Advertisement

ಪಿಯು ಉಪನ್ಯಾಸಕರಿಗೆ ಕಡಿಮೆ ವೇತನ

06:15 PM Jun 21, 2022 | Team Udayavani |

ಕೊಪ್ಪಳ: ರಾಜ್ಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅತಿಥಿ ಉಪನ್ಯಾಸಕರಿಗಿಂತಲೂ ಕಡಿಮೆ ವೇತನ ಇರುವುದು ನಿಜಕ್ಕೂ ನೋವಿನ ಸಂಗತಿ. ಕಳೆದ 8 ವರ್ಷಗಳಿಂದಲೂ ವೇತನ ಪರಿಷ್ಕರಣೆಯಿಲ್ಲದೇ ಇವರ ಗೋಳು ಹೇಳತೀರದಾಗಿದೆ.

Advertisement

ಹೌದು.. ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲೂ ಪಪೂ ಅತಿಥಿ ಉಪನ್ಯಾಸಕರು ಮಾಸಿಕ ಕೇವಲ 9 ಸಾವಿರ ರೂ. ವೇತನದಲ್ಲಿ ಜೀವನ ನಿರ್ವಹಿಸುವಂತಾಗಿದೆ. ವಾರದಲ್ಲಿ 16 ತರಗತಿ ನಿರ್ವಹಿಸುವ ಜೊತೆಗೆ ಕಾಲೇಜಿನ ಕಾರ್ಯ ಚಟುವಟಿಕೆಯಲ್ಲೂ ತೊಡಗಬೇಕಿದೆ.

ಈ ಹಿಂದೆ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಸಾವಿರಾರು ಜನರು ವೇತನ ಹೆಚ್ಚಿಸುವಂತೆ ಹಾಗೂ ಸೇವೆ ಕಾಯಂಗೊಳಿಸುವಂತೆ ನಿರಂತರ ಒತ್ತಾಯ ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ತಿಂಗಳುಗಟ್ಟಲೇ ತರಗತಿ ಬಹಿಷ್ಕಾರ ಮಾಡಿ ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದರು.

ಪ್ರತಿಭಟನೆಯ ಬಿಸಿ ಅರಿತ ಉನ್ನತ ಶಿಕ್ಷಣ ಇಲಾಖೆಯು ಈ ಮೊದಲು ಅವರಿಗೆ ಕೊಡುತ್ತಿದ್ದ ಮಾಸಿಕ 13 ಸಾವಿರ ರೂ. ಇದ್ದ ವೇತನವನ್ನು ಪರಿಷ್ಕರಿಸಿ ನೆಟ್‌, ಪಿಎಚ್‌ಡಿ ಪೂರ್ಣಗೊಳಿಸದವರಿಗೆ 26 ಸಾವಿರ ರೂ. ಈ ಎರಡನ್ನೂ ಪೂರ್ಣಗೊಳಿಸಿದವರಿಗೆ 32 ಸಾವಿರ ರೂ. ನಿಗದಿಪಡಿಸಿ ವಾರದಲ್ಲಿ 15 ತರಗತಿ ಬೋಧನೆ ಮಾಡಲು ಸೂಚಿಸಿತ್ತು.

ಇನ್ನು ಈಚೆಗೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುವವರಿಗೆ ವೇತನ ಪರಿಷ್ಕರಣೆ ಮಾಡಿದೆ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೋಧಿಸುವ ಅತಿಥಿ ಶಿಕ್ಷಕರಿಗೆ 10 ಸಾವಿರ ರೂ., ಪ್ರೌಢಶಾಲೆಯಲ್ಲಿ ಬೋ ಧಿಸುವ ಶಿಕ್ಷಕರಿಗೆ 10,500 ರೂ. ನಿಗದಿ ಮಾಡಿದೆ. 2500 ರೂ. ವೇತನ ಪರಿಷ್ಕರಣೆ ಮಾಡಿದೆ.

Advertisement

ಗೋಳು ಕೇಳ್ಳೋರಿಲ್ಲ: ಕಳೆದ 8 ವರ್ಷಗಳಿಂದ ಅತಿಥಿ ಉಪನ್ಯಾಸಕರ ಗೋಳು ಕೇಳೋರು ಇಲ್ಲದಂತಾಗಿದೆ. ವಾರಕ್ಕೆ 16 ತರಗತಿ ಬೋ ಧಿಸಬೇಕು. ಮಾಸಿಕ 9 ಸಾವಿರ ರೂ. ವೇತನ ಪಡೆಯಬೇಕಿದೆ. ಇಷ್ಟು ವೇತನದಲ್ಲಿ ಜೀವನ ನಿರ್ವಹಣೆ ತುಂಬ ಕಷ್ಟವಾಗುತ್ತಿದೆ ಎಂದು ಗೋಳಾಡುತ್ತಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅತಿಥಿ ಶಿಕ್ಷಕರ ವೇತನಕ್ಕಿಂತ ನಮ್ಮ ವೇತನ ಅತ್ಯಂತ ಕಡಿಮೆಯಿದೆ. ಸರ್ಕಾರ ಪದವಿ, ಪ್ರಾಥಮಿಕ, ಪ್ರೌಢಶಾಲೆಗಳ ಅತಿಥಿ ಶಿಕ್ಷಕರ ಮಧ್ಯೆ ನಮ್ಮನ್ನು ಮರೆತಿದೆ. ರಾಜ್ಯದಲ್ಲಿ 3200 ಜನ ಪಿಯು ಅತಿಥಿ ಉಪನ್ಯಾಸಕರಿದ್ದು, ನಮ್ಮ ಕಷ್ಟ ಹೇಳತೀರದಾಗಿದೆ ಎಂದು ವೇದನೆ ವ್ಯಕ್ತಪಡಿಸುತ್ತಿದ್ದಾರೆ.

ಪಿಯು ಕಾಲೇಜುಗಳಲ್ಲಿ ವಾರಕ್ಕೆ 16 ಅವಧಿಯ ತರಗತಿ ಬೋಧನೆ ಮಾಡುವ ಜೊತೆಗೆ ಇತರೆ ಕಾಲೇಜಿನ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕಿದೆ. ಅಂದರೆ ಇಡೀ ದಿನ ಕಾಲೇಜಿನ ವಿವಿಧ ಚಟುವಟಿಕೆಯಲ್ಲೇ ಕಾಲ ಕಳೆಯಬೇಕಿದೆ. ಬೇರೆ ಕೆಲಸವನ್ನೂ ಮಾಡುವುದು ಕಷ್ಟವಾಗಲಿದೆ. ಹಾಗಾಗಿ ಇರುವ ಒಂದೇ ಕೆಲಸ ನಂಬಿ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಪಿಯು ಅತಿಥಿ ಉಪನ್ಯಾಸಕರ ಮೇಲಿದೆ. ಸರ್ಕಾರ ಇನ್ನಾದರೂ ಅವರ ಗೋಳಾಟ ಅರಿತು ವೇತನ ಪರಿಷ್ಕರಣೆ ಮಾಡಬೇಕಿದೆ.

ಹಲವು ವರ್ಷಗಳಿಂದ ನಾವು ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಸರ್ಕಾರ ನಮ್ಮ ವೇತನವನ್ನು ಪರಿಷ್ಕರಣೆ ಮಾಡುತ್ತಲೇ ಇಲ್ಲ. ನಾವು ಹಲವು ಬಾರಿ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆದಿದ್ದೇವೆ. ನಮಗೆ ಪ್ರಸ್ತುತ ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರ ವೇತನಕ್ಕಿಂತಲೂ ಕಡಿಮೆ ಇದೆ. ಕನಿಷ್ಟ ನಮ್ಮ ವೇತನವನ್ನು 15-20 ಸಾವಿರ ರೂ. ಹೆಚ್ಚಿಸಲಿ. –ಪುಂಡಲೀಕರಡ್ಡಿ ಬಿಸರಳ್ಳಿ, ಉಪಾಧ್ಯಕ್ಷರು, ಪಿಯು ಅತಿಥಿ ಉಪನ್ಯಾಸಕರ ಸಂಘ, ಕೊಪ್ಪಳ  

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next