ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ, ಕರ್ನಾಟಕದಲ್ಲಿನ ತನ್ನಮಿತ್ರ ಪಕ್ಷ ಜೆಡಿಎಸ್‌ಗೆ ಕೇವಲ ಎಂಟು ಸೀಟುಗಳನ್ನು ಮಾತ್ರವೇ ಬಿಟ್ಟುಕೊಟ್ಟಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಉಭಯ ಪಕ್ಷಗಳ ನಡುವಿನ ಸೀಟು ಹಂಚಿಕೆ ಸೂತ್ರ ಇನ್ನೂ ಅಂತಿಮವಾಗಿಲ್ಲದಿರುವುದರಿಂದ ಗೊಂದಲ ಈಗಲೂ ಅಂತೆಯೇ ಮುಂದುವರಿದಿರುವುದಾಗಿ ವರದಿಗಳು ತಿಳಿಸಿವೆ.
ಎರಡು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದ ಜೆಡಿಎಸ್ ಮುಖ್ಯಸ್ಥ ಎಚ್ ಡಿ ದೇವೇಗೌಡ ಅವರು ತಮ್ಮ ಪಕ್ಷಕ್ಕೆ ಎಂಟು ಕ್ಷೇತ್ರಗಳನ್ನು ಮಾತ್ರವೇ ಪಡೆಯುವಲ್ಲಿ ಸಫಲರಾಗಿದ್ದರು ಎಂದು ವರದಿಗಳು ಹೇಳಿವೆ.
ದೇವೇಗೌಡರು 12 ಸೀಟುಗಳಿಗೆ ಬೇಡಿಕೆ ಇಟ್ಟಿದ್ದರು. ಕೊನೇ ಪಕ್ಷ ಹತ್ತು ಸೀಟುಗಳನ್ನಾದರೂ ಜೆಡಿಎಸ್‌ಗೆ ಕೊಡಬೇಕೆಂದು ಗೌಡರು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಕಾಂಗ್ರೆಸ್, ಜೆಡಿಎಸ್‌ಗೆ 8 ಸೀಟುಗಳನ್ನು ಮಾತ್ರವೇ ಬಿಟ್ಟುಕೊಟ್ಟಿರುವುದಾಗಿ ವರದಿಗಳು ತಿಳಿಸಿವೆ.
ಮಂಡ್ಯ, ಹಾಸನ, ಶಿವಮೊಗ್ಗ, ತುಮಕೂರು, ಉಡುಪಿ-ಚಿಕ್ಕಮಗಳೂರು, ಬೆಂಗಳೂರು ಉತ್ತರ, ವಿಜಯಪುರ, ಮೈಸೂರು (ಒಟ್ಟು 8) ಕ್ಷೇತ್ರಗಳಲ್ಲಿ ಜೆಡಿಎಸ್ ಹೆಚ್ಚು ಶಕ್ತಿಶಾಲಿಯಾಗಿರುವ ಕಾರಣಕ್ಕೆ ಆ ಕ್ಷೇತ್ರಗಳನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ ಎಂದು ವರದಿಗಳು ಹೇಳಿವೆ.