ಶಿವಮೊಗ್ಗ: ಅಂಗಡಿ ಮುಂಗಟ್ಟುಗಳ ಎದುರು ಕಸ-ಕಡ್ಡಿ, ತ್ಯಾಜ್ಯ ರಾಶಿ ಹಾಕುವವರಿಗೆ ದಂಡ ವಿಧಿಸಿ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ
ಡಾ| ಎಂ. ಲೋಕೇಶ್, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾನುವಾರ ಬಾಪೂಜಿ ನಗರ, ಮಾಡರ್ನ್ ಚಿತ್ರಮಂದಿರದ ಹಿಂಬದಿ ರಸ್ತೆ, ಸುಲ್ತಾನ್ ಪೇಟೆ ಪ್ರದೇಶ, ಗಾರ್ಡನ್ ಏರಿಯಾ, ಓಟಿ ರಸ್ತೆ, ಕೆಇಬಿ
ಸರ್ಕಲ್ ಪ್ರದೇಶಗಳಿಗೆ ಭೇಟಿ ನೀಡಿ ಸ್ವತ್ಛತೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಒಂದು ವಾರದಲ್ಲಿ 36 ಪ್ರಕರಣಗಳು ಕಂಡು ಬಂದಿದೆ. ಇದರ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ. ಈ ಕುರಿತಾಗಿ ಈಗಾಗಲೇ ಎರಡು ಬಾರಿ ವೈದ್ಯಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದ್ದು, ನಗರ ಸ್ವತ್ಛತೆ ಕಾರ್ಯಕ್ಕೆ ಹೆಚ್ಚಿನ
ಆದ್ಯತೆ ನೀಡಲು ಸೂಚಿಸಲಾಗಿದೆ ಎಂದರು.
ಚರಂಡಿ ಸ್ವತ್ಛತೆ, ಫಾಗಿಂಗ್ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದ್ದು, ಡೆಂಘೀ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ನಾಗರಿಕರ ಸಹಕಾರ ಮುಖ್ಯ ಎಂದು ಹೇಳಿದರು. ಮಾಡರ್ನ್ ಚಿತ್ರಮಂದಿರ ಹಿಂಭಾಗದಲ್ಲಿ ಗುಜರಿ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ಹಾಕಿರುವುದನ್ನು ತೆರವುಗೊಳಿಸಲು ಸೂಚನೆ ನೀಡಿದ ಜಿಲ್ಲಾಧಿಕಾರಿ, ನಗರ ವ್ಯಾಪ್ತಿಯಲ್ಲಿ ಈ ರೀತಿ ಗುಜರಿ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ಹಾಕಿರುವ ಎಲ್ಲಾ ಸ್ಥಳಗಳನ್ನು ಗುರುತಿಸಿ ಅಂಗಡಿಗಳ ಮಾಲಿಕರಿಗೆ ನೊಟೀಸ್ ನೀಡಿ ಕ್ರಮ ಜರುಗಿಸುವಂತೆ ಮಹಾನಗರ ಪಾಲಿಕೆ
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗಡಿ ಮಾಲಿಕರು ಕಸವನ್ನು ರಸ್ತೆಯ ಮೇಲೆ ಹಾಕದೆ ಕಡ್ಡಾಯವಾಗಿ ಕಸ ವಿಲೇವಾರಿ ವಾಹನಕ್ಕೆ ನೀಡಬೇಕು. ಈ ಕುರಿತು ಎಲ್ಲಾ ಅಂಗಡಿ ವಾಣಿಜ್ಯ ಮಳಿಗೆಗಳ ಮಾಲಿಕರಿಗೆ ಎಚ್ಚರಿಕೆ ನೀಡಬೇಕು. ರಸ್ತೆ ಮೇಲೆ ಕಸ ಹಾಕುವವರನ್ನು ಗುರುತಿಸಿ ದಂಡ ವಿಧಿಸಬೇಕು. ಮನೆಯಿಂದಲೂ ಸಹ ಇದೇ ರೀತಿ ಕಸವನ್ನು ರಸ್ತೆ ಬದಿಯಲ್ಲಿ ಹಾಕದೆ ಪಾಲಿಕೆ ವಾಹನಕ್ಕೆ ನೀಡುವ ಕುರಿತು ಜಾಗೃತಿ ಮೂಡಿಸುವಂತೆ ತಿಳಿಸಿದರು.
ಬಾಪೂಜಿ ನಗರದ ರಾಜ ಕಾಲುವೆ ಬಳಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಪೈಪ್‌ನಲ್ಲಿ ಕಲುಷಿತ ನೀರು ಬರುತ್ತಿರುವ ಬಗ್ಗೆ ನಿವಾಸಿಗಳು ದೂರು ಸಲ್ಲಿಸಿದರು. ಇದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಚರಂಡಿ ನೀರು ಕುಡಿಯುವ ನೀರಿನ ಪೈಪ್‌ನೊಂದಿಗೆ ಸೇರಿರುವ ಸಾಧ್ಯತೆಯಿದೆ. ಇದನ್ನು ತಕ್ಷಣ ಸರಿಪಡಿಸಬೇಕು. ಅದುವರೆಗೆ ಈ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು. ಸೊಳ್ಳೆ ನಿಯಂತ್ರಣಕ್ಕೆ ನಿರಂತರ ಔಷಧಿ ಸಿಂಪಡಣೆ ಮಾತ್ರವಲ್ಲದೆ ಮನೆಯ ಒಳಗಡೆ ಕೂಡಾ ಫಾಗಿಂಗ್ ನಡೆಸುವಂತೆ ಸೂಚಿಸಿದರು. ಮನೆಯ ಸುತ್ತಮುತ್ತ ಆದಷ್ಟು ಸ್ವತ್ಛತೆಯನ್ನು ಕಾಪಾಡಬೇಕು. ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಸೊಳ್ಳೆ ಪರದೆಯನ್ನು ಉಪಯೋಗಿಸುವಂತೆ ನಿವಾಸಿಗಳಿಗೆ ಮನವಿ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ ಸುರಗಿಹಳ್ಳಿ, ಡಾ| ನಟರಾಜ್, ಪಾಲಿಕೆ ಸದಸ್ಯರಾದ ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ಮಹಾನಗರ ಪಾಲಿಕೆ ಅಧಿಕಾರಿಗಳು ಇದ್ದರು.