Advertisement

ಪ್ರೀತಿಯ ಕಾರಂತಜ್ಜ…

06:00 AM Nov 01, 2018 | |

ಮಕ್ಕಳು ಏನೇ ಮೊಂಡಾಟ ಮಾಡಿದರೂ ಕಣ್ಮುಚ್ಚಿ ಕ್ಷಮಿಸಿ, ಅವರ ಪರ ನಿಂತುಬಿಡುವ ಸಾಹಿತಿಗಳಾರಾದರೂ ಇದ್ದರೆ ಅದು ಶಿವರಾಮ ಕಾರಂತರು. ಮಕ್ಕಳ ಪ್ರೀತಿಯ ಕಾರಂತಜ್ಜ. ಇಲ್ಲಿರುವ  ಮಕ್ಕಳ ತುಂಟ ಪ್ರಶ್ನೆಗಳು, ಅಷ್ಟೇ ತುಂಟತನದಿಂದ ಕೂಡಿದ ಕಾರಂತರ ಉತ್ತರಗಳೇ ಅದಕ್ಕೆ ನಿದರ್ಶನ. “ಜೀವನಪರ್ಯಂತ ಮಾಡಬೇಕಾದ ಕೆಲಸವೆಂದರೆ, ಉತ್ತರ ಸಿಗಲಿ ಬಿಡಲಿ ಪ್ರಶ್ನೆ ಕೇಳುತ್ತಲೇ ಇರುವುದು’ ಹೀಗಂದವರು ಕಾರಂತರನ್ನೇ ಹೋಲುತ್ತಿದ್ದ ಜಗತ್‌ಪ್ರಸಿದ್ಧ ವಿಜ್ಞಾನಿ ಐನ್‌ಸ್ಟಿನ್‌. ಈ ಕಾರಣಕ್ಕೇ “ತರಂಗ’ ವಾರಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಕಾರಂತರ ಪ್ರಶ್ನೋತ್ತರ ಸರಣಿಯ ಆಯ್ದ ಭಾಗವನ್ನು ನೀಡಿದ್ದೇವೆ. ಇಲ್ಲಿನ ಪ್ರಶ್ನೆಗಳು ಮುಗ್ಧವಾಗಿ, ತುಂಟತನದಿಂದ ಕೂಡಿರುವಂತೆ ಕಂಡರೂ ಅದರ ಹಿಂದಿರುವ ಸೂಕ್ಷ್ಮಪ್ರಜ್ಞೆ, ಸಾಮಾಜಿಕ ಮತ್ತು ವೈಜ್ಞಾನಿಕ ಮನೋಧರ್ಮ ಗಮನಾರ್ಹ.

Advertisement

1. ನಮ್ಮಂತೆ ಪ್ರಾಣಿಗಳಿಗೂ ನಗು ಬರುತ್ತದೆಯೇ?
ನಮ್ಮಂತೆ ಅವು ಕಿಲಕಿಲ ಎಂದು ನಗುವನ್ನು ಪ್ರಕಟಿಸದೇ ಹೋದರೂ, ತಮ್ಮ ಸಂತೋಷವನ್ನು ಮುಖ ಮತ್ತು ಕಣ್ಣುಗಳಿಂದ ಸೂಚಿಸಬಲ್ಲವು.

2. ಜಪಾನ್‌ ನಮ್ಮ ದೇಶಕ್ಕಿಂತ ಅತೀ ಚಿಕ್ಕದು. ಆದರೂ ನಮ್ಮ ದೇಶಕ್ಕಿಂತಲೂ ಮುಂದುವರಿದಿದೆಯಲ್ಲಾ, ಕಾರಣವೇನು?
ನಿನಗಿಂತ ಚಿಕ್ಕವರು ನಿನಗಿಂತಲೂ ಬುದ್ಧಿವಂತರಾಗಬಾರದೇ? ಆಗಲಾರರೇ! ಜನರು ಅಭಿವೃದ್ಧಿಗೊಳ್ಳುವುದು ಅವರವರ ಪರಿಶ್ರಮದಿಂದ. 

3. ಮೂಢನಂಬಿಕೆ ಎಂದರೆ ಏನು?
ನಿಜವಲ್ಲದ್ದನ್ನು ನಿಜವೆಂದೇ ತಿಳಿದು ಹಾಗೇ ಹೇಳುತ್ತಾ ಬಂದರೆ ಅದನ್ನು ಮೂಢನಂಬಿಕೆ ಎನ್ನುತ್ತಾರೆ

4. ನಮಗೆ ಎರಡು ಕಣ್ಣುಗಳಿರುವಾಗ ವಸ್ತುಗಳೇಕೆ ಎರಡಾಗಿ ಕಾಣುತ್ತಿಲ್ಲ?
ಕಣ್ಣಿಗೆ ಒಂದೇ ವಸ್ತು ಎರಡಾಗಿ ಕಂಡರೆ, ನಾವು ಗೋಡೆಗೆ ತಲೆ ಹೊಡೆದುಕೊಂಡೇವು. ಕೆಲವು ಕೀಟಗಳಿವೆ ನೂರಾರು ಕಣ್ಣುಗಳಿವೆ! ಕಾಣಬೇಕಾದ ವಸ್ತು ಒಂದೇ. ನಮ್ಮ ಎರಡೂ ಕಣ್ಣುಗಳು ಒಂದೇ ಒಂದು ವಸ್ತುವನ್ನು ತೋರಿಸುತ್ತವೆ. 

Advertisement

5. ಸಿನಿಮಾದಲ್ಲಿ ಮುಂದಿನ ಸಾಲಿಗೆ ಕಡಿಮೆ ದುಡ್ಡು, ಹಿಂದಿನ ಸಾಲಿಗೆ ಹೆಚ್ಚು ದುಡ್ಡು. ನಾಟಕ, ಯಕ್ಷಗಾನಕ್ಕಾದರೆ ಮುಂದೆ ಹೆಚ್ಚು ದುಡ್ಡು, ಹಿಂದಿನ ಸಾಲುಗಳಿಗೆ ಕಡಿಮೆ ಯಾಕೆ?
ಸಿನಿಮಾದಲ್ಲಿ ಬೆಳಕು ಹೆಚ್ಚಿಗೆ ಇರುವುದರಿಂದ ಹತ್ತಿರದಿಂದ ನೋಡುವವರ ಕಣ್ಣು ತುಂಬಾ ದಣಿಯುತ್ತದೆ. ಹಾಗಾಗಿ ದೂರದಿಂದ ಕಾಣಲು ಸುಖ. ಅದಕ್ಕಾಗೇ ಹಿಂದಿನವರು ಹೆಚ್ಚು ದುಡ್ಡು ಕೊಡುತ್ತಾರೆ. ಯಕ್ಷಗಾನ ರಂಗಸ್ಥಳಗಳಲ್ಲಿ ಬೆಳಕಿನ ಪೀಡೆ ಅಷ್ಟಾಗಿ ಇರುವುದಿಲ್ಲ.

6. ಒಂಟೆ ಮರಳಿನಲ್ಲಿ ನಡೆಯುವಾಗ ಅದರ ಕಾಲು ಸಿಕ್ಕಿಹಾಕಿಕೊಳ್ಳುವುದಿಲ್ಲ. ನಾವು ನಡೆದರೆ ಸಿಕ್ಕಿಹಾಕೊಳ್ಳುವುದು ಯಾಕೆ ಕಾರಂತಜ್ಜಾ?
ಒಂಟೆ ಮರಳಿನಲ್ಲಿ ನಡೆಯುವುದನ್ನು ನೀನು ನೋಡಿರಲಾರೆ. ದೇಹದ ಭಾರ ಕಾಲಿನ ಹರಹುಗಳ ಮೂಲಕ ಮರಳ ನೆಲದ ಮೇಲೆ ಬೀಳುತ್ತದೆ. ಹರಹು ದೊಡ್ಡದಾಗಿರುವಷ್ಟು ಕಾಲು ಹೂತು ಹೋಗುವುದು ಕಡಿಮೆ. ಒಂಟೆ ಕಾಲುಗಳ ಹರಹು ಸಾಕಷ್ಟು ದೊಡ್ಡವು. ಅದರ ಭಾರಕ್ಕೆ ಮರಳಿನಲ್ಲಿ ಹೂತು ಹೋಗದಂಥವು.

7. ಕಾರಂತಜ್ಜಾ ನಿನ್ನ ಅಕ್ಷರ ಅಷ್ಟು ಸೊಟ್ಟ ಇದೆಯಲ್ಲ. ನೀನು ಕಾಪಿ ಬರೆದಿರಲಿಲ್ಲವಾ?
ಕಾಪಿ ಬರೆಯುವುದನ್ನು ಬಿಟ್ಟು ನಾನು ಕಾಫಿ ಕುಡಿಯುತ್ತೇನೆ.

8. ನಾವು ಹಿಂದಕ್ಕೆ ಓಡಬಲ್ಲೆವು. ಹಾಗೆಯೇ ಪಕ್ಷಿಗಳು ಹಿಂದಕ್ಕೆ ಹಾರಬಲ್ಲವೇ?
ನಾವು ಹಿಂದಕ್ಕೆ ಹಾರಲಾರೆವು. ಹಕ್ಕಿಗಳು ಹಾರಬಲ್ಲವು. ನೀನು ಹಾರಬಲ್ಲೆಯಾ?

ಮಾಲಿನಿ ಮಯ್ಯ ಅವರು ಸಂಪಾದಿಸಿದ “ಚಿಣ್ಣರ ಲೋಕದಲ್ಲಿ ಕಾರಂತರು’ ಪುಸ್ತಕದಿಂದ
 

Advertisement

Udayavani is now on Telegram. Click here to join our channel and stay updated with the latest news.

Next