Advertisement

ವಿದೇಶದಲ್ಲಿದ್ದರೂ ಕನ್ನಡ ಪ್ರೀತಿ ಹೆಮ್ಮೆಯ ಸಂಗತಿ

02:52 PM Mar 25, 2022 | Kavyashree |

ಬೆಳಗಾವಿ: ವಿದೇಶದಲ್ಲಿ ನೆಲಸಿದ್ದ ಲಿಂ| ಸೋಮಶೇಖರ ಆರ್‌ ಪಾಟೀಲರು ಕಳೆದ ಐದು ದಶಕಗಳ ಹಿಂದೆಯೇ ಕಥೆ, ಕವನ, ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ನಿಜಕ್ಕೂ ಕನ್ನಡ ನಾಡಿಗೆ ಹೆಮ್ಮೆಯ ಸಂಗತಿ ಎಂದು ಖ್ಯಾತ ಸ್ತ್ರೀರೋಗ ತಜ್ಞೆ ಡಾ. ವನಿತಾ ಮೆಟಗುಡ್ಡ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ನಡೆದ ಆಸ್ಟ್ರೇಲಿಯಾದ ನಿವಾಸಿಯಾಗಿದ್ದ ಲಿಂ| ಸೋಮಶೇಖರ ಆರ್‌ ಪಾಟೀಲ ಅವರ ಭಾವ ಬಂಧ ಕಥಾ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅವರು, ಭಾವ ಬಂಧ ಕಥಾ ಸಂಕಲನದ ಕಥಾ ಸಾಹಿತ್ಯವೆಂಬುದು ಸಾಹಿತ್ಯ ಪ್ರಕಾರಗಳಲ್ಲಿಯೇ ಅತೀ ಅಪ್ಯಾಯಮಾನವಾದುದು. ಕುತೂಹಲವೇ ಅದರ ಜೀವಾಳ. ದೇಶ, ಕಾಲ. ಪರಿಸರ, ಸುಖ ದುಃಖದ ಕುಲಮೆಯಲ್ಲಿ ಬೆಳೆದು ಅಂತ್ಯದಲ್ಲಿ ತನ್ನೆಲ್ಲ ಜಾಣ್ಮೆಯನ್ನು ತೋರುವ ಗತ್ತುಗಾರಿಕೆಯೇ ಕಥೆ. ಲಿಂ| ಸೋಮಶೇಖರ ಪಾಟೀಲ ಅವರು ತಮ್ಮ ಭಾವ ಮೋಡದಲ್ಲಿ ಬಂದಿಯಾದ ಹಲವಾರು ಕಥೆಗಳನ್ನು ಈ ಭಾವ ಬಂಧ ಪುಸ್ತಕದಲ್ಲಿ ಓದುಗರಿಗೆ ಆಸಕ್ತಿ ಮೂಡುವ ಹಾಗೆ ಹಂಚಿಕೊಂಡಿದ್ದಾರೆ ಎಂದು ಹೇಳಿದರು.

ಭಾವ ಬಂಧ ಕಥಾ ಸಂಕಲನದ ಪ್ರಕಾಶಕಿ ಡಾ| ವಿಜಯಾ ಪಾಟೀಲ ಮಾತನಾಡಿ, ವಿದೇಶದಲ್ಲಿ ತಮ್ಮ ಕುಟುಂಬ ನೆಲಸಿದ್ದರೂ ಸಹ ಕನ್ನಡ ನೆಲದ ಪ್ರೀತಿ, ಆಸಕ್ತಿ ಒಂದಿಷ್ಟೂ ಕಡಿಮೆ ಆಗದ ಹಾಗೇ ಸಾಹಿತ್ಯದ ಮೂಲಕ ನಂಟನ್ನು ಬೆಸೆದು ಸಾಹಿತ್ಯಿಕವಾಗಿ ಕನ್ನಡಿಗರ ಮನ ತಟ್ಟುವ ಕಾರ್ಯವನ್ನು ಲಿಂ| ಸೋಮಶೇಖರ ಪಾಟೀಲರು ಮಾಡಿದ್ದು ಕೃತಿ ಲೋಕಾರ್ಪಣೆ ಮಾಡುವಲ್ಲಿ ಸಹಾಯ ಮಾಡಿದ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಸಾಹಿತಿಗಳ ನೆರವನ್ನು ನೆನಪಿಸಿಕೊಂಡರು.

ಹಿರಿಯ ಸಾಹಿತಿ ಗುರುದೇವಿ ಹುಲ್ಲೆಪ್ಪನವರಮಠ ಕೃತಿ ಪರಿಚಯಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ವಿದೇಶದಲ್ಲಿ ನೆಲೆಸಿ ಸಾಹಿತ್ಯದ ಕೃಷಿ ಮಾಡಿದ್ದಲ್ಲದೆ ಕನ್ನಡ ಸಾಹಿತ್ಯ ಪರಿಷತ್‌ ಮೂಲಕ ಲೋಕಾರ್ಪಣೆ ಮಾಡಿರುವುದು ಸಾಹಿತ್ಯ ಪರಿಷತ್‌ ನ ನಾಡು, ನುಡಿ, ಸಾಹಿತ್ಯದ ಮೇಲಿರುವ ಪ್ರೀತಿ-ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು.

Advertisement

ಕನ್ನಡ ಇನ್ನೂ ಹೆಚ್ಚು ಶ್ರೀಮಂತಗೊಳ್ಳಬೇಕಾದರೆ ಯುವ ಪೀಳಿಗೆ ಇಂತಹ ಸಾಹಿತ್ಯದ ಕೃಷಿಯಲ್ಲಿ ತೊಡಗಿಕೊಳ್ಳಬೇಕಿರುವುದು ಅತೀ ಅವಶ್ಯವಿದೆ. ಮುಂಬರುವ ದಿನಗಳಲ್ಲಿ ಸಾಹಿತ್ಯ ಪರಿಷತ್‌ ಮೂಲಕ ಸಾಹಿತ್ಯಿಕ ಚಟುವಟಿಕೆಗಳಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಯಾನಂದ ಧನವಂತ, ಡಾ. ಬಸವರಾಜ ಮೆಟಗುಡ್ಡ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಅಧ್ಯಕ್ಷ ಮೋಹನ ಪಾಟೀಲ, ಕಸಾಪ ಬೆಳಗಾವಿ ತಾಲೂಕಾ ಅಧ್ಯಕ್ಷ ಡಾ| ಸುರೇಶ ಹಂಜಿ, ಮುರುಗೇಶ ಶಿವಪೂಜಿಮಠ, ಸಾಹಿತಿಗಳಾದ ಜ್ಯೋತಿ ಬಾದಾಮಿ, ಹೇಮಾ ಸೋನೊಳ್ಳಿ, ಸುಮಾ ಪಾಟೀಲ, ರಾಜೇಶ್ವರಿ ಹಿರೇಮಠ, ನಂದಾ ಮಹಾಂತಶೆಟ್ಟಿ, ಸುಧಾ ಪಾಟೀಲ, ಶ್ರೀರಂಗ ಜೋಶಿ, ಮಲ್ಲಿಕಾರ್ಜುನ ಕೋಳಿ, ಈರಣ್ಣ ಜ್ಯೋತಿ, ಕಿರಣ ಸಾವಂತನವರ, ಆಕಾಶ್‌ ಥಬಾಜ, ಅಮೃತ ಚರಂತಿಮಠ, ಸುರೇಶ ಮರಲಿಂಗಣ್ಣವರ ಉಪಸ್ಥಿತರಿದ್ದರು.

ಆನಂದ ಚಿಟಗಿ ಸ್ವಾಗತಗೀತೆ ಹಾಡಿದರು. ನಂದಿತಾ ಮಾಸ್ತಿಹೊಳಿಮಠ ಮತ್ತು ಪ್ರತಿಭಾ ಕಳ್ಳಿಮಠ ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು. ಎಂ.ವೈ ಮೆಣಶಿನಕಾಯಿ ಸ್ವಾಗತಿಸಿದರು. ಶಿವಾನಂದ ಕಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೆಶ ಬಾಗೇವಾಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next