ಗದಗ: ”ರಾಜ್ಯದಲ್ಲಿ ಬಿಜೆಪಿಗೆ 25 ಸ್ಥಾನ ಗೆಲ್ಲಬೇಕಾದರೆ ಬಿಜೆಪಿ ನಾಯಕರು ಈಶ್ವರಪ್ಪನವರ ಮನೆಗೆ ಹೋಗಿ ಕೈ-ಕಾಲು ಹಿಡಿದು ಕೆ.ಇ. ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರಕೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ, ಕುರುಬ ಸಮುದಾಯ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತದೆ” ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಎಚ್ಚರಿಕೆ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ರವಿವಾರ ನಡೆದ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕುರುಬರು ಕೆಲಸ ಮಾಡಿದರೆ ಬಸವರಾಜ ಬೊಮ್ಮಾಯಿ ಅವರು ಗೆಲ್ಲುತ್ತಾರೆ. ಇಲ್ಲದಿದ್ದರೆ ನಿಮ್ಮ ಸೋಲು ಕಟ್ಟಿಟ್ಚ ಬುತ್ತಿ ಎಂದು ಹೇಳಿದರು.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಸ್. ಈಶ್ವರಪ್ಪನವರ ಪುತ್ರ, ಕೆ.ಇ. ಕಾಂತೇಶ್ ಅವರಿಗೆ ಟಿಕೆಟ್ ತಪ್ಪಿಸುವುದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕೈವಾಡವೂ ಇದೆ. ಹಿಂದುತ್ವದ ಹೆಸರಿನಲ್ಲಿ ಹಿಂದುಳಿದ ವರ್ಗದವರನ್ನು ಬಿಜೆಪಿ ತುಳಿಯುತ್ತಿದೆ ಎಂದು ಕಿಡಿ ಕಾರಿದರು.
ರಾಜ್ಯದ ಹಲವು ಕ್ಷೇತ್ರದಲ್ಲಿ ತಮ್ಮ-ತಮ್ಮ ಮಕ್ಕಳಿಗೆ ಟಿಕೆಟ್ ನೀಡಿದ್ದಾರೆ. ಆದರೆ, ಈಶ್ವರಪ್ಪನವರ ಮಗನಿಗೆ ಯಾಕೆ ಟಿಕೆಟ್ ನೀಡಲಿಲ್ಲ.? ಈಶ್ವರಪ್ಪನವರು ಡಿಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದುಡಿದಿದ್ದಾರೆ. ದಕ್ಷಿಣ ಕನ್ನಡ ಭಾಗದಲ್ಲಿ ಬ್ರಾಹ್ಮಣ ಮಠಗಳಿಗೆ ಈಶ್ವರಪ್ಪನವರು ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಿದ್ದರೂ ನೀವು ಕಾಂತೇಶ್‌ಗೆ ಏಕೆ ಟಿಕೆಟ್ ನೀಡಲಿಲ್ಲ ಎಂದು ಪ್ರಶ್ನಿಸಿದರು.
2019ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ 25 ಸ್ಥಾನ ಬರಲು ಕುರುಬರ ಮತಗಳೇ ನಿರ್ಣಾಯಕವಾಗಿದ್ದವು. ಮಾಜಿ ಸಿ.ಎಂ ಬಸವರಾಜ ಬೊಮ್ಮಾಯಿ ಅವರು ಶಾಸಕರಾಗಿದ್ದರೂ ಅವರಿಗೆ ಟಿಕೆಟ್ ನೀಡಿದ್ದು ಯಾಕೆ? ಇಡೀ ದೇಶದಲ್ಲಿ ಕುರುಬರಿಂದಲೇ ಹಿಂದುತ್ವ ಉಳಿದಿದೆ. ಇಂತಹ ಕುರುಬರಿಗೆ ಅನ್ಯಾಯ ಮಾಡಿದ್ದು ಎಷ್ಟು ಸರಿ.? ಹಿಂದುತ್ವದ ಹೆಸರಿನಲ್ಲಿ ಹಿಂದುಳಿದ ವರ್ಗದವರನ್ನು ಬಿಜೆಪಿ ತುಳಿಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಸಭೆಯಲ್ಲಿ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಕಾಂತೇಶ್ ಜಗಳೂರು, ಕೆ.ಎಸ್. ಈಶ್ವರಪ್ಪನವರ ಅಭಿಮಾನಿ ಬಳಗದ ಅಧ್ಯಕ್ಷ ಅರುಣ ಅಣ್ಣಿಗೇರಿ, ರಾಯಣ್ಣ ಬ್ರಿಗೇಡ್‌ನ ನಾಯಕಿ ಸುಜಾತ ಕಡೆಮನಿ, ಅರುಣ ಬಡಿಗೇರ ಸೇರಿದಂತೆ ಜಿಲ್ಲೆಯ ಕುರುಬ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.