ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯು ಕಡು ಬೇಸಗೆಯ ಅವಧಿಯಲ್ಲಿ ನಡೆಯುವ ಭಾರತದ ಅತಿ ದೀರ್ಘಕಾಲದ ಚುನಾವಣೆಯಾಗಿದೆ. ಹೌದು, ದೇಶವು ಬಿಸಿಲ ಝಳದಲ್ಲಿ ಬೇಯುತ್ತಿ ರುವ ಹೊತ್ತಲ್ಲೇ ಬರೋಬ್ಬರಿ 44 ದಿನಗಳ ಕಾಲ 7 ಹಂತಗಳ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಏಪ್ರಿಲ್, ಮೇ ತಿಂಗಳಲ್ಲಿ ದೇಶಾದ್ಯಂತ ಬಿಸಿಗಾಳಿಯ ಅಬ್ಬರ ಹೆಚ್ಚಿರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಅಂದರೆ, ಏ.19ರಿಂದ ಜೂ.1ರವರೆಗೆ ನಡೆಯುವ ಮತದಾನ ಪ್ರಕ್ರಿಯೆಯ “ಬಿಸಿ’ಯು ಬೇಸಗೆಯ “ಬಿಸಿ’ಗೆ ಪೈಪೋಟಿ ನೀಡಲಿದೆ.
2004ರ ಲೋಕಸಭೆ ಚುನಾವಣೆಯು ಕೇವಲ 4 ಹಂತಗಳಲ್ಲಿ ಒಟ್ಟು 21 ದಿನಗಳಲ್ಲಿ ಮುಗಿದಿತ್ತು. ಆಗ ತಮ್ಮ ಸರ್ಕಾರದ ಪರ ಅಲೆಯೆದ್ದಿದೆ ಎಂದು ಭಾವಿಸಿದ್ದಅಟಲ್ ಬಿಹಾರಿ ವಾಜಪೇಯಿ ಸರ್ಕಾರವು 6 ತಿಂಗಳು ಮುಂಚಿತವಾಗಿಯೇ ಚುನಾವಣೆಗೆ ಮುಂದಾಯಿತು. ಅಂದಿನಿಂದ ಚುನಾವಣಾ ಋತು ಬೇಸಗೆಗೆ ಬದಲಾಯಿತು. ಅದಕ್ಕೂ ಮೊದಲು, 1999ರ ಚುನಾವಣೆಯು ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ನಡೆದಿತ್ತು.
ಅತ್ಯಂತ ದೀರ್ಘಾವಧಿ
ಪ್ರಸಕ್ತ ಸಾಲಿನ ಲೋಕಸಭೆ ಚುನಾವಣೆ 44 ದಿನಗಳಿಗೆ ವ್ಯಾಪಿಸಿ ಅತ್ಯಂತ ದೀರ್ಘಾವಧಿಯದ್ದಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಮೊದಲ ಅವಧಿಯಲ್ಲಿ 1951-52ನೇ ಸಾಲಿನಲ್ಲಿ ನಡೆದಿದ್ದ ಮೊದಲ ಚುನಾವಣೆ 4 ತಿಂಗಳ ವರೆಗೆ ನಡೆದಿತ್ತು. ಆ ವರ್ಷ 1951ರ ಅ.25ರಿಂದ 1952ರ ಫೆ.21ರ ವರೆಗೆ ಚುನಾವಣೆ ಪ್ರಕ್ರಿಯೆ ನಡೆದಿತ್ತು. 1980ರಲ್ಲಿ ನಡೆದಿದ್ದ ಚುನಾವಣೆ ಕೇವಲ 4 ದಿನಗಳಲ್ಲಿ ಮುಕ್ತಾಯವಾಗಿತ್ತು.