಯಂತ್ರಣಕ್ಕೆ ಪಶುಪಾಲನಾ ಮತ್ತು ಪಶುವೈ ದ್ಯಕೀಯ ಸೇವಾ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸಿ ದರೂ ಜಾನುವಾರುಗಳ ಸಾವು ಮುಂದುವರೆದಿದೆ.
ಸಿಬ್ಬಂದಿ ಕೊರತೆ: ಸೋಂಕು ಕಂಡುಬಂದ ಸ್ಥಳ ಸೇರಿ ದಂತೆ ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ಹಸು ಮತ್ತು ಎಮ್ಮೆಗಳಿಗೆ ಚರ್ಮಗಂಟು ರೋಗ ಬಾರದಂತೆ ಲಸಿಕೆ ನೀಡಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಪರಿಣಾಮ ಸಮರೋಪಾದಿಯಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಹಿನ್ನಡೆಯಾಗಿರುವುದರಿಂದ ರೋಗ ಉಲ್ಬಣಗೊಂಡಿದೆ. ಪಶು ವೈದ್ಯರು, ವೆಟರ್ನರಿ ಇನ್ಸ್‌ಪೆಕ್ಟರ್, ಡಿ. ದರ್ಜೆ ನೌಕರರು ಸೇರಿ ಜಿಲ್ಲೆಯಲ್ಲಿ 758 ಸಿಬ್ಬಂದಿ ಅಗತ್ಯವಿದೆ. ಆದರೆ ಸದ್ಯಕ್ಕೆ ಇರುವುದು 424 ಮಂದಿ ಮಾತ್ರ. ಉಳಿದ 334 ಸಿಬ್ಬಂದಿಯ ಕೊರತೆ ಎದುರಿಸುತ್ತಿದೆ. ಇಲಾಖೆಯಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿ ಇದ್ದಿದ್ದರೆ ರೋಗ ನಿಯಂತ್ರಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಮತ್ತಷ್ಟು ಬಿರುಸುಗೊಳಿಸಬಹುದಿತ್ತು. ಆದರೆ ಸಿಬ್ಬಂದಿ ಸಮಸ್ಯೆಯಿಂದ ರೈತರಲ್ಲಿ ಜಾಗೃತಿ ಮೂಡಿಸುವುದು, ಲಸಿಕೆ ಹಾಕಿಸುವ ಕಾರ್ಯ ನಿಧಾನವಾಗಿದೆ ಎಂದು ಇಲಾಖೆ ಉಪನಿರ್ದೇಶಕರು ಉದಯವಾಣಿಗೆ ತಿಳಿಸಿದ್ದಾರೆ.
158 ಜಾನುವಾರು ಬಲಿ: ಅಗತ್ಯ ಮುನ್ನೆಚ್ಚರಿಕೆ ಹಾಗೂ ಲಸಿಕೆ ನೀಡುವ ಕಾರ್ಯ ನಡೆದರೂ ಜಿಲ್ಲೆ ಯಲ್ಲಿ ಚರ್ಮಗಂಟು ರೋಗ ಹೆಚ್ಚುತ್ತಲೆ ಇದ್ದು, ಈವರೆಗೆ 158 ರಾಸುಗಳು ಮೃತಪಟ್ಟಿವೆ. ಜಿಲ್ಲೆಯ 398 ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡಿದ್ದು, ಸರಗೂರು ತಾಲೂಕು ಒಂದರಲ್ಲೇ 44 ಜಾನುವಾರುಗಳು ಬಲಿಯಾಗಿದ್ದರೆ, ಕೆ.ಆರ್. ನಗರ ತಾಲೂಕಿನಲ್ಲಿ 24, ನಂಜನಗೂಡಿನಲ್ಲಿ 25, ಪಿರಿಯಾಪಟ್ಟಣದಲ್ಲಿ 02, ಎಚ್.ಡಿ. ಕೋಟೆಯಲ್ಲಿ 11, ಮೈಸೂರು ತಾಲೂಕಿನಲ್ಲಿ 07, ತಿ. ನರಸೀಪುರದಲ್ಲಿ 29 ಜಾನುವಾರು ಮೃತಪಟ್ಟಿವೆ. ಜಿಲ್ಲೆಯಲ್ಲಿ ಸದ್ಯಕ್ಕೆ 5,14,280 ರಾಸು(ಹಸು, ಎತ್ತು, ಕೋಣ, ಎಮ್ಮೆ)ಗಳಿದ್ದು, ಈವರೆಗೆ 3200ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 2141 ರಾಸುಗಳು ಚೇತರಿಸಿಕೊಂಡಿದ್ದು, 158 ಸಾವಿಗೀಡಾಗಿವೆ.
ಜಾನುವಾರು ಸಂತೆ, ಜಾತ್ರೆಗೆ ನಿಷೇಧ: ಎಲ್ಲೆಡೆ ವ್ಯಾಪಕವಾಗಿ ಚರ್ಮಗಂಟು ರೋಗ ಹರಡುತ್ತಿರುವುದರಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ದನಗಳ ಸಂತೆ ಮತ್ತು ಜಾತ್ರೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮುಂದೆ ನಡೆಯಲಿರುವ ಚುಂಚನಕಟ್ಟೆ, ಮುಡುಕುತೊರೆ ಜಾತ್ರೆಯಲ್ಲಿ ದನಗಳನ್ನು ಕಟ್ಟುವುದರಿಂದ ಜಿಲ್ಲಾಡಳಿತ ಜ.10ರವರೆಗೆ ದನಗಳ ಜಾತ್ರೆ ಮತ್ತು ಸಂತೆಯನ್ನು ನಿಷೇಧ ಮಾಡಿದೆ. ಈ ಮೂಲಕ ಹೊರ ಭಾಗದಿಂದ ಸೋಕು ಹರಡಿರುವ ಜಾನುವಾರು ಬಾರದಂತೆ ಎಚ್ಚರಿಕೆ ವಹಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 3 ಲಕ್ಷ 10 ಸಾವಿರ ಜಾನುವಾರುಗಳಿಗೆ ಲಸಿಕೆ ನೀಡಲಾಗಿದ್ದು, ಇನ್ನೂ 1.75 ಲಕ್ಷ ಲಸಿಕೆ ನಮ್ಮಲ್ಲಿದೆ. ರೋಗ ಬೇರೆ ಪ್ರದೇಶಗಳಿಗೆ ಹರಡದಂತೆ ದನಗಳ ಜಾತ್ರೆ, ಸಂತೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ರೈತರು ಮುನ್ನೆಚ್ಚರಿಕಾ ಕ್ರಮ ಅನುಸರಿಸುವ ಮೂಲಕ ಜಾನುವಾರುಗಳನ್ನು ಕಾಪಾಡಿಕೊಳ್ಳಬೇಕು.
– ಡಾ. ಷಡಕ್ಷರಮೂರ್ತಿ, ಉಪ ನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
– ಸತೀಶ್ ದೇಪುರ