Advertisement
ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಶೇಷಗಿರಿ ಕಲಾ ತಂಡ ನಿತ್ಯ ನಿರಂತರವಾಗಿ ರಂಗ ಧ್ಯಾನದಲ್ಲಿ ತೊಡಗಿ ಇಡೀ ಕರ್ನಾಟಕದ ಖ್ಯಾತ ರಂಗ ನಿರ್ದೇಶಕರು, ಕಲಾವಿದರನ್ನು ಸೆಳೆದಿದೆ. ಶೇಷಗಿರಿ ರಂಗ ಮಂದಿರದಲ್ಲಿ ರಂಗ ಪ್ರದರ್ಶನ ನೀಡುವುದೇ ಒಂದು ಹೆಮ್ಮೆ ಹಾಗೂ ಸಂಭ್ರಮ ಎಂಬ ಭಾವನೆ ನಾಡಿನ ಕಲಾವಿದರದ್ದಾಗಿದೆ.
Related Articles
Advertisement
ಇದೇ ರಂಗಭೂಮಿಯಲ್ಲಿ ತರಬೇತಿ ಪಡೆದ ಮಕ್ಕಳ ನಾಟಕ ಹಳ್ಳಿಯ ಸಿರಿ ಬೆಂಗಳೂರಿನಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿಗೆ ಪಾತ್ರವಾಗಿದೆ. ಪಂಜರ ಶಾಲೆ, ಬೆಟ್ಟಕ್ಕೆ ಚಳಿಯಾದರೆ, ಸತ್ರು ಅಂದ್ರೆ ಸಾಯ್ತಾರಾ, ನಾನೂ ಗಾಂಧಿ ಆಗ್ತೀನೆ, ಓ ಮಗು ನೀ ನಗು, ಪುಷ್ಪರಾಣಿ, ನಕ್ಕಳಾ ರಾಜಕುಮಾರಿ, ಮಾಯಾ ಕನ್ನಡಿ, ಬೆಳಕು ಹಂಚಿದ ಬಾಲಕ, ನಾಯಿ ತಿಪ್ಪ, ಬೆಳಕಿನೆಡೆಗೆ, ಪುಣ್ಯಕೋಟಿ ಸೇರಿದಂತೆ ಹತ್ತು ಹಲವು ನಾಟಕಗಳು ಮಕ್ಕಳಿಂದ ಪ್ರದರ್ಶನಗೊಂಡಿದ್ದು ಮೆಚ್ಚುಗೆ ಪಡೆದಿವೆ. ಈಗ ಶಂಭು ಬಳಿಗಾರ ಅವರ ತೊಗರಿತಿಪ್ಪ ನಾಟಕ ನಿರ್ದೇಶಕ ಕರಿಯಪ್ಪ ಕವಲೂರ ಅವರ ನಿರ್ದೇಶನದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ.
ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಕೊಡುಗೆ ಇಲ್ಲಿಯ ರಂಗಮಂದಿರಕ್ಕೆ ಹೆಚ್ಚಿರುವುದರಿಂದ ಸಿ.ಎಂ.ಉದಾಸಿ ಕಲಾಕ್ಷೇತ್ರ ಎಂದು ಹೆಸರಿಡಲಾಗಿದೆ. ಇಷ್ಟೆಲ್ಲ ಪ್ರಖ್ಯಾತಿಯ ಹಿಂದೆ ಸಮಯ, ಹಣ, ಕ್ರಿಯಾಶೀಲತೆಯನ್ನು ಒಗ್ಗೂಡಿಸಿ ಒಂದು ಪುಟ್ಟ ಗ್ರಾಮವನ್ನು ರಂಗ ಗ್ರಾಮವನ್ನಾಗಿ ರಾಷ್ಟ್ರಮಟ್ಟದಲ್ಲಿ ಹೆಸರಾಗುವಂತೆ ಮಾಡಿರುವುದು ಒಬ್ಬ ಪೋಸ್ಟ್ ಮಾಸ್ಟರ್ ಪ್ರಭು ಗುರಪ್ಪನವರ ಎಂಬುದನ್ನು ಹೇಳಲೇಬೇಕು. ಇವರೊಂದಿಗಿರುವ ಹುಡುಗರು ಕಲಾವಿದರಾಗಿ, ಸಂಘಟಕರಾಗಿ, ಸ್ವಯಂ ಸೇವಕರಾಗಿ, ಮಕ್ಕಳ ರಂಗಭೂಮಿಯ ಮೂಲಕವೂ ಕೆಲವರು ಬಂದು ಈಗ ಶೇಷಗಿರಿಯ ರಂಗ ಕಲೆಯನ್ನು ಜೀವಂತವಾಗಿಡಲು ಜೀವ ಸವೆಸುತ್ತಿದ್ದಾರೆ.
ದಿ.ಸಿ.ಎಂ.ಉದಾಸಿ ಅವರು ಹಳ್ಳಿ ಹುಡುಗರ ನಾಟಕ ನೋಡಿ ಒಳ್ಳೆಯದು ಅಂದು ಒಂದು ಕೋಟಿ ರೂ ಖರ್ಚಿನಲ್ಲಿ ರಂಗ ಮಂದಿರ ಕೊಟ್ಟರು. ಈಗ ಮತ್ತೆ ಒಂದು ಕೋಟಿ ರೂ. ವೆಚ್ಚದಲ್ಲಿ ನವೀಕರಣ ನಡೀತಿದೆ. –ಪ್ರಭು ಗುರಪ್ಪನವರ, ಶೇಷಗಿರಿ ಕಲಾ ತಂಡದ ಅಧ್ಯಕ್ಷರು.