ತಿರುವನಂತಪುರಂ: ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಪಕ್ಷವು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ಬುಧವಾರ ಹೇಳಿದ್ದು ಪ್ರತಿಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಒಳಗೆ ಸೀಟುಗಳ ಹಂಚಿಕೆಯನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಹೆಸರನ್ನು ದೆಹಲಿಯಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದೆ.
ಯುಡಿಎಫ್ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಭಾಗಿಯಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ.
ಯುಡಿಎಫ್ ನ ಎರಡನೇ ಅತಿದೊಡ್ಡ ಮೈತ್ರಿ ಪಕ್ಷವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಈ ಬಾರಿ ಇನ್ನೂ ಒಂದು ಲೋಕಸಭಾ ಸ್ಥಾನವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಮನವರಿಕೆ ಮಾಡಿರುವುದಾಗಿ ಹೇಳಿದರು.
ಯುಡಿಎಫ್‌ನಲ್ಲಿ ನಡೆದ ಚರ್ಚೆಗಳ ಪ್ರಕಾರ, ಕೇರಳದ 20 ಲೋಕಸಭಾ ಸ್ಥಾನಗಳಲ್ಲಿ ಹಿಂದಿನಂತೆ ಐಯುಎಂಎಲ್ ಮಲಪ್ಪುರಂ ಮತ್ತು ಪೊನ್ನಾನಿ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕೆಸಿಜೆ (ಜೆ) ಮತ್ತು ಆರ್ ಎಸ್ ಪಿ ಒಂದೊಂದು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಕೊಲ್ಲಂನಲ್ಲಿ ಆರ್‌ಎಸ್‌ಪಿ ಮತ್ತು ಕೊಟ್ಟಾಯಂನಲ್ಲಿ ಕೇರಳ ಕಾಂಗ್ರೆಸ್ (ಜೆ) ಸ್ಪರ್ಧಿಸಲಿದೆ” ಎಂದು ಸತೀಶನ್ ಹೇಳಿದರು.
IUML ನಾಯಕತ್ವ ಇತ್ತೀಚೆಗೆ ಈ ಬಾರಿ ಇನ್ನೂ ಒಂದು ಲೋಕಸಭಾ ಸ್ಥಾನವನ್ನು ಕೇಳುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿತ್ತು. ಐಯುಎಂಎಲ್ ಮೂರನೇ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ ಎಂದು ಒಪ್ಪಿಕೊಂಡ ಸತೀಶನ್, ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಹಂಚಿಕೆ ಮಾಡುವ ತೊಂದರೆಯ ಬಗ್ಗೆ ಐಯುಎಂಎಲ್ ನಾಯಕತ್ವಕ್ಕೆ ಮನವರಿಕೆಯಾಗಿದೆ. ಬದಲಾಗಿ,ತೆರವಾಗುವ ಮುಂದಿನ ರಾಜ್ಯಸಭಾ ಸ್ಥಾನವನ್ನು ಐಯುಎಂಎಲ್‌ಗೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದರು.
ಕೇರಳದ ಎಲ್ಲಾ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಚಟುವಟಿಕೆಗಳೊಂದಿಗೆ ಮುಂದುವರಿಯುವ ಮೂಲಕ ಭಾರತದ ಮೈತ್ರಿಯನ್ನು ಬಲಪಡಿಸಲು ಯುಡಿಎಫ್ ನಿರ್ಧರಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಕೇರಳದಲ್ಲಿ ಸಾರ್ವಜನಿಕ ಭಾವನೆ ಇದೆ ಎಂದು ಸತೀಶನ್ ಹೇಳಿದರು.
ಈ ಬಾರಿ ಕೇರಳದಲ್ಲಿ ಖಾತೆ ತೆರೆಯಲು ಬಿಜೆಪಿ ಭಾರೀ ಪ್ರಯತ್ನ ನಡೆಸುತ್ತಿದ್ದು, ಎಲ್ ಡಿಎಫ್ ಮತ್ತು ಯುಡಿಎಫ್ ಸೆಣಸಾಟದ ಲಾಭ ಮಾಡಿಕೊಳ್ಳಲು ಯಶಸ್ವಿಯಾಗುವುದೇ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.