Advertisement

LS Election; ಮೂರು ದಶಕಗಳ ಕಾಂಗ್ರೆಸ್‌ ಕೋಟೆ ಈಗ ಬಿಜೆಪಿ ನೆಲೆ

12:37 AM Mar 16, 2024 | Team Udayavani |

ಬೆಳಗಾವಿ: ನದಿಗಳ ನಾಡು ಮತ್ತು ಕಬ್ಬಿನ ಬೀಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರ ರಾಜಕೀಯವಾಗಿ ಬಹಳ ಜಿದ್ದಾಜಿದ್ದಿಯ ಕ್ಷೇತ್ರ. ಜತೆಗೆ ಹೊಂದಾಣಿಕೆ ರಾಜಕಾರಣಕ್ಕೂ ಹೆಸರುವಾಸಿ. ಮೀಸಲು ಕ್ಷೇತ್ರ ವಾಗಿದ್ದ ಕಾಲದಲ್ಲಿ ಇದು ಕಾಂಗ್ರೆಸ್‌ನ ಭದ್ರ ಕೋಟೆ. ಈಗ ಈ ಕ್ಷೇತ್ರವನ್ನು ಬಿಜೆಪಿ ಆಳುತ್ತಿದೆ.

Advertisement

ಪ್ರಭಾವಿ ರಾಜಕಾರಣಿಗಳಿಂದಲೇ ತುಂಬಿರುವ ಈ ಕ್ಷೇತ್ರದಲ್ಲಿ ಹೊಂದಾಣಿಕೆ ಹಾಗೂ ಒಳಒಪ್ಪಂದ ರಾಜಕಾರಣ ಮಾಡಿಕೊಳ್ಳುವದರಲ್ಲೂ ತೀವ್ರ ಪೈಪೋಟಿ ಕಾಣುತ್ತಿದೆ. ಪಕ್ಷದ ಹೆಸರು ಮೇಲ್ನೋಟಕ್ಕೆ ಮಾತ್ರ. ಆದರೆ ಒಳಮನಸ್ಸಿನ ರಾಜಕಾರಣ ಊಹಿಸಲು ಆಗದಷ್ಟು ಭಿನ್ನ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಚಿಕ್ಕೋಡಿ- ಸದಲಗಾ, ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ, ಕುಡಚಿ, ಹುಕ್ಕೇರಿ ಹಾಗೂ ಯಮಕನಮರಡಿ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇದರಲ್ಲಿ ಐದು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್‌ ಹಾಗೂ ಮೂರು ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ.

ರಾಜಕೀಯ ಇತಿಹಾಸ ನೋಡುವುದಾದರೆ ಈ ಕ್ಷೇತ್ರ ಎಂದರೆ ಎಲ್ಲರ ಬಾಯಲ್ಲೂ ಥಟ್ಟನೆ ಕೇಳಿಬರುವ ಹೆಸರು ಕಾಂಗ್ರೆಸ್‌ನ ಬಿ. ಶಂಕರಾನಂದ. ಮೀಸಲು ಕ್ಷೇತ್ರವಾಗಿದ್ದ ಇದು ಶಂಕರಾನಂದ ಅವರ ಮೂಲಕ ನಿರಂತರ ಮೂರು ದಶಕಗಳ ಕಾಲ ಕಾಂಗ್ರೆಸ್‌ನ ಭದ್ರಕೋಟೆ. 1967ರಿಂದ 1991ರ ವರೆಗೆ ದಾಖಲೆಯ ಏಳು ಬಾರಿ ಚಿಕ್ಕೋಡಿಯಲ್ಲಿ ಬೇರೆ ಯಾರೂ ಬರದಂತೆ ಮಾಡಿದ್ದವರು. ತಮ್ಮನ್ನು ಬಿಟ್ಟರೆ ಉಳಿದವರಿಗೆ ಸ್ಥಾನವಿಲ್ಲ ಎಂಬ ಇತಿಹಾಸ ಸೃಷ್ಟಿಸಿದ್ದರು.
ಈ ದಾಖಲೆಯ ಸರದಾರನಿಗೆ ಮೊದಲ ಸೋಲಿನ ಕಹಿ ಉಣಿಸಲು ಕ್ಷೇತ್ರದ ಜನತೆ 1996 ರವರೆಗೆ ಕಾಯಬೇಕಾಯಿತು. ಜನತಾದಳದ ರತ್ನಮಾಲಾ ಸವಣೂರ ಅವರು ಶಂಕರಾನಂದರ ಈ ಅಭೇದ್ಯ ಕೋಟೆಯನ್ನು ಮುರಿದು ಹೊಸ ಇತಿಹಾಸ ನಿರ್ಮಾಣ ಮಾಡಿದರು. ಜತೆಗೆ ಈ ಕ್ಷೇತ್ರದಲ್ಲಿದ್ದ ಕಾಂಗ್ರೆಸ್‌ ಸಾರ್ವಭೌಮತ್ವಕ್ಕೆ ಅಂತ್ಯ ಹಾಡಿದರು.

Advertisement

ಶಂಕರಾನಂದ ಸೋತ ಬಳಿಕ ಇಲ್ಲಿ ಕಾಂಗ್ರೆಸ್‌ ಮತ್ತೆ ಪುನರ್ಜನ್ಮ ಪಡೆಯಲು 2014ರ ವರೆಗೆ ಕಾಯಬೇಕಾಯಿತು.
ಶಂಕರಾನಂದರ ಸರ್ವಾಧಿಕಾರಕ್ಕೆ ಮಂಗಳ ಹಾಡಿದ ರತ್ನಮಾಲಾ ಒಮ್ಮೆ ಮಾತ್ರ ಸಂಸತ್‌ ಪ್ರವೇಶ ಮಾಡಿದರು. ಅವರ ಗೆಲುವಿನ ಓಟಕ್ಕೆ 1998ರಲ್ಲಿ ರಮೇಶ ಜಿಗಜಿಣಗಿ ಕಡಿವಾಣ ಹಾಕಿದರು. ಲೋಕಶಕ್ತಿ ಮೂಲಕ ಸಂಸತ್‌ ಪ್ರವೇಶಿಸಿದ ಜಿಗಜಿಣಗಿ, ಬಳಿಕ ಎರಡು ಚುನಾವಣೆಯನ್ನು ಬಿಜೆಪಿ ಹೆಸರಿನ ಮೇಲೆ ಎದುರಿಸಿ ಯಶಸ್ವಿಯಾದರು. ಶಂಕರಾನಂದ ಬಳಿಕ ಈ ಕ್ಷೇತ್ರದಿಂದ ಅತೀ ಹೆಚ್ಚು ಬಾರಿ ಅಂದರೆ ಸತತ ಮೂರು ಬಾರಿ ಗೆದ್ದ ಸಂಸದ ಎಂಬ ಕೀರ್ತಿ ಜಿಗಜಿಣಗಿ ಅವರದ್ದಾಗಿದೆ.

1967ರಿಂದ ಮೀಸಲು ಕ್ಷೇತ್ರವಾಗಿದ್ದ ಚಿಕ್ಕೋಡಿ 2009ರಲ್ಲಿ ಸಾಮಾನ್ಯ ವರ್ಗದ ಕ್ಷೇತ್ರವಾಗಿ ಬದಲಾಯಿತು. ಈಗ ಚಿಕ್ಕೋಡಿ ಬಿಜೆಪಿ ವಶದಲ್ಲಿದೆ. ಅಣ್ಣಾಸಾಹೇಬ ಜೊಲ್ಲೆ ಈ ಕ್ಷೇತ್ರದ ಸಂಸದರು. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆಯೇ ನೇರ ಹಣಾಹಣಿ ನಡೆಯುತ್ತ ಬಂದಿದೆ. ಜೆಡಿಎಸ್‌ ಸ್ಪರ್ಧೆ ಮಾಡಿದ್ದರೂ ಅದು ನೆಪಮಾತ್ರಕ್ಕೆ ಎನ್ನುವಂತಿತ್ತು. ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿ ಕೊಂಡಿರು ವುದರಿಂದ ಬಿಜೆಪಿಗೆ ಒಂದಿಷ್ಟು ಅನುಕೂಲ ವಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಹಣದ ಪ್ರಭಾವ ಒಳಒಪ್ಪಂದದ ಜತೆಗೆ ಜಾತಿ ಸಮೀಕರಣ ಕೂಡ ಹೆಚ್ಚು ಕೆಲಸ ಮಾಡಲಿದೆ. ಅಭ್ಯರ್ಥಿಗಳ ಆಯ್ಕೆ ಬಳಿಕ ಇದಕ್ಕೆ ಮತ್ತಷ್ಟು ರಂಗು ಬರಲಿದೆ.

ಜಾತಿ ಲೆಕ್ಕಾಚಾರ
ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಅಧಿಕವಾಗಿದ್ದಾರೆ. ಈ ಸಮುದಾಯ ಸುಮಾರು 4 ಲಕ್ಷ ಮತದಾರರನ್ನು ಹೊಂದಿದೆ. ಕುರುಬರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಮತ್ತು ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಚುನಾವಣೆಯ ಫಲಿತಾಂಶ ಅದಲು ಬದಲು ಮಾಡುವ ಶಕ್ತಿ ಹೊಂದಿದ್ದಾರೆ.

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next