ನವದೆಹಲಿ: ದೇಶಾದ್ಯಂತ ರೈತರ ಸಾಲ ಮನ್ನಾಕ್ಕಾಗಿ ಆಗ್ರಹ ಕೇಳಿಬರುವ ಹೊತ್ತಲ್ಲೇ, ಪ್ರಸಕ್ತ ವರ್ಷದ ಅಲ್ಪಾವಧಿ ಬೆಳೆಸಾಲಕ್ಕೂ ಬಡ್ಡಿ ವಿನಾಯ್ತಿ ಮುಂದುವರಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
ಈಗಾಗಲೇ ಕೇಂದ್ರ ಸರ್ಕಾರ ಸಾಲ ಮನ್ನಾ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಯಾವುದೇ ರೀತಿ ಸಹಾಯ ಒದಗಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ಸಾಲ ಮನ್ನಾ ಮಾಡಿದರೆ, ಅದಕ್ಕೆ ಬೇಕಾಗುವ ಸಂಪನ್ಮೂಲಗಳನ್ನು ತಾವೇ ಹೊಂದಿಸಿಕೊಳ್ಳಬೇಕು ಎಂದೂ ಸೂಚಿಸಿದೆ. ಹೀಗಾಗಿ, ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ವಿನಾಯ್ತಿ ಮುಂದುವರಿಕೆ ರೈತರ ಪಾಲಿಗೆ ಆಶಾದಾಯಕವಾಗಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೇ.2 ರಷ್ಟು ಸಬ್ಸಿಡಿ ಕೊಡುವ ಮೂಲಕ ಶೇ.7ರ ದರದಲ್ಲಿ ಮೂರು ಲಕ್ಷದ ವರೆಗೆ ಅಲ್ಪಾವಧಿ ಸಾಲ ನೀಡಲು ತೀರ್ಮಾನಿಸಲಾಗಿದೆ. ಸಾಮಾನ್ಯವಾಗಿ ಅಲ್ಪಾವಧಿ ಬೆಳೆಸಾಲಕ್ಕೆ ಶೇ.9 ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಇದಕ್ಕೆ ಶೇ.2ರ ವಿನಾಯ್ತಿ ಕೊಟ್ಟರೆ, ಬಡ್ಡಿ ದರ ಶೇ.7ಕ್ಕೆ ಇಳಿಯಲಿದೆ. ಇಷ್ಟೇ ಅಲ್ಲ, ಕಾಲ ಕಾಲಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ಮತ್ತೂ ಶೇ.3 ರಷ್ಟು ಬಡ್ಡಿ ಕಡಿತ ಮಾಡಲಾಗುತ್ತದೆ. ಅಂದರೆ, ಶೇ.4 ರ ದರದಲ್ಲಿ ಸಾಲ ಸಿಕ್ಕಂತಾಗುತ್ತದೆ.
ರೈತರ ಈ ಬಡ್ಡಿ ರಿಯಾಯ್ತಿ ಯೋಜನೆಗಾಗಿ 20,339 ಕೋಟಿ ಹಣ ತೆಗೆದಿರಿಸಲಾಗಿದೆ. ಜತೆಗೆ ಬೆಳೆ ಕೊಯ್ಲು ಮುಗಿದ ನಂತರದ ಹಣದ ಅವಶ್ಯಕತೆಗಾಗಿಯೂ ಆರು ತಿಂಗಳ ಅವಧಿಗಾಗಿ ಶೇ.7ರ ಬಡ್ಡಿ ದರದಲ್ಲಿ ಸಾಲ ನೀಡಲೂ ಸಂಪುಟ ನಿರ್ಧರಿಸಿದೆ. ಒಂದು ವೇಳೆ ನೈಸರ್ಗಿಕ ವಿಕೋಪಕ್ಕೆ ತುತ್ತಾದ ರೈತರಿಗೆ ಒಂದಷ್ಟು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಶೇ.2 ರಷ್ಟು ಬಡ್ಡಿ ವಿನಾಯ್ತಿ ನೀಡಲೂ ತೀರ್ಮಾನಿಸಲಾಗಿದೆ.ಬೆಳೆಸಾಲದ ಜತೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವಿಮೆಯನ್ನು ಲಿಂಕ್ ಮಾಡಲಾಗಿದೆ. ಜತೆಗೆ ಈ ವರ್ಷದಿಂದ ಆಧಾರ್ ಕೂಡ ಬೆಳೆ ಸಾಲಕ್ಕೆ ಲಿಂಕ್ ಆಗಲಿದೆ.
ಕಳೆದ ತಿಂಗಳಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಲ್ಲಾ ಬ್ಯಾಂಕುಗಳಿಗೆ ಬೆಳೆ ಸಾಲಕ್ಕೆ ಸಂಬಂಧಿಸಿದಂತೆ ಬಡ್ಡಿ ವಿನಾಯ್ತಿಯನ್ನು ಮುಂದುವರಿಸುವಂತೆ ಹೇಳಿತ್ತು. ಹೀಗಾಗಿ ಈ ಅಲ್ಪಾವಧಿ ಸಾಲವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ಸಾಲದಾತರು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಅನ್ವಯವಾಗುತ್ತದೆ. ಇವು ತಮ್ಮಲ್ಲಿರುವ ಹಣವನ್ನು ಬಳಸಿ ಸಾಲ ಕೊಡಬಹುದು ಅಥವಾ ನಬಾರ್ಡ್‌ನಿಂದಾದರೂ ಹಣ ಪಡೆದು ಸಾಲ ನೀಡಬಹುದಾಗಿದೆ.
ಸಬ್ಸಿಡಿ ಹೇಗೆ ಸಿಗುತ್ತೆ?
– ಶೇ.9
ಇದು ಕೇಂದ್ರ ಸರ್ಕಾರ ಅಲ್ಪಾವಧಿ ಬೆಳೆಸಾಲಗಳಿಗೆ ವಿಧಿಸುವ ಬಡ್ಡಿ
– ಶೇ.2
ಕೇಂದ್ರ ಸರ್ಕಾರದ ಸಬ್ಸಿಡಿ
– ಶೇ.7
ಸಬ್ಸಿಡಿ ಕಳೆದ ಮೇಲೆ ಸಾಲಕ್ಕೆ ವಿಧಿಸಲಾಗುವ ಬಡ್ಡಿ
– ಶೇ.4
ಕಾಲ ಕಾಲಕ್ಕೆ ಸರಿಯಾಗಿ ಮರುಪಾವತಿಸಿದರೆ ಸಾಲಕ್ಕೆ ಹಾಕುವ ಬಡ್ಡಿ